ಪಾಕಿಸ್ತಾನ್ ಮಾಜಿ ನಾಯಕ ವಾಸಿಂ ಅಕ್ರಂ (Wasim Akram) ತಮ್ಮ ಮಗಳು ಐಲಾ ಜೊತೆಗಿನ ಸುಂದರ ಕ್ಷಣಗಳ ವೀಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಈ ವೀಡಿಯೋ ತುಣುಕನ್ನು ಹಂಚಿಕೊಳ್ಳಲು ಮುಖ್ಯ ಕಾರಣ ಇಬ್ಬರು ಭೇಟಿಯಾಗಿ ತಿಂಗಳುಗಳೇ ಕಳೆದಿರುವುದು. ಹೌದು, ಕೋವಿಡ್ -19 ಪ್ರಯಾಣ ನಿರ್ಬಂಧಗಳಿಂದಾಗಿ ಅಕ್ರಂ ಕಳೆದ 10 ತಿಂಗಳುಗಳಿಂದ ತನ್ನ ಕುಟುಂಬದಿಂದ ದೂರವಾಗಿದ್ದರು. ಅಕ್ರಂ ಪಾಕಿಸ್ತಾನದಲ್ಲಿದ್ದರೆ, ಅವರ ಹೆಂಡತಿ ಮತ್ತು ಮಗಳು ಆಸ್ಟ್ರೇಲಿಯಾದಲ್ಲಿದ್ದರು.
ಇದೀಗ 55 ವರ್ಷದ ಅಕ್ರಂ, ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿ 14 ದಿನಗಳ ಕ್ವಾರಂಟೈನ್ ಮುಗಿಸಿ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾರೆ. ಇದೇ ವೇಳೆ ಮಗಳನೊಂದಿಗಿನ ಸುಂದರ ಕ್ಷಣಗಳನ್ನು ಅಕ್ರಂ ಅವರ ಪತ್ನಿ ಶನಿಯರಾ ಅಕ್ರಮ್ ಚಿತ್ರೀಕರಿಸಿದ್ದಾರೆ. ಈ ವಿಡಿಯೋವನ್ನು ಮಾಜಿ ಎಡಗೈ ವೇಗಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು “ಕೊನೆಗೂ 10 ತಿಂಗಳ ನಂತರ ನನ್ನ ಮಗಳನ್ನು ನೋಡಿದೆ,” ಎಂದು ಸಂತಸವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ ತಾನು ಇಲ್ಲದಿದ್ದರೂ, ತಮ್ಮ “ಪುಟ್ಟ ರಾಜಕುಮಾರಿ” ಯನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ತನ್ನ ಪತ್ನಿ, ಆಸ್ಟ್ರೇಲಿಯಾದ ಸಾಮಾಜಿಕ ಕಾರ್ಯಕರ್ತೆ ಶನಿಯೆರಾ ಅವರಿಗೆ ತನ್ನ ಕೃತಜ್ಞತೆಗಳು ಎಂದು ವಾಸಿಂ ಅಕ್ರಂ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಭಾರತದ ಖ್ಯಾತ ಕ್ರಿಕೆಟ್ ಕಾಮೆಂಟೇಟರ್ ಹರ್ಷ ಭೋಗ್ಲೆ ಪ್ರತಿಕ್ರಿಯಿಸಿದ್ದು, “ಲವ್ಲಿ…ಭಯಂಕರ ಬೌಲರ್ನ ಮುಗ್ದತೆ ಎಂದು ಬರೆದುಕೊಂಡಿದ್ದಾರೆ.
Finally seeing my daughter after 10 months apart! Thank you @iamshaniera for raising such a beautiful little princess while we have been apart #HappyDays #Australia pic.twitter.com/EbyCTOKzZp
— Wasim Akram (@wasimakramlive) September 4, 2021
ಇನ್ನು ಹಲವರು ಅಕ್ರಂ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ತುಂಬಾ ದಿನಗಳ ಬಳಿಕ ಮಗಳ ಭೇಟಿಯ ಕ್ಷಣಗಳು ಅದ್ಭುತವಾಗಿರುತ್ತವೆ. ಅಂತಹ ಅನುಭವ ನನಗೂ ಆಗಿತ್ತು. ಈಗ ನಿಮಗೂ ಆಗಿದೆ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಸ್ವಿಂಗ್ ಮಾಂತ್ರಿಕ ವಿಡಿಯೋಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: T20 World Cup 2021: ನಮಗಲ್ಲ, ಭಾರತಕ್ಕೆ ಟೆನ್ಶನ್ ಜಾಸ್ತಿ ಎಂದ ಪಾಕ್ ನಾಯಕ
ಇದನ್ನೂ ಓದಿ: ಅತ್ಯುತ್ತಮ ಮೈಲೇಜ್ ನೀಡುವ ಅತೀ ಕಡಿಮೆ ಬೆಲೆಯ ಸ್ಕೂಟರ್ ಬಿಡುಗಡೆ
ಇದನ್ನೂ ಓದಿ: Crime News: ಸಿಂಧೂರ ಹಚ್ಚಿದಕ್ಕೆ ಮಗಳನ್ನು ಕೊಂದ ತಾಯಿ
(Wasim Akram Meets His Daughter After Being “10 Months Apart”)