Updated on: Sep 02, 2021 | 9:41 PM
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ವಿದ್ಯುತ್ ವಾಹನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ವಾಹನ ತಯಾರಕ ಕಂಪೆನಿಗಳು ಕೂಡ ಎಲೆಕ್ಟ್ರಿಕ್ ವಿಭಾಗದಲ್ಲಿ ಹೊಸ ಮಾದರಿಗಳ ವಾಹನಗಳನ್ನು ಪರಿಚಯಿಸುವಲ್ಲಿ ನಿರತರಾಗಿದ್ದಾರೆ.
ಏತನ್ಮಧ್ಯೆ, ದೆಹಲಿ ಮೂಲದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಟಿಎನ್ಆರ್ ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸ್ಟೆಲ್ಲಾವನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಇದೀಗ ಕಂಪನಿಯು ಸ್ಕೂಟರ್ ಹೆಸರನ್ನು ಬದಲಾಯಿಸಿ 'ಎಸ್ಟಿಲಾ' ಎಂದು ಮರು ಪರಿಚಯಿಸಿದೆ.
TNR ಕಂಪೆನಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಸೊಗಸಾದ ರೆಟ್ರೊ ನೋಟ ಲುಕ್ ನೀಡಲಾಗಿದೆ. ಸುಧಾರಿತ ಫೀಚರ್ಸ್ ಮತ್ತು ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದ್ದು, ದೈನಂದಿನ ಬಳಕೆಗೆ ಈ ಸ್ಕೂಟರ್ ಸೂಕ್ತ ಆಯ್ಕೆ ಎಂದು ಕಂಪೆನಿ ಹೇಳಿಕೊಂಡಿದೆ.
ಅದರಂತೆ ಎಸ್ಟಿಲಾ ಸ್ಕೂಟರ್ನಲ್ಲಿ ದುಬಾರಿ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ನೀಡಲಾಗಿರುವ ಕೀಲೆಸ್ ಎಂಟ್ರಿ, ಆಂಟಿ ಥೆಫ್ಟ್ ಅಲಾರಂ, ಯುಎಸ್‌ಬಿ ಚಾರ್ಜಿಂಗ್ ಮತ್ತು ಸ್ವೈಪ್ ಸಿಸ್ಟಂನಂತಹ ಫೀಚರ್ಗಳನ್ನು ಇದರಲ್ಲೂ ನೀಡಿರುವುದು ವಿಶೇಷ.
TNR ಎಸ್ಟಿಲಾ ಸ್ಕೂಟರ್ ಎರಡು ಬ್ಯಾಟರಿ ಆಯ್ಕೆಯಲ್ಲಿ ಲಭ್ಯವಿದೆ. ಒಂದರಲ್ಲಿ 60V 28 ah ಸಾಮರ್ಥ್ಯದ ಲಿಡ್ ಆಸಿಡ್ ಬ್ಯಾಟರಿ, ಮತ್ತೊಂದರಲ್ಲಿ ಲಿಥಿಯಂ ಐ-ಆನ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಲೀಡ್ ಆಸಿಡ್ ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಲು 6 ರಿಂದ 8 ಗಂಟೆ ತೆಗೆದುಕೊಳ್ಳಲಿದೆ. ಇದೇ ವೇಳೆ ಲಿಥಿಯಂ ಐ-ಆನ್ ಬ್ಯಾಟರಿ ಸುಮಾರು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.
ಇನ್ನು ಈ ಸ್ಕೂಟರ್ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿಕೊಂಡರೆ ಸುಮಾರು 70 ರಿಂದ 80 ಕಿಮೀ ಮೈಲೇಜ್ (ರೇಂಜ್) ಸಿಗಲಿದೆ ಎಂದು ಟಿಎನ್ಆರ್ ಕಂಪೆನಿ ಹೇಳಿಕೊಂಡಿದೆ.
ಅತ್ಯಂತ ಆಕರ್ಷಕ ಲುಕ್ ಮತ್ತು ಶಕ್ತಿಯುತ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ಸ್ಕೂಟರ್‌ನ ಆರಂಭಿಕ ಬೆಲೆ ಕೇವಲ 50,000 ರೂಪಾಯಿ (ಎಕ್ಸ್ ಶೋ ರೂಂ ಬೆಲೆ, ದೆಹಲಿ). ಪ್ರಸ್ತುತ ರಸ್ತೆಗಿಳಿದಿರುವ ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಎಸ್ಟಿಲಾ ಅತೀ ಕಡಿಮೆಯ ಎಲೆಕ್ಟ್ರಿಕ್ ಸ್ಕೂಟರ್ ಎನಿಸಿಕೊಂಡಿದೆ.