ಕೇವಲ ಒಂದು ಪಂದ್ಯ ಗೆದ್ದು ಸೆಮಿಫೈನಲ್​ಗೆ ಪ್ರವೇಶಿಸಿದ ಇಂಡಿಯಾ ಚಾಂಪಿಯನ್ಸ್

World Championship of Legends 2025: ವರ್ಲ್ಡ್​ ಚಾಂಪಿಯನ್​​ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ತಂಡ ಗೆದ್ದಿರುವುದು ಕೇವಲ ಒಂದು ಮ್ಯಾಚ್ ಮಾತ್ರ, ಪಾಕಿಸ್ತಾನ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿದ್ದ ಇಂಡಿಯಾ ಆ ಬಳಿಕ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ಚಾಂಪಿಯನ್ಸ್ ತಂಡಗಳ ವಿರುದ್ಧ ಸೋಲನುಭವಿಸಿತ್ತು. ಆದರೆ ನಿರ್ಣಾಯಕವಾಗಿದ್ದ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವಲ್ಲಿ ಇಂಡಿಯಾ ಚಾಂಪಿಯನ್ಸ್ ಯಶಸ್ವಿಯಾಗಿದೆ.

ಕೇವಲ ಒಂದು ಪಂದ್ಯ ಗೆದ್ದು ಸೆಮಿಫೈನಲ್​ಗೆ ಪ್ರವೇಶಿಸಿದ ಇಂಡಿಯಾ ಚಾಂಪಿಯನ್ಸ್
India Champions

Updated on: Jul 30, 2025 | 7:29 AM

ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 15ನೇ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಜಯಗಳಿಸಿದೆ. ಈ ಜಯದೊಂದಿಗೆ ಭಾರತ ತಂಡ ಸೆಮಿಫೈನಲ್ ಗೆ ಎಂಟ್ರಿಕೊಟ್ಟಿದೆ. ಲೀಸೆಸ್ಟರ್​ಗ್ರೇಸ್ ಗ್ರೌಂಡ್ ಮೈದಾನದಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಚಾಂಪಿಯನ್ಸ್ ತಂಡದ ನಾಯಕ ಯುವರಾಜ್ ಸಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಆರಂಭಿಕನಾಗಿ ಕಣಕ್ಕಿಳಿದ ಕ್ರಿಸ್ ಗೇಲ್ ಕೇವಲ 9 ರನ್ ಗಳಿಸಿ ಔಟಾದರೆ, ಲಿಂಡ್ಲ್ ಸಿಮನ್ಸ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಚಾಡ್ವಿಕ್ ವಾಲ್ಟನ್ (0) ಹಾಗೂ ಪರ್ಕಿನ್ಸ್ (0) ಸೊನ್ನೆ ಸುತ್ತಿದರು.

ಈ ಹಂತದಲ್ಲಿ ಆಗಮಿಸಿದ ಕೀರನ್ ಪೊಲಾರ್ಡ್ ಮಾತ್ರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇಂಡಿಯಾ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ಪೊಲಾರ್ಡ್ 43 ಎಸೆತಗಳಲ್ಲಿ 8 ಸಿಕ್ಸ್ ಗಳೊಂದಿಗೆ ಅಜೇಯ 73 ರನ್ ಬಾರಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿತು.

145 ರನ್ ಗಳ ಸುಲಭ ಗುರಿ ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕರಾದ ರಾಬಿನ್ ಉತ್ತಪ್ಪ (8) ಹಾಗೂ ಶಿಖರ್ ಧವನ್ (25) ಬೇಗನೆ ಔಟಾದರು. ಇನ್ನು ಮೂರನೇ ಕ್ರಮಾಂಕದಲ್ಲಿ ಆಡಿದ ಗುರ್ಕೀರತ್ ಮನ್ 7 ರನ್ ಗಳಿಸಿ ಔಟಾದರು.

ಇದರ ಬೆನ್ನಲ್ಲೇ ಸುರೇಶ್ ರೈನಾ (7) ಕೂಡ ವಿಕೆಟ್ ಒಪ್ಪಿಸಿದ್ದಾರೆ. ಈ ವೇಳೆ ಕಣಕ್ಕಿಳಿದ ಸ್ಟುವರ್ಟ್ಬಿನ್ನಿ 4 ಸಿಕ್ಸ್ ಹಾಗೂ 3 ಫೋರ್ ಗಳೊಂದಿಗೆ 21 ಎಸೆತಗಳಲ್ಲಿ ಅಜೇಯ 50 ರನ್ ಚಚ್ಚಿದರು.

ಬಿನ್ನಿಗೆ ಉತ್ತಮ ಸಾಥ್ ನೀಡಿದ ಯುವರಾಜ್ ಸಿಂಗ್ 11 ಎಸೆತಗಳಲ್ಲಿ 21 ಬಾರಿಸಿದರೆ, ಯೂಸುಫ್ ಪಠಾಣ್ 7 ಎಸೆತಗಳಲ್ಲಿ 21 ರನ್ ಚಚ್ಚಿದರು. ಈ ಮೂಲಕ 13.2 ಓವರ್‌ಗಳಲ್ಲಿ 148 ರನ್ ಬಾರಿಸಿ ಇಂಡಿಯಾ ಚಾಂಪಿಯನ್ಸ್ 5 ವಿಕೆಟ್ ಗಳ ಗೆಲುವು ದಾಖಲಿಸಿದೆ.

ಸೆಮಿಫೈನಲ್​ಗೆ ಇಂಡಿಯಾ:

ಇಂಡಿಯಾ ಚಾಂಪಿಯನ್ಸ್ ತಂಡವು ಸೆಮಿಫೈನಲ್​ಗೆ ಪ್ರವೇಶಿಸಲು ಈ ಪಂದ್ಯ ನಿರ್ಣಾಯಕವಾಗಿತ್ತು. ಏಕೆಂದರೆ ಒಂದೇ ಒಂದು ಪಂದ್ಯದಲ್ಲಿ ಗೆಲ್ಲದ ಇಂಡಿಯಾ ಒಂದೆಡೆ ಇದ್ದರೆ, ಒಂದು ಮ್ಯಾಚ್​ನಲ್ಲಿ ಗೆದ್ದ ಇಂಗ್ಲೆಂಡ್ ಚಾಂಪಿಯನ್ಸ್ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿತ್ತು. ಇನ್ನು ಇಂಡಿಯಾ ವಿರುದ್ಧ ಗೆದ್ದರೆ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಕ್ಕೂ ಸೆಮಿಫೈನಲ್​ಗೆ ಪ್ರವೇಶಿಸಲು ಅವಕಾಶವಿತ್ತು.

ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಇಂಡಿಯಾ ಚಾಂಪಿಯನ್ಸ್ ತಂಡವು ನೆಟ್ ರನ್ ರೇಟ್​ನಲ್ಲಿ ಇಂಗ್ಲೆಂಡ್ ಚಾಂಪಿಯನ್ಸ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಸುರೇಶ್ ರೈನಾ , ಯುವರಾಜ್ ಸಿಂಗ್ (ನಾಯಕ) , ಯೂಸುಫ್ ಪಠಾಣ್ , ಸ್ಟುವರ್ಟ್ ಬಿನ್ನಿ , ಹರ್ಭಜನ್ ಸಿಂಗ್ , ಪಿಯೂಷ್ ಚಾವ್ಲಾ , ಅಭಿಮನ್ಯು ಮಿಥುನ್ , ವರುಣ್ ಆರೋನ್ , ಪವನ್ ನೇಗಿ , ಗುರ್ಕೀರತ್ ಸಿಂಗ್ ಮಾನ್.

ಇದನ್ನೂ ಓದಿ: ಜಯ ಜಯ ಜಯ ಜಯ ಜಯಯೇ… ಆಸ್ಟ್ರೇಲಿಯಾ ದಾಖಲೆಯ ಜಯಭೇರಿ

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರಿಸ್ ಗೇಲ್ (ನಾಯಕ) , ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್) , ಡ್ವೇನ್ ಸ್ಮಿತ್ , ಲೆಂಡ್ಲ್ ಸಿಮ್ಮನ್ಸ್ , ಡ್ವೇನ್ ಬ್ರಾವೋ , ಕೀರನ್ ಪೊಲಾರ್ಡ್ , ಆಶ್ಲೇ ನರ್ಸ್ , ವಿಲಿಯಂ ಪರ್ಕಿನ್ಸ್ , ಶೆಲ್ಡನ್ ಕಾಟ್ರೆಲ್ , ಡೇವ್ ಮೊಹಮ್ಮದ್ , ನಿಕಿತಾ ಮಿಲ್ಲರ್.

Published On - 7:26 am, Wed, 30 July 25