IND vs ENG: ಅದನ್ನ ಹೇಳೋಕೆ ನೀನ್ಯಾರು… ಇಂಗ್ಲೆಂಡ್ನಲ್ಲಿ ಗೌತಮ್ ಗಂಭೀರ್ ಕಿರಿಕ್
India vs England 5th Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಗುರುವಾರದಿಂದ (ಜುಲೈ 31) ಶುರುವಾಗಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ ಭಾರತ ತಂಡವು ಸರಣಿಯನ್ನು 2-2 ಸಮಬಲದಲ್ಲಿ ಡ್ರಾಗೊಳಿಸಬಹುದು.

ಭಾರತ – ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವಿವಾದ ಸೃಷ್ಟಿಯಾಗಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಕೆನ್ಸಿಂಗ್ಟನ್ ಓವಲ್ ಮೈದಾನ ಕ್ಯುರೇಟರ್ ಲೀ ಫೋರ್ಟೀಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ನಡುವೆ ಗಂಭೀರ್ ಅಶ್ಲೀಲ ಪದಗಳನ್ನು ಪ್ರಯೋಗಿಸಿದ ಗಂಭೀರ ಆರೋಪ ಕೇಳಿಬಂದಿದೆ.
ಮಾತಿನ ಚಕಮಕಿಗೆ ಕಾರಣವೇನು?
ಮಂಗಳವಾರ ಟೀಮ್ ಇಂಡಿಯಾ ಆಟಗಾರರು ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದರು. ಈ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಇತರೆ ಸಿಬ್ಬಂದಿಗಳು ಪಿಚ್ ನೋಡಲು ತೆರಳಿದ್ದಾರೆ. ಅತ್ತ ಪಿಚ್ ಸಿದ್ಧಪಡಿಸುವಲ್ಲಿ ನಿರತರಾಗಿದ್ದ ಲೀ ಫೋರ್ಟಿಸ್ 2.5 ಮೀಟರ್ ದೂರ ನಿಲ್ಲುವಂತೆ ಸೂಚಿಸಿದ್ದಾರೆ. ಅಲ್ಲದೆ ಪಿಚ್ ಬಳಿ ಹಾಕಿದ್ದ ಹಗ್ಗವನ್ನು ದಾಟಿ ಬರದಂತೆ ತಿಳಿಸಿದ್ದಾರೆ.
ಗಂಭೀರ್ ಗರಂ:
ಲೀ ಫೋರ್ಟಿಸ್ ಸೂಚನೆಯಿಂದ ಗೌತಮ್ ಗಂಭೀರ್ ಕೆರಳಿದ್ದು, ಕ್ಯುರೇಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಇಬ್ಬರು ನಡುವೆ ವಾಗ್ವಾದ ಶುರುವಾಗಿದ್ದು, ಈ ವೇಳೆ ಮೈದಾನ ಸಿಬ್ಬಂದಿ ಕಡೆ ಬೆರಳು ತೋರಿಸಿ ನಾವೇನು ಮಾಡಬೇಕೆಂದು ನೀ ಹೇಳಬೇಕಿಲ್ಲ. ನೀನು ಕೇವಲ ಮೈದಾನದ ಸಿಬ್ಬಂದಿ ಅಷ್ಟೇ. ಅದಕ್ಕಿಂತ ದೊಡ್ಡ ವ್ಯಕ್ತಿಯೇನಲ್ಲ ಎಂದು ಗಂಭೀರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಲೀ ಫೋರ್ಟಿಸ್ ಈ ಬಗ್ಗೆ ನಾನು ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಗಂಭೀರ್, ಅಶ್ಲೀಲ ಪದ ಪ್ರಯೋಗದೊಂದಿಗೆ ದೂರು ದಾಖಲಿಸುವಂತೆ ಸೂಚಿಸಿದ್ದಾರೆ. ಇದೀಗ ಗಂಭೀರ್ ಹಾಗೂ ಫೋರ್ಟಿಸ್ ನಡುವಣ ವಾಕ್ಸಮರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಂಭೀರ್ ವಿರುದ್ಧ ದೂರು:
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಅಶ್ಲೀಲ ಪದ ಪ್ರಯೋಗಗಳೊಂದಿಗೆ ನನ್ನ ಕೆಲಸಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿದ್ದಾರೆ ಎಂದು ಕ್ಯುರೇಟರ್ ಲೀ ಫೋರ್ಟೀಸ್ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ದೂರು ಸಲ್ಲಿಸಿದ್ದಾರೆ. ಹೀಗಾಗಿ ಗಂಭೀರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಸಿಬಿ ಬಿಸಿಸಿಐಗೆ ಮನವಿ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಜಯ ಜಯ ಜಯ ಜಯ ಜಯಯೇ… ಆಸ್ಟ್ರೇಲಿಯಾ ದಾಖಲೆಯ ಜಯಭೇರಿ
ಸಿತಾಂಶು ಕೊಟಕ್ ಸ್ಪಷ್ಟನೆ:
ಈ ಘಟನೆ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್, ‘ನಾವು ಪಿಚ್ ಅನ್ನು ಪರಿಶೀಲಿಸಲು ತೆರಳಿದಾಗ, ಮೈದಾನದ ಸಿಬ್ಬಂದಿ ಬಂದು ವಿಕೆಟ್‌ನಿಂದ 2.5 ಮೀಟರ್ ದೂರದಲ್ಲಿ ನಿಂತು ಹಗ್ಗದ ಹೊರಗಿನಿಂದ ವಿಕೆಟ್ ಅನ್ನು ನೋಡಬೇಕೆಂದು ತಿಳಿಸಿದರು. ಆದರೆ ಭಾರತೀಯ ತಂಡದ ಸದಸ್ಯರು ಸ್ಪೈಕ್ ಶೂಗಳನ್ನು ಧರಿಸಿರಲಿಲ್ಲ. ಹೀಗಾಗಿ ನಾವು ಪಿಚ್ಗೆ ತೆರಳಿದ್ದರೂ ಯಾವುದೇ ಅಪಾಯವಿರಲಿಲ್ಲ. ಇದಾಗ್ಯೂ ಕ್ಯುರೇಟರ್ ನಮ್ಮನ್ನು ತಡೆದರು. ಇದರಿಂದ ಮಾತಿನ ಚಕಮಕಿ ನಡೆದಿದೆ ಎಂದು ಸ್ಪಷ್ಪಪಡಿಸಿದ್ದಾರೆ.
