AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಟೀಮ್ ಇಂಡಿಯಾದಲ್ಲಿ 3 ಬದಲಾವಣೆ ಬಹುತೇಕ ಖಚಿತ

India vs England 5th Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಗುರುವಾರದಿಂದ (ಜುಲೈ 31) ಶುರುವಾಗಲಿದೆ. ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಿಂದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೊರಗುಳಿದಿದ್ದಾರೆ. ಹಾಗೆಯೇ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಆಕಾಶ್ ದೀಪ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ.

IND vs ENG: ಟೀಮ್ ಇಂಡಿಯಾದಲ್ಲಿ 3 ಬದಲಾವಣೆ ಬಹುತೇಕ ಖಚಿತ
Team India
ಝಾಹಿರ್ ಯೂಸುಫ್
|

Updated on: Jul 29, 2025 | 3:23 PM

Share

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ (Team India) ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಮೂರು ಬದಲಾವಣೆ ಮಾಡುವುದು ಬಹುತೇಕ ಖಚಿತ. ಏಕೆಂದರೆ ಈ ಪಂದ್ಯದಕ್ಕೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅಲಭ್ಯರಾಗಿದ್ದಾರೆ. ಹೀಗಾಗಿ ಅವರ ಬದಲಿಗೆ ಮತ್ತೋರ್ವ ವಿಕೆಟ್ ಕೀಪರ್ ಕಣಕ್ಕಿಳಿಯುವುದು ಖಚಿತ.

ರಿಷಭ್ ಪಂತ್ ಬದಲಿಗೆ ಯಾರು?

ಕಳೆದ ಎರಡು ಪಂದ್ಯಗಳಲ್ಲಿ ಗಾಯದಿಂದ ಬಳಲುತ್ತಿದ್ದ ರಿಷಭ್ ಪಂತ್ ಬದಲಿಯಾಗಿ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. ಹೀಗಾಗಿ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಐದನೇ ಪಂದ್ಯದ ಪ್ಲೇಯಿಂಗ್ ಇಲೆವೆನ್​ನಲ್ಲಿ ವಿಕೆಟ್ ಕೀಪರ್ ಆಗಿ ಧ್ರುವ್ ಜುರೇಲ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ತೊಡೆಸಂದು ನೋವಿನ  ಕಾರಣ ಕಳೆದ ಪಂದ್ಯದಲ್ಲಿ ಆಕಾಶ್ ದೀಪ್ ಕಣಕ್ಕಿಳಿದಿರಲಿಲ್ಲ. ಇದೀಗ ಅವರು ಸಂಪೂರ್ಣ ಫಿಟ್ ಆಗಿದ್ದು, ಐದನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಹೀಗಾಗಿ ಅವರು ಸಹ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಕಾಶ್ ದೀಪ್​ಗಾಗಿ ಯಾರು ಔಟ್?

ಬರ್ಮಿಂಗ್​ಹ್ಯಾಮ್ ಹಾಗೂ ಲಾರ್ಡ್ಸ್​ ಟೆಸ್ಟ್​ನಲ್ಲಿ ಕಣಕ್ಕಿಳಿದಿದ್ದ ಆಕಾಶ್ ದೀಪ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಓವಲ್​ ಮೈದಾನದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವರಿಗೆ ಮತ್ತೆ ಅವಕಾಶ ನೀಡಲಿದ್ದಾರೆ. ಇತ್ತ ಆಕಾಶ್ ದೀಪ್ ಎಂಟ್ರಿಯಿಂದಾಗಿ ಕಳೆದ ಮ್ಯಾಚ್​ನಲ್ಲಿ ಕಣಕ್ಕಿಳಿದಿದ್ದ ಅನ್ಶುಲ್ ಕಂಬೋಜ್ ಪ್ಲೇಯಿಂಗ್ ಇಲೆವೆನ್​ನಿಂದ ಹೊರಬೀಳಲಿದ್ದಾರೆ.

ಹಾಗೆಯೇ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ ಸಹ ಕಣಕ್ಕಿಳಿಯಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕಳೆದ ನಾಲ್ಕು ಮ್ಯಾಚ್​ಗಳಲ್ಲಿ ಬೆಂಚ್ ಕಾದಿದ್ದ ಅನುಭವಿ ಸ್ಪಿನ್ನರ್​ಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಅವರು ಸಹ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೊರಬೀಳುವ ಆಟಗಾರ ಯಾರು?

ಕುಲ್ದೀಪ್ ಯಾದವ್​ಗೆ ಅವಕಾಶ ಕಲ್ಪಿಸಲು ಭಾರತದ ಪ್ಲೇಯಿಂಗ್ ಇಲೆವೆನ್​​ನಿಂದ ಶಾರ್ದೂಲ್ ಠಾಕೂರ್ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಶಾರ್ದೂಲ್ 11 ಓವರ್​ಗಳಲ್ಲಿ 55 ರನ್ ನೀಡಿದ್ದರು. ಇದಾಗ್ಯೂ ವಿಕೆಟ್ ಪಡೆದಿರಲಿಲ್ಲ. ಹೀಗಾಗಿ ಅವರ ಬದಲಿಗೆ ಕುಲ್ದೀಪ್ ಯಾದವ್​ಗೆ ಚಾನ್ಸ್ ನೀಡಬಹುದು.

ಜಸ್​ಪ್ರೀತ್ ಬುಮ್ರಾ ಆಡ್ತಾರಾ?

ಐದನೇ ಟೆಸ್ಟ್ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ ಆಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ವೇಳೆ ಬುಮ್ರಾ ಹೊರಗುಳಿದರೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಕಣಕ್ಕಿಳಿಸಬಹುದು.

ಅಂದರೆ ಬುಮ್ರಾ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದರೆ, ಭಾರತ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ 4 ಬದಲಾವಣೆ ಕಂಡು ಬರಬಹುದು. ಇಲ್ಲದಿದ್ದರೆ ಟೀಮ್ ಇಂಡಿಯಾ 3 ಬದಲಾವಣೆಯೊಂದಿಗೆ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಅದರಂತೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್​ಮನ್ ಗಿಲ್, ಧ್ರುವ್ ಜುರೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್​ಪ್ರೀತ್ ಬುಮ್ರಾ.

ಇದನ್ನೂ ಓದಿ: ಜಯ ಜಯ ಜಯ ಜಯ ಜಯಯೇ… ಆಸ್ಟ್ರೇಲಿಯಾ ದಾಖಲೆಯ ಜಯಭೇರಿ

ಭಾರತ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅನ್ಶುಲ್ ಕಂಬೋಜ್, ಎನ್​. ಜಗದೀಸನ್ (ವಿಕೆಟ್ ಕೀಪರ್).