WCL 2025: ಭಾರತ vs ಪಾಕಿಸ್ತಾನ್ ನಡುವಣ ಪಂದ್ಯ ರದ್ದು

World Championship of Legends: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್ ಎಂಬುದು ಮಾಜಿ ಆಟಗಾರರ ಟಿ20 ಟೂರ್ನಿ. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ತಂಡಗಳ ಮಾಜಿ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ಈ ಆರು ತಂಡಗಳ ನಡುವೆ ಇಂಗ್ಲೆಂಡ್​ನಲ್ಲಿ ಟೂರ್ನಿ ನಡೆಯುತ್ತಿದೆ.

WCL 2025: ಭಾರತ vs ಪಾಕಿಸ್ತಾನ್ ನಡುವಣ ಪಂದ್ಯ ರದ್ದು
Ind Vs Pak

Updated on: Jul 20, 2025 | 8:22 AM

ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ (World Championship of Legends) ಇಂದು (ಜುಲೈ 20) ನಡೆಯಬೇಕಿದ್ದ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳ ನಡುವಣ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನ್ ವಿರುದ್ಧದ ಈ ಪಂದ್ಯದಿಂದ ಭಾರತೀಯ ಆಟಗಾರರು ಹಿಂದೆ ಸರಿದ ಹಿನ್ನಲೆಯಲ್ಲಿ ಮ್ಯಾಚ್ ಕ್ಯಾನ್ಸಲ್ ಮಾಡಲಾಗಿದೆ.  ಇದಕ್ಕೂ ಮುನ್ನ ಜುಲೈ 19 ರಂದು ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ತಿಳಿಸಿದ್ದರು. ಇತ್ತ ಐವರು ಪ್ರಮುಖ ಆಟಗಾರರು ಪಂದ್ಯದಿಂದ ಹಿಂದೆ ಸರಿದ ಬೆನ್ನಲ್ಲೇ ಇತರೆ ಆಟಗಾರರು ಕೂಡ ಅಲಭ್ಯರಾಗುವ ಸೂಚನೆ ಲಭಿಸಿತ್ತು.

ಇದರ ಬೆನ್ನಲ್ಲೇ ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಟೂರ್ನಿ ಆಯೋಜಕರು ಸೋಷಿಯಲ್ ಮೀಡಿಯಾದಲ್ಲಿ ಇಂದು ನಡೆಯಲಿರುವ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ನಡುವಣ ಪಂದ್ಯವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.

ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಲೀಗ್​​ನಲ್ಲಿ ನಾವು ಯಾವಾಗಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತೇವೆ. ನಮ್ಮ ಏಕೈಕ ಗುರಿ ಅಭಿಮಾನಿಗಳಿಗೆ ಕೆಲವು ಒಳ್ಳೆಯ, ಸಂತೋಷದ ಕ್ಷಣಗಳನ್ನು ನೀಡುವುದಾಗಿದೆ. ಈ ವರ್ಷ ಪಾಕಿಸ್ತಾನ್ ಹಾಕಿ ತಂಡ ಭಾರತಕ್ಕೆ ಬರಲಿದೆ ಎಂಬ ಸುದ್ದಿಯನ್ನು ಕೇಳಿದ ನಂತರ, ಭಾರತ-ಪಾಕಿಸ್ತಾನ್ ನಡುವಣ ವಾಲಿಬಾಲ್ ಪಂದ್ಯವನ್ನು ನೋಡಿದ ಬಳಿಕ, WCL ನಲ್ಲಿ ಭಾರತ vs ಪಾಕಿಸ್ತಾನ್ ಪಂದ್ಯವನ್ನು ಮುಂದುವರಿಸಲು ನಾವು ಯೋಚಿಸಿದ್ದೆವು.

ಈ ಮೂಲಕ ಪ್ರಪಂಚದಾದ್ಯಂತದ ಜನರಿಗೆ ಕೆಲವು ಸಂತೋಷಕರ ನೆನಪುಗಳನ್ನು ಸೃಷ್ಟಿಸಲು ಬಯಸಿದ್ದೆವು. ಆದರೆ ಬಹುಶಃ ಈ ಪ್ರಕ್ರಿಯೆಯಲ್ಲಿ, ನಾವು ಅನೇಕರ ಭಾವನೆಗಳನ್ನು ನೋಯಿಸಿದ್ದೇವೆ ಮತ್ತು ಕೆಲವರ ಭಾವನೆಗಳನ್ನು ಕಲಕಿದ್ದೇವೆ. ಹೀಗಾಗಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ನಡುವಣ ಪಂದ್ಯವನ್ನು ಕ್ಯಾನ್ಸಲ್ ಮಾಡಲು ನಿರ್ಧರಿಸಿದ್ದೇವೆ ಎಂದು ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಟೂರ್ನಿಯ ಆಯೋಜಕರು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ಮ್ಯಾಚ್ ರದ್ದುಪಡಿಸಿದ್ದೇಕೆ?

ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಅನೇಕರು ಪಾಕಿಸ್ತಾನ್ ವಿರುದ್ಧ ಭಾರತೀಯರು ಯಾವುದೇ ಪಂದ್ಯವಾಡಬಾರದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು. ಅದರಲ್ಲೂ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧ ಕಣಕ್ಕಿಳಿಯಲು ಮುಂದಾಗಿರುವ ಇಂಡಿಯಾ ಚಾಂಪಿಯನ್ಸ್ ಆಟಗಾರರ ದೇಶಪ್ರೇಮವನ್ನು ಪ್ರಶ್ನಿಸಲಾಗಿತ್ತು.

ಈ ಬಗ್ಗೆ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸುರೇಶ್ ರೈನಾ, ಶಿಖರ್ ಧವನ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ ಹಾಗೂ ಹರ್ಭಜನ್ ಸಿಂಗ್ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯಲು ನಿರಾಕರಿಸಿದ್ದರು. ಇದೀಗ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿರುವ ಆಟಗಾರರು ಕೂಡ ಪಾಕ್ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಪಾಕಿಸ್ತಾನ್ ಚಾಂಪಿಯನ್ಸ್ ಹಾಗೂ ಇಂಡಿಯಾ ಚಾಂಪಿಯನ್ಸ್ ನಡುವಣ ಮ್ಯಾಚ್​ ಅನ್ನು ಕ್ಯಾನ್ಸಲ್ ಮಾಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಭಲೇ ಬಟ್ಲರ್… ವಿಶ್ವ ದಾಖಲೆ ನಿರ್ಮಿಸಿದ ಜೋಸ್ ಬಟ್ಲರ್

ಇಂಡಿಯಾ ಚಾಂಪಿಯನ್ಸ್ ತಂಡ: ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಪಿಯೂಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ವರುಣ್ ಆರೋನ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಸಿದ್ದಾರ್ಥ್ ಕೌಲ್, ಗುರುಕೀರತ್ ಮಾನ್.

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್​ ತಂಡಗಳು:

  • ಇಂಡಿಯಾ ಚಾಂಪಿಯನ್ಸ್
  • ಪಾಕಿಸ್ತಾನ್ ಚಾಂಪಿಯನ್ಸ್
  • ಇಂಗ್ಲೆಂಡ್ ಚಾಂಪಿಯನ್ಸ್
  • ಆಸ್ಟ್ರೇಲಿಯಾ ಚಾಂಪಿಯನ್ಸ್
  • ವೆಸ್ಟ್ ಇಂಡೀಸ್ ಚಾಂಪಿಯನ್ಸ್
  • ಸೌತ್ ಆಫ್ರಿಕಾ ಚಾಂಪಿಯನ್ಸ್