ಐಪಿಎಲ್ 2022 ರ (IPL 2022) ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) 14 ಕೋಟಿ ನೀಡಿ ವೇಗದ ಬೌಲರ್ ದೀಪಕ್ ಚಹರ್ ಅವರನ್ನು ಖರೀದಿಸಿತ್ತು. ವಿಶೇಷ ಎಂದರೆ ಮೆಗಾ ಹರಾಜಿನ ಎರಡನೇ ದುಬಾರಿ ಆಟಗಾರ ಚಹರ್. ಆದರೆ ಮೆಗಾ ಹರಾಜಿನ ಬೆನ್ನಲ್ಲೇ 29ರ ಹರೆಯದ ಬೌಲರ್ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಸದ್ಯದ ಮಾಹಿತಿ ಪ್ರಕಾರ ದೀಪಕ್ ಚಹರ್ 8 ವಾರಗಳ ಕಾಲ ಕ್ರಿಕೆಟ್ ನಿಂದ ಹೊರಗುಳಿಯಬೇಕಾಗಿ ಬರಬಹುದು. ಹೀಗಾಗಿ ಅವರು ಐಪಿಎಲ್‌ನ ಮೊದಲಾರ್ಧಕ್ಕೆ ಲಭ್ಯವಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಕೂಡ ಖಚಿತವಾಗಿಲ್ಲ.
ಮತ್ತೊಂದೆಡೆ ಸಿಎಸ್‌ಕೆ ಓಪನರ್ ಮತ್ತು ಐಪಿಎಲ್‌ನ ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ರುತುರಾಜ್ ಗಾಯಕ್ವಾಡ್ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಕೈಗೆ ಗಾಯವಾಗಿರುವ ಕಾರಣ, ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಹಾಲಿ ಚಾಂಪಿಯನ್ ಸಿಎಸ್‌ಕೆ ಮಾರ್ಚ್ 26 ರಂದು ಕಳೆದ ವರ್ಷದ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಆದರೆ ಇನ್ನು ವಾರಗಳು ಮಾತ್ರ ಉಳಿದಿದ್ದರೂ ದೀಪಕ್ ಚಹರ್ ಹಾಗೂ ರುತುರಾಜ್ ಗಾಯಕ್ವಾಡ್ ಇನ್ನೂ ಕೂಡ ಸಂಪೂರ್ಣ ಫಿಟ್ ಆಗಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿರುವ CSK ಸಿಇಒ ವಿಶ್ವನಾಥನ್, ತಂಡದ ಆಡಳಿತವು ತನ್ನ ಪ್ರಮುಖ ಆಟಗಾರರ ಫಿಟ್ನೆಸ್ ಪತ್ರಕ್ಕಾಗಿ ಇನ್ನೂ ಕಾಯುತ್ತಿದೆ. ಚೆನ್ನೈನ ಉಳಿದ ಆಟಗಾರರು ಸೂರತ್‌ನ ಲಾಲಾಭಾಯಿ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ರುತುರಾಜ್ ಗಾಯಕ್ವಾಡ್ ಹಾಗೂ ದೀಪಕ್ ಚಹರ್ ಅವರ ಪ್ರಸ್ತುತ ಫಿಟ್‌ನೆಸ್ ಸ್ಥಿತಿಯ ಬಗ್ಗೆ ನಮಗೆ ತಿಳಿದಿಲ್ಲ. ಅವರು ಯಾವಾಗ ತಂಡವನ್ನು ಸೇರುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ಐಪಿಎಲ್ ಆಡುತ್ತಾರೋ ಇಲ್ಲವೇ ಎಂಬ ಅನುಮಾನಗಳು ಹುಟ್ಟಿಕೊಂಡಿದೆ.
ಇನ್ನು ಇಬ್ಬರೂ ಆಟಗಾರರು ಫಿಟ್ ಆಗಿದ್ದರೆ, ಬಿಸಿಸಿಐ ನಮಗೆ ಮಾಹಿತಿ ನೀಡಲಿದೆ. ಏಕೆಂದರೆ ದೀಪಕ್ ಚಹರ್ ಮತ್ತು ರುತುರಾಜ್ ಗಾಯಕ್ವಾಡ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ರಿಹ್ಯಾಬ್ ಮಾಡುತ್ತಿದ್ದಾರೆ. ಹೀಗಾಗಿ ಅವರ ಫಿಟ್ನೆಸ್ ರಿಪೋರ್ಟ್ ಬಿಸಿಸಿಐ ಕಡೆಯಿಂದ ಸಿಗಬೇಕಿದೆ. ಹೀಗಾಗಿ ಸಿಎಸ್‌ಕೆ ತಂಡದ ಇಬ್ಬರು ಯಾವಾಗ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬುದನ್ನು ನಾವು ಈಗಲೇ ಹೇಳಲಾಗುವುದಿಲ್ಲ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.
ಒಂದು ವೇಳೆ ಐಪಿಎಲ್ ಆರಂಭದ ವೇಳೆಗೆ ಗಾಯವು ಗುಣಮುಖವಾಗದಿದ್ದರೆ, ಮೊದಲಾರ್ಧವನ್ನು ಈ ಇಬ್ಬರು ಆಟಗಾರರು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇಬ್ಬರು ಸ್ಟಾರ್ ಆಟಗಾರರ ಅಲಭ್ಯತೆಯು ಸಿಎಸ್‌ಕೆ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ.
ಸಿಎಸ್‌ಕೆ ತಂಡ ಹೀಗಿದೆ: ತಂಡ: ಎಂಎಸ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹರ್, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಡೆವೊನ್ ಕಾನ್ವೇ, ಡ್ವೈನ್ ಪ್ರೀಟೊರಸ್, ಆಡಮ್ ಮಿಲ್ನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡನ್, ಭಗತ್ ವರ್ಮಾ.
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್