
ಪ್ರಸ್ತುತ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ (West Indies vs Australia) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಇದರ ನಡುವೆ ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿರುವ ಗಂಭೀರ ಆರೋಪವೊಂದು ಇದೀಗ ಬೆಳಕಿಗೆ ಬಂದಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿರುವ ವಿಂಡೀಸ್ ಕ್ರಿಕೆಟ್ ತಂಡದ ಆಟಗಾರನ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ. ಕೆರಿಬಿಯನ್ ಮಾಧ್ಯಮಗಳಲ್ಲಿನ ವರದಿಯ ಪ್ರಕಾರ, ವೆಸ್ಟ್ ಇಂಡೀಸ್ ಕ್ರಿಕೆಟಿಗನ ಮೇಲೆ 11 ಮಹಿಳೆಯರು ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಅವರಲ್ಲಿ ಒಬ್ಬರು ಅಪ್ರಾಪ್ತ ಬಾಲಕಿಯೂ ಸೇರಿದ್ದಾರೆ ಎಂದು ವರದಿಯಾಗಿದೆ. ಈ ಆರೋಪದ ನಂತರ, ಕ್ರಿಕೆಟ್ ವೆಸ್ಟ್ ಇಂಡೀಸ್ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಮಂಡಳಿ, ಆಟಗಾರನನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ.
ಕೆರಿಬಿಯನ್ ದೇಶ ಗಯಾನಾದ ‘ಕೈಟರ್’ ಸುದ್ದಿ ವೆಬ್‌ಸೈಟ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ಆರೋಪ ಬಹಿರಂಗವಾಗಿದೆ. ವರದಿಯ ಪ್ರಕಾರ, ಗಯಾನಾದ ಈ ಕ್ರಿಕೆಟಿಗನ ವಿರುದ್ಧ 11 ಮಹಿಳೆಯರು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಈ ಆಟಗಾರ ಪ್ರಸ್ತುತ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಈ ಆಟಗಾರ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಇಷ್ಟೇ ಅಲ್ಲ, ವಿಂಡೀಸ್ ಮಂಡಳಿಯು ಈ ಆಟಗಾರ ಯಾರು ಎಂಬುದನ್ನು ಬಹಿರಂಗಪಡಿಸದೆ, ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕೆರಿಬಿಯನ್ ಚಾನೆಲ್ ‘ಸ್ಪೋರ್ಟ್ಸ್ ಮ್ಯಾಕ್ಸ್ ಟಿವಿ’ ವಿಂಡೀಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಕಿಶೋರ್ ಶೈಲೋ ಅವರನ್ನು ಉಲ್ಲೇಖಿಸಿ, ‘ಈ ಘಟನೆ ಮತ್ತು ಆರೋಪಗಳಿಗೆ ಸಂಬಂಧಿಸಿದ ಸಂದರ್ಭಗಳ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಮಂಡಳಿಯು ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಆರೋಪಗಳ ಜೊತೆಗೆ, ಸಂತ್ರಸ್ತ ಮಹಿಳೆಯೊಬ್ಬರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವರ್ಷಗಳಿಂದ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿಯೂ ಹೊರಬಿದ್ದಿದೆ. ಸ್ಪೋರ್ಟ್ಸ್ ಮ್ಯಾಕ್ಸ್ ಟಿವಿಯ ವರದಿಯಲ್ಲಿ, ವಕೀಲರಾದ ನಿಗೆಲ್ ಹಗ್ ಅವರು 2 ವರ್ಷಗಳ ಹಿಂದೆ ಈ ವಿಷಯದಲ್ಲಿ ಮಹಿಳೆಯೊಬ್ಬರು ತಮ್ಮನ್ನು ಸಂಪರ್ಕಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಆರೋಪಿ ಕ್ರಿಕೆಟಿಗ ಕಳೆದ ವರ್ಷ (2024) ಆಸ್ಟ್ರೇಲಿಯಾ ಪ್ರವಾಸ ಮಾಡಿದ ವಿಂಡೀಸ್ ತಂಡದಲ್ಲಿದ್ದ ಆ ಕ್ರಿಕೆಟಿಗ ಗಬ್ಬಾದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದ ಗೆಲುವಿನಲ್ಲಿಯೂ ತಂಡದ ಭಾಗಿಯಾಗಿದ್ದರು ಎಂದು ವಕೀಲರು ಹೇಳಿಕೊಂಡಿದ್ದಾರೆ.
ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಸಂತ್ರಸ್ತೆಯೂ, ಆರೋಪಿ ಕ್ರಿಕೆಟಿಗನ ವಿರುದ್ಧ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ಆದರೆ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಗೆಲುವಿನ ನಂತರ ಆರೋಪಿ ಕ್ರಿಕೆಟಿಗ ಗಯಾನಾಗೆ ಹಿಂದಿರುಗಿದಾಗ ಅವನಿಗೆ ನೀಡಿದ ಆತ್ಮೀಯ ಸ್ವಾಗತದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Fri, 27 June 25