WI vs SL, T20 WC: ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಟೂರ್ನಿಯಿಂದ ಔಟ್: ನಿವೃತ್ತಿ ಘೋಷಿಸಲು ಮುಂದಾದ ಡ್ವೇನ್ ಬ್ರಾವೋ
Dwayne Bravo Confirms Retirement: ಶ್ರೀಲಂಕಾ ವಿರುದ್ಧ ವೆಸ್ಟ್ ಇಂಡೀಸ್ ಸೋತ ಬೆನ್ನಲ್ಲೇ ತಂಡ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್ಗೆ ವಿದಾಯ ಹೇಳುವುದಾಗಿ ಘೋಷಣೆ ಮಾಡಿದ್ದಾರೆ. ನಾಳೆ (ನ. 06) ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ನಂತರ ಬ್ರಾವೋ ನಿವೃತ್ತಿ ನೀಡಲಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ನಲ್ಲಿ (ICC T20 World Cup) ಗುರುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ (West Indies vs Sri Lanka) ತಂಡ 20 ರನ್ಗಳ ಗೆಲುವು ಸಾಧಿಸಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋತ ಹಾಲಿ ಚಾಂಪಿಯನ್ ಕೆರಿಬಿಯನ್ನರು ಟೂರ್ನಿಯಿಂದಲೇ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಶ್ರಿಮ್ರೋನ್ ಹೆಟ್ಮೇರ್ (Shimron Hetmyer) ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರೂ ಅಜೇಯರಾಗಿ ಉಳಿದರಷ್ಟೆ ಬಿಟ್ಟರೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಇತ್ತ ಬ್ಯಾಟಿಂಗ್- ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಸಿಂಹಳೀಯರು ಪ್ರತಿಷ್ಠೆ ಉಳಿಸಿಕೊಂಡರು. ಇದರ ನಡುವೆ ವೆಸ್ಟ್ ಇಂಡೀಸ್ ತಂಡ ಪ್ರಮುಖ ಆಲ್ರೌಂಡರ್ ಡ್ವೇನ್ ಬ್ರಾವೋ (Dwayne Bravo) ಟಿ20 ಕ್ರಿಕೆಟ್ಗೆ ನಿವೃತ್ತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಬ್ಯಾಟುಗಾರರೂ ಉತ್ತಮ ಪ್ರದರ್ಶನ ನೀಡಿದರು. ಪಥುಮ್ ನಿಸಾಂಕ, ಕುಸಾಲ್ ಪೆರೇರಾ, ಚರಿತ್ ಅಸಲಂಕಾ, ದಾಸುನ್ ಶಾನಕ ಅವರೆಲ್ಲರೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಿಸಾಂಕ ಮತ್ತು ಅಸಲಂಕ ಇಬ್ಬರೂ ಅರ್ಧಶತಕ ಭಾರಿಸಿದರು. ಮೂರು ಉತ್ತಮ ಜೊತೆಯಾಟಗಳು ಬಂದವು. ಪರಿಣಾಮವಾಗಿ, 170 ರನ್ ಆಸುಪಾಸಿನ ಸ್ಕೋರ್ನ ನಿರೀಕ್ಷೆಯಲ್ಲಿದ್ದ ಶ್ರೀಲಂಕಾ ಬರೋಬ್ಬರಿ 189 ರನ್ ಭಾರಿಸಿದರು. ಆಗಲೇ ಲಂಕಾ ಬಹುತೇಕ ಗೆಲುವು ಸಾಧಿಸಿತ್ತು.
ಚರಿತ್ ಅಸಲಂಕಾ (68 ರನ್, 41 ಎಸೆತ, 8 ಬೌಂಡರಿ, 1 ಸಿಕ್ಸರ್), ಪಥುಮ್ ನಿಸಾಂಕಾ (51 ರನ್, 41 ಎಸೆತ, 5 ಬೌಂಡರಿ) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಲಂಕಾ 20 ಓವರ್ಗಳಲ್ಲಿ 3 ವಿಕೆಟ್‌ಗೆ 189 ರನ್ ಪೇರಿಸಿತು.
ಲಂಕಾ ಗೆಲ್ಲಲು ಒಡ್ಡಿದ 190 ರನ್ ಗುರಿಯನ್ನ ವೆಸ್ಟ್ ಇಂಡೀಸ್ ಮುಟ್ಟುವ ಸಾಧ್ಯತೆ ಕಡಿಮೆಯೇ ಇತ್ತು. ಇಡೀ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಕಂಡಿದ್ದ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು.
ನಿಕೋಲಾಸ್ ಪೂರನ್ ಮತ್ತು ಹೆಟ್ಮೇರ್ ಹೊರತುಪಡಿಸಿ ಉಳಿದವರು ಹೇಳಹೆಸರಿಲ್ಲದಂತೆ ಔಟಾಗಿ ಹೋದರು. ಹೆಟ್ಮಯರ್ ಕೊನೆಕೊನೆಯಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದರು. ಅಷ್ಟರೊಳಗೆ ವಿಂಡೀಸ್ಗೆ ಕಾಲ ಮಿಂಚಿಹೋಗಿತ್ತು. ಹೆಟ್ಮೇರ್ 54 ಬಾಲ್ನಲ್ಲಿ 8 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 81 ರನ್ ಗಳಿಸಿದರು. ವಿಂಡೀಸ್ 8 ವಿಕೆಟ್‌ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಈಗಾಗಲೆ ಸೆಮೀಸ್ ರೇಸ್‌ನಿಂದ ಹೊರಬಿದ್ದಿದ್ದ ಲಂಕಾ ಸಮಾಧಾನಕ ಜಯದೊಂದಿಗೆ ನಿರ್ಗಮಿಸಿದರೆ, 3ನೇ ಸೋಲಿನೊಂದಿಗೆ ವಿಂಡೀಸ್ ಕೂಡ 3ನೇ ಬಾರಿ ಪ್ರಶಸ್ತಿ ಗೆಲ್ಲುವ ಆಸೆ ಕೈಚೆಲ್ಲಿತು.
ಡ್ವೇನ್ ಬ್ರಾವೋ ನಿವೃತ್ತಿ:
ವೆಸ್ಟ್ ಇಂಡೀಸ್ ಸೋತ ಬೆನ್ನಲ್ಲೇ ತಂಡ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್ಗೆ ವಿದಾಯ ಹೇಳುವುದಾಗಿ ಘೋಷಣೆ ಮಾಡಿದ್ದಾರೆ. ನಾಳೆ (ನ. 06) ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ನಂತರ ಬ್ರಾವೋ ನಿವೃತ್ತಿ ನೀಡಲಿದ್ದಾರೆ. ಇವರು ವೆಸ್ಟ್ ಇಂಡೀಸ್ ಕ್ರಿಕೆಟ್ಗೆ 18 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ವಿಂಡೀಸ್ ಪರ 90 ಟಿ20 ಪಂದ್ಯವಾಡಿದ್ದ ಬ್ರಾವೋ, 1,245 ರನ್, 78 ವಿಕೆಟ್ ಪಡೆದಿದ್ದಾರೆ. 2012, 2016ರ ಟಿ20 ಚಾಂಪಿಯನ್ ತಂಡದಲ್ಲಿ ಕೂಡ ಬ್ರಾವೋ ಇದ್ದರು. ಇವರು ಈ ಹಿಂದೆಯೂ 2018ರಲ್ಲಿ ನಿವೃತ್ತಿ ನೀಡಿದ್ದರು. ಬಳಿಕ 2019ರಲ್ಲಿ ನಿವೃತ್ತಿ ವಾಪಸ್ ಪಡೆದು ಮತ್ತೆ ವೆಸ್ಟ್ ಇಂಡೀಸ್ ತಂಡ ಸೇರಿಕೊಂಡಿದ್ದರು.
T20 World Cup 2021: ಸೆಮಿಫೈನಲ್ಗೇರಿದ ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಔಟ್
(west indies vs sri lanka End of an era as West Indies greatest hits fall flat Dwayne Bravo confirms retirement)