ಕರಾಚಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ್ (Pakistan) ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪ್ರದರ್ಶನದ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಪಿಚ್ಗಳ ಗುಣಮಟ್ಟದ ಬಗ್ಗೆ ಟೀಕೆಗಳು ಕೇಳಿ ಬರುತ್ತಿದೆ. ಏಕೆಂದರೆ ಇತ್ತೀಚೆಗೆ ಪಾಕ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್ಗಳ ಸುರಿಮಳೆಯಾಗಿತ್ತು. ಅಷ್ಟೇ ಅಲ್ಲದೆ ಇಂಗ್ಲೆಂಡ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 3-0 ಅಂತರದಿಂದ ಪಾಕ್ನಲ್ಲೇ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದಿತ್ತು. ಇದೀಗ ನ್ಯೂಜಿಲೆಂಡ್-ಪಾಕ್ ನಡುವಣ ಸರಣಿಯಲ್ಲೂ ಬ್ಯಾಟ್ಸ್ಮನ್ಗಳು ವಿಜೃಂಭಿಸುತ್ತಿದ್ದಾರೆ.
ಇತ್ತ 2ನೇ ಟೆಸ್ಟ್ ಪಂದ್ಯದಲ್ಲೂ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳ ಅಬ್ಬರದ ಬೆನ್ನಲ್ಲೇ ಪಾಕ್ ಪಿಚ್ ಅನ್ನು ಕಿವೀಸ್ ವೇಗಿ ಮಿಚೆಲ್ ಮೆಕ್‌ಕ್ಲೆನಾಘನ್ ವ್ಯಂಗ್ಯವಾಡಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ ತಂಡವು 6 ವಿಕೆಟ್ ನಷ್ಟಕ್ಕೆ 309 ರನ್ ಕಲೆಹಾಕಿತು. ಅದು ಕೂಡ ಮೊದಲ ದಿನಾಟದಲ್ಲೇ ಎಂಬುದು ವಿಶೇಷ.
ಪಾಕ್ನಲ್ಲಿ ಬ್ಯಾಟ್ಸ್ಮನ್ಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದಂತೆ ಇತ್ತ ನ್ಯೂಜಿಲೆಂಡ್ ವೇಗಿ ಮಿಚೆಲ್ ಮೆಕ್‌ಕ್ಲೆನಾಘನ್ ಎಂತಹ ಅದ್ಭುತ (ಪರಿಪೂರ್ಣ) ರಸ್ತೆ…ಇದು ಬ್ಯಾಟ್ಸ್ಮನ್ಗಳ ಕನಸು..ಎಂಬಾರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಇದೀಗ ಮಿಚೆಲ್ ಮೆಕ್‌ಕ್ಲೆನಾಘನ್ ಅವರ ಟ್ವೀಟ್ ವೈರಲ್ ಆಗಿದ್ದು, ಪಾಕ್ ಕ್ರಿಕೆಟ್ ಮಂಡಳಿ ಮತ್ತೊಮ್ಮೆ ಪಿಚ್ ವಿಷಯದಲ್ಲಿ ನಗೆಪಾಟಲೀಗೀಡಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಪಿಚ್ ಬ್ಯಾಟ್ಸ್ಮನ್ಗಳಿಗೆ ಸಹಕಾರಿಯಾಗಿತ್ತು.
ರಾವಲ್ಪಿಂಡಿಯಲ್ಲಿ ಆಡಲಾಗಿದ್ದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡವು ಮೊದಲ ದಿನದಾಟದಲ್ಲೇ 506 ರನ್ ಬಾರಿಸಿತ್ತು. ಈ ಮೂಲಕ ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ದಿನದಾಟದಲ್ಲಿ ಗರಿಷ್ಠ ಸ್ಕೋರ್ ಕಲೆಹಾಕಿದ ದಾಖಲೆ ಬರೆದಿತ್ತು.
ಇದೀಗ ನ್ಯೂಜಿಲೆಂಡ್ ಸರಣಿಯಲ್ಲೂ ಬ್ಯಾಟ್ಸ್ಮನ್ಗಳ ಅಬ್ಬರ ಮುಂದುವರೆದಿದೆ. ಇದರ ಬೆನ್ನಲ್ಲೇ ಪಾಕ್ನಲ್ಲಿನ ಪಿಚ್ಗಳ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ಇನ್ನು 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಪರ ಆರಂಭಿಕ ಆಟಗಾರ ಟಾಮ್ ಲಾಥಮ್ 71 (100 ಎಸೆತ) ಹಾಗೂ ಡೆವೊನ್ ಕಾನ್ವೆ 122 (191 ಎಸೆತ) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡವು 6 ವಿಕೆಟ್ ಕಳೆದುಕೊಂಡು 309 ರನ್ ಕಲೆಹಾಕಿದೆ. ಸದ್ಯ ಟಾಮ್ ಬ್ಲಂಡೆಲ್ ಹಾಗೂ ಇಶ್ ಸೋಧಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.