IND vs ENG: ಭಾರತ ಇಂಗ್ಲೆಂಡ್ ಸೆಮಿಫೈನಲ್‌ಗೆ ಮಳೆ ಭೀತಿ; ಪಂದ್ಯ ರದ್ದಾದರೆ ಫೈನಲ್ಗೆ ಯಾರು? ಮೀಸಲು ದಿನ ಇದೆಯೇ? ಇಲ್ಲಿದೆ ಉತ್ತರ
IND vs ENG T20 World Cup Semi Final; ಟಿ20 ವಿಶ್ವಕಪ್ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ಸೆಮಿಫೈನಲ್ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಜೂನ್ 27 ರಂದು ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಳೆದ ಬಾರಿಯ ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಿದ್ಧವಾಗಿದೆ. ಮತ್ತೊಂದೆಡೆ ಪಂದ್ಯಕ್ಕೆ ಮಳೆ ಭೀತಿಯೂ ಎದುರಾಗಿದೆ. ಒಂದು ವೇಳೆ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದರೆ ಏನೆಲ್ಲ ಸಾಧ್ಯತೆಗಳಿವೆ ಎಂಬ ವಿವರ ಇಲ್ಲಿದೆ.
ಟಿ20 ವಿಶ್ವಕಪ್ನ (T20 World Cup) ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ 24 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿ ಟಿ20 ವಿಶ್ವಕಪ್ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಟೀಂ ಇಂಡಿಯಾಗೆ (Team Inadia) ಸೆಮಿಫೈನಲ್ನಲ್ಲಿ ಇಗ್ಲೆಂಡ್ ಎದುರಾಳಿಯಾಗಿರಲಿದೆ. ಜೂನ್ 27 ರಂದು ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಕದನಕ್ಕೆ ಮಳೆ ಭೀತಿಯೂ ಎದುರಾಗಿದೆ. ಒಂದು ವೇಳೆ ಮಳೆಯಿಂದಾಗಿ ಸೆಮಿಫೈನಲ್ ಪಂದ್ಯಕ್ಕೆ ಅಡ್ಡಿಯಾದರೆ ಏನಾಗಲಿದೆ? ಅಗ ಯಾರು ಫೈನಲ್ ಪ್ರವೇಶಿಸುತ್ತಾರೆ? ಮೀಸಲು ದಿನ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಅಕ್ಯುವೆದರ್ ಪ್ರಕಾರ, ಜೂನ್ 27 ರಂದು ಗಯಾನಾದಲ್ಲಿ ಶೇ 88ರ ಮಳೆ ಮುನ್ಸೂಚನೆ ಇದೆ. ಶೇ 18 ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಸ್ಥಳೀಯ ಕಾಲಮಾನ ಬೆಳಗ್ಗೆ 10.30ಕ್ಕೆ ಪಂದ್ಯ ಆರಂಭವಾಗಲಿದೆ.
IND vs ENG ಸೆಮಿಫೈನಲ್‌ಗೆ ಮೀಸಲು ದಿನವಿದೆಯೇ?
ಭಾರತ, ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ. ಒಂದು ವೇಳೆ ಮಳೆಯಿಂದ ಅಡ್ಡಿಯಾದರೆ ಪಂದ್ಯ ನಡೆಸುವ ಸಲುವಾಗಿ 250 ಹೆಚ್ಚುವರಿ ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿದೆ. ಮೀಸಲು ದಿನವು ಉಭಯ ತಂಡಗಳಿಗೆ ಒತ್ತಡವನ್ನುಂಟುಮಾಡಲಿದೆ. ಏಕೆಂದರೆ ಮೀಸಲು ದಿನ ನಿಗದಿಪಡಿಸಿದರೆ ಸೆಮಿಫೈನಲ್ 2 ರ 24 ಗಂಟೆಗಳ ಒಳಗೆ ಫೈನಲ್ ಪಂದ್ಯದಲ್ಲಿ ಆಡಬೇಕಾಗುತ್ತದೆ.
ಪಂದ್ಯ ರದ್ದಾದರೆ ಫೈನಲ್ಗೆ ಯಾರು?
ಮಳೆಯಿಂದಾಗಿ ಒಂದೇ ಒಂದು ಎಸೆತವೂ ಕಾಣದೆ ಪಂದ್ಯ ರದ್ದಾದರೆ, ಸೂಪರ್ 8 ಹಂತದಲ್ಲಿ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಭಾರತವು ನೇರವಾಗಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಲಿದೆ.
ಸೋಮವಾರ ರಾತ್ರಿ ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 24 ರನ್‌ಗಳಿಂದ ಸೋಲಿಸಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆದ ಸೋಲಿಗೆ ಈ ಮೂಲಕ ಟೀಂ ಇಂಡಿಯಾ ಸೇಡು ತೀರಿಸಕೊಂಡಿದೆ.
ಇದನ್ನೂ ಓದಿ: ಆಸೀಸ್ ಬೌಲರ್ಗಳ ಬೆವರಿಳಿಸಿ ರೋಹಿತ್ ಶರ್ಮಾ ನಿರ್ಮಿಸಿದ ದಾಖಲೆಗಳಿವು…
ಮತ್ತೊಂದೆಡೆ, ಕಳೆದ ಬಾರಿಯ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಎದುರಾಳಿಯಾಗಿದ್ದ ಇಂಗ್ಲೆಂಡ್ ತಂಡವೇ ಈ ಬಾರಿಯೂ ಭಾರತ ತಂಡಕ್ಕೆ ಎದುರಾಳಿಯಾಗಿದೆ. ಕಳೆದ ಬಾರಿ ಸೆಮಿಫೈನಲ್ನಲ್ಲಿ ಭಾರತ ಸೋಲನುಭವಿಸಿತ್ತು. ಈ ಬಾರಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Tue, 25 June 24