
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final) ಪಂದ್ಯಕ್ಕೆ ಚಾಲನೆ ದೊರೆತಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದೆ. ಈ ಮ್ಯಾಚ್ನಲ್ಲಿ ಟಾಸ್ ಗೆದ್ದಿರುವ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿದ್ದು, ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 212 ರನ್ಗಳಿಸಿ ಆಲೌಟ್ ಆಗಿದೆ.
ಇದೀಗ ಪ್ರಥಮ ಇನಿಂಗ್ಸ್ ಆರಂಭಿಸಿರುವ ಸೌತ್ ಆಫ್ರಿಕಾ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 43 ರನ್ ಕಲೆಹಾಕಿದೆ. ಇನ್ನೂ ನಾಲ್ಕು ದಿನದಾಟಗಳು ಬಾಕಿಯಿದ್ದು, ಬಲಿಷ್ಠ ಪಡೆಗಳ ನಡುವಣ ಕದನದ ಫಲಿತಾಂಶ ಏನಾಗಲಿದೆ? ಎಂಬುದೇ ಈಗ ಕುತೂಹಲ.
ಟೆಸ್ಟ್ ಪಂದ್ಯದಲ್ಲಿ ಮೂರು ಫಲಿತಾಂಶವನ್ನು ಎದುರು ನೋಡಬಹುದು. ಇಲ್ಲಿ ಗೆಲುವು, ಸೋಲುಗಳ ನಡುವೆ ಡ್ರಾ ಮಾಡಿಕೊಳ್ಳುವ ಅವಕಾಶವಿದೆ. ಆದರೆ ಟೆಸ್ಟ್ನ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಚಾಂಪಿಯನ್ ಪಟ್ಟ ಯಾರಿಗೆ ಸಿಗುವುದು ಎಂಬುದೇ ಪ್ರಶ್ನೆ.
ಈ ಪ್ರಶ್ನೆಗೆ ಉತ್ತರ ಜಂಟಿ ಚಾಂಪಿಯನ್. ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೆ, ಮೀಸಲು ದಿನದಾಟದಲ್ಲಿ ಫಲಿತಾಂಶವನ್ನು ನಿರ್ಧರಿಸುವುದಿಲ್ಲ. ಬದಲಾಗಿ ಉಭಯ ತಂಡಗಳನ್ನು ಚಾಂಪಿಯನ್ ಎಂದು ಪರಿಗಣಿಸಲಾಗುತ್ತದೆ.
ಹೀಗಾಗಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯವು ಡ್ರಾಗೊಂಡರೆ, ಜಂಟಿ ವಿಜೇತರಾಗಿ ಉಭಯ ತಂಡಗಳು ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಮೀಸಲು ದಿನದಾಟವಿದೆ. ಆದರೆ ಅದು ಫೈನಲ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಅನ್ವಯವಾಗುವುದಿಲ್ಲ. ಅಂದರೆ 5ನೇ ದಿನದಾಟದಲ್ಲೂ ಫಲಿತಾಂಶ ಮೂಡಿಬರದಿದ್ದರೆ ಮೀಸಲು ದಿನದಾಟದಲ್ಲಿ ಪಂದ್ಯವನ್ನು ಆಯೋಜಿಸುವುದಿಲ್ಲ. ಬದಲಾಗಿ ಫಲಿತಾಂಶವನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ.
ಆದರೆ 5 ದಿನದಾಟಗಳ ವೇಳೆ ಅಡಚಣೆ ಉಂಟಾದರೆ, ಅಥವಾ ಕಾರಣಾಂತರಗಳಿಂದ ಓವರ್ಗಳು ಕಡಿತಗೊಂಡರೆ ಆ ಓವರ್ಗಳನ್ನು ಮೀಸಲು ದಿನದಾಟದಲ್ಲಿ ಪೂರ್ಣಗೊಳಿಸಲಾಗುತ್ತದೆ.
ಹೀಗಾಗಿ ಫೈನಲ್ ಪಂದ್ಯದ 5 ದಿನದಾಟಗಳಲ್ಲಿ ಸಂಪೂರ್ಣ ಓವರ್ಗಳನ್ನು ಎಸೆಯಲು ಸಾಧ್ಯವಾಗದೇ ಇದ್ದರೆ ಆ ಓವರ್ಗಳನ್ನು ಮೀಸಲು ದಿನದಾಟದಲ್ಲಿ ಪೂರ್ಣಗೊಳಿಸಲಾಗುತ್ತದೆ. ಈ ಮೂಲಕ ಪೂರ್ಣ ಪಂದ್ಯವನ್ನು ಆಯೋಜಿಸಲು ಐಸಿಸಿ ನಿರ್ಧರಿಸಿದೆ.
ಇದನ್ನೂ ಓದಿ: 48 ಗಂಟೆಗಳ ಮುಂಚೆ ಆಯ್ಕೆ… ಮಯಾಂಕ್ ಅಗರ್ವಾಲ್ ಕೈ ಹಿಡಿಯಲಿದೆಯಾ RCB
ಅದರಂತೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯಾಗಿ ಮ್ಯಾಚ್ ನಡೆಯದಿದ್ದರೆ ಅಥವಾ ಕೆಲ ಓವರ್ಗಳು ಬಾಕಿ ಉಳಿದರೆ, ಜೂನ್ 16 ಕ್ಕೆ ನಿಗದಿಯಾಗಿರುವ ಮೀಸಲು ದಿನದಾಟದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಇನ್ನು ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.