ಅಂದೊಂದಿತ್ತು ಕಾಲ…ಜಿಂಬಾಬ್ವೆ ಎಂಬ ಕ್ರಿಕೆಟ್ ಶಿಶು ವಿಶ್ವ ಕ್ರಿಕೆಟ್ನ ಬಲಿಷ್ಠ ತಂಡಗಳಿಗೆ ಸವಾಲಾಕುತ್ತಿದ್ದ ಕಾಲ. ಅಂದು ಜಿಂಬಾಬ್ವೆ ಜೊತೆಗಿನ ಪಂದ್ಯದಲ್ಲಿ ಎದುರಾಳಿಗೆ ಜಯ ಖಚಿತ ಎಂಬುದು ಗೊತ್ತಿದ್ದರೂ, ಕ್ರಿಕೆಟ್ ಪ್ರೇಮಿಗಳು ಆ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಏಕೆಂದರೆ ಜಿಂಬಾಬ್ವೆ ತಂಡದಲ್ಲಿ ಯಾವಾಗ ಬೇಕಿದ್ದರೂ ತಿರುಗಿ ಬೀಳಬಲ್ಲ ಆಟಗಾರರಿದ್ದರು. ಅದರಲ್ಲೂ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆ್ಯಂಡಿ ಫ್ಲವರ್ ಎಂದರೆ ಎದುರಾಳಿ ಬೌಲರುಗಳಿಗೆ ಸಣ್ಣ ಭಯ ಕಾಡುತ್ತಿತ್ತು. ಏಕೆಂದರೆ ಆ್ಯಂಡಿ ಫ್ಲವರ್ ಅಂದು ಜಿಂಬಾಬ್ವೆ ಪಾಲಿಗೆ ಎಲ್ಲವೂ ಆಗಿದ್ದರು. ಅತ್ಯುತ್ತಮ ವಿಕೆಟ್ ಕೀಪರ್, ಅತ್ಯುತ್ತಮ ಆರಂಭಿಕ ಆಟಗಾರ, ಅತ್ಯುತ್ತಮ ನಾಯಕ…ಹೀಗೆ 90ರ ದಶಕದಲ್ಲಿ ಕ್ರಿಕೆಟ್ ಶಿಶು ಎನಿಸಿಕೊಂಡಿದ್ದ ಒಂದು ತಂಡವನ್ನು ಆ್ಯಂಡಿ ಫ್ಲವರ್, ಹೀತ್ ಸ್ಟ್ರೀಕ್, ಗ್ರಾಂಟ್ ಫ್ಲವರ್, ಅಲಿಸ್ಟರ್ ಕ್ಯಾಂಬೆಲ್, ಹೆನ್ರಿ ಒಲಾಂಗಾದಂತಹ ಆಟಗಾರರು ಬಲಿಷ್ಠವಾಗಿ ರೂಪಿಸಿದ್ದರು. ಹೀಗಾಗಿಯೇ 1992 ರಿಂದ 2003 ರವರೆಗೆ ಜಿಂಬಾಬ್ವೆ ತಂಡವು ಐಸಿಸಿ ಟೂರ್ನಿಗಳಲ್ಲಿ ಪ್ರಮುಖ ತಂಡವಾಗಿ ಗುರುತಿಸಿಕೊಂಡಿತು.
ಅದರಲ್ಲೂ ಎಡಗೈ ದಾಂಡಿಗ ಆ್ಯಂಡಿ ಫ್ಲವರ್ ಎಂತಹ ಬೌಲರ್ಗಳಿಗೆ ಸೆಡ್ಡು ಹೊಡೆಯುವಂತೆ ಬ್ಯಾಟ್ ಬೀಸುತ್ತಿದ್ದರು. ಹೀಗಾಗಿಯೇ ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಆ್ಯಂಡಿ ವಿಕೆಟ್ ನಿರ್ಣಾಯಕವಾಗಿತ್ತು. ಯಾವಾಗ ಆ್ಯಂಡಿ ಫ್ಲವರ್ ಸೇರಿದಂತೆ ಪ್ರಮುಖ ಆಟಗಾರರು ನಿವೃತ್ತಿ ಹೊಂದಿದರೂ ನಿಧಾನಕ್ಕೆ ಜಿಂಬಾಬ್ವೆ ತಂಡ ಕೂಡ ಬದಿಗೆ ಸರಿಯಿತು. ಇದಾಗ್ಯೂ ಕಳೆದ ಕೆಲ ವರ್ಷಗಳಿಂದ ಆ್ಯಂಡಿ ಫ್ಲವರ್ ಹೆಸರು ವಿಶ್ವ ಕ್ರಿಕೆಟ್ನಲ್ಲಿ ರಾರಾಜಿಸುತ್ತಿದೆ. ಇದಕ್ಕೆ ಕಾರಣ ಜಿಂಬಾಬ್ವೆ ತಂಡದ ಮಾಜಿ ನಾಯಕನ ಎರಡನೇ ಇನಿಂಗ್ಸ್.
ಹೌದು, ನಿವೃತ್ತಿ ಬಳಿಕ ಆ್ಯಂಡಿ ಫ್ಲವರ್ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಅದು ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡದ ತರಬೇತುದಾರರಾಗಿ ಎಂಬುದು ವಿಶೇಷ. ಅದುವರೆಗೆ ಕ್ರಿಕೆಟ್ ಇತಿಹಾಸದಲ್ಲಿ ಐಸಿಸಿ ಟ್ರೋಫಿ ಗೆಲ್ಲಲಾಗದ ತಂಡ ಎಂಬ ಹಣೆಪಟ್ಟಿ ಹೊಂದಿದ್ದ ಇಂಗ್ಲೆಂಡ್ ತಂಡವು ಆ್ಯಂಡಿ ಫ್ಲವರ್ ಕೋಚಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಲಾರಂಭಿಸಿತು. ಅದರಂತೆ ಟಿ20 ಕ್ರಿಕೆಟ್ನಲ್ಲಿ ಹೊಸ ಸಂಚಲಕ ಸೃಷಿಸಿದ್ದ ಇಂಗ್ಲೆಂಡ್ ತಂಡವು 2010 ರಲ್ಲಿ ಆ್ಯಂಡಿ ಫ್ಲವರ್ ನೇತೃತ್ವದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಂದಿನ ಆ ಒಂದು ಗೆಲುವಿನ ಬಳಿಕ ಇಂಗ್ಲೆಂಡ್ ತಂಡವು ಹಿಂತಿರುಗಿ ನೋಡಿಲ್ಲ ಎಂದೇ ಹೇಳಬಹುದು. ಏಕೆಂದರೆ ಆ ಬಳಿಕ ಇಂಗ್ಲೆಂಡ್ ಮೂರು ಮಾದರಿಯಲ್ಲೂ ಬಲಿಷ್ಠವಾಗಿ ಗುರುತಿಸಿಕೊಂಡಿದೆ.
2012 ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ತಂಡವು ನಂಬರ್ 1 ಪಟ್ಟವನ್ನು ಅಲಂಕರಿಸಿದ್ದು ಕೂಡ ಇದೇ ಆ್ಯಂಡಿ ಫ್ಲವರ್ ಕೋಚ್ ಆಗಿದ್ದ ವೇಳೆ ಎಂಬುದು ವಿಶೇಷ. ಇನ್ನು ಇಂಗ್ಲೆಂಡ್ ತಂಡದ ಕೋಚ್ ಸ್ಥಾನವನ್ನು ತೊರೆದ ಬಳಿಕ ಆ್ಯಂಡಿ ಫ್ಲವರ್ ಫ್ರಾಂಚೈಸಿ ಲೀಗ್ನತ್ತ ಮುಖ ಮಾಡಿದ್ದರು. ಅದರಂತೆ ಕಳೆದ ಎರಡು ಸೀಸನ್ನಲ್ಲಿ ಐಪಿಎಲ್ನಲ್ಲೂ ಕಾಣಿಸಿಕೊಂಡಿದ್ದರು. ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಆಗಿ ಆ್ಯಂಡಿ ಫ್ಲವರ್ ತೆರೆ ಮರೆಯಲ್ಲೇ ಕಾರ್ಯ ನಿರ್ವಹಿಸಿದ್ದರು.
ಆದರೆ ಮತ್ತೊಂದೆಡೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಮುಲ್ತಾನ್ ಸುಲ್ತಾನ್ ತಂಡದ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್ ಅದ್ಭುತ ಯಶಸ್ಸು ಕಂಡಿದ್ದರು. 2021 ರಲ್ಲಿ ಆ್ಯಂಡಿ ಫ್ಲವರ್ ನೇತೃತ್ವದ ಮುಲ್ತಾನ್ ಸುಲ್ತಾನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ಅಷ್ಟೇ ಅಲ್ಲದೆ ಅತ್ತ ವೆಸ್ಟ್ ಇಂಡೀಸ್ನ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲೂ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಕೋಚ್ ಚುಕ್ಕಾಣಿ ಹಿಡಿದಿದ್ದ ಫ್ಲವರ್ ತಂಡಕ್ಕೆ ಹೊಸ ಇಮೇಜ್ ತಂದುಕೊಟ್ಟಿದ್ದರು.
ಅಷ್ಟೇ ಅಲ್ಲದೆ ಸಿಪಿಎಲ್ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಎರಡು ಬಾರಿ ಫೈನಲ್ ಪ್ರವೇಶಿಸುವಲ್ಲಿ ಆ್ಯಂಡಿ ಫ್ಲವರ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಐಪಿಎಲ್ನಲ್ಲೂ ಆ್ಯಂಡಿ ಫ್ಲವರ್ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಅದು ಕೂಡ ಐಪಿಎಲ್ನ ಅತ್ಯಂತ ದುಬಾರಿ ತಂಡ ಎನಿಸಿಕೊಂಡಿರುವ ಲಕ್ನೋ ಫ್ರಾಂಚೈಸಿಗೆ ಎಂಬುದು ವಿಶೇಷ. ಅಂದರೆ ಕಳೆದ ಬಾರಿ ಪಂಜಾಬ್ ಕಿಂಗ್ಸ್ ತಂಡದ ಅಸಿಸ್ಟೆಂಟ್ ಕೋಚ್ ಆಗಿದ್ದ ಆ್ಯಂಡಿ ಫ್ಲವರ್ ಲಕ್ನೋ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ.
ಅತ್ತ ಸಿಪಿಎಲ್ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ಹೊಸ ಇಮೇಜ್ ತಂದುಕೊಟ್ಟಿದ್ದ ತರಬೇತುದಾರ, ಇತ್ತ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಮುಲ್ತಾನ್ ಸುಲ್ತಾನ್ಗೆ ಚಾಂಪಿಯನ್ ಪಟ್ಟಕ್ಕೇರಿಸಿದ ಕೋಚ್ ಎಂಬ ಟ್ಯಾಗ್ಲೈನ್ನೊಂದಿಗೆ ಲಕ್ನೋ ಫ್ರಾಂಚೈಸಿ ಆರಂಭದಲ್ಲೇ ಬಲಿಷ್ಠ ತಂಡವಾಗಿ ರೂಪುಗೊಳ್ಳುವ ಸೂಚನೆಯಂತು ನೀಡಿದೆ. ಅಷ್ಟೇ ಅಲ್ಲದೆ ಆ್ಯಂಡಿ ಫ್ಲವರ್ ಅವರ ಈ ಹಿಂದಿನ ಕಾರ್ಯ ವೈಖರಿ ಹಾಗೂ ತಂಡಗಳ ಪ್ರದರ್ಶನವನ್ನು ಗಮನಿಸಿದರೆ ಲಕ್ನೋ ತಂಡವು ಬಲಿಷ್ಠ ತಂಡವಾಗಿ ರೂಪುಗೊಳ್ಳುವುದರಲ್ಲಿ ಡೌಟೇ ಇಲ್ಲ ಎನ್ನಬಹುದು.
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!
ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!
(Why Andy Flower is now indisputably Ipl’s best coach)