CSK ವಿರುದ್ಧ ಮುಂಬೈ ಇಂಡಿಯನ್ಸ್ ಗೆಲ್ಲಲೇಬೇಕು, ಇಲ್ಲದಿದ್ದರೆ..?

IPL 2026 MI vs CSK: ಮುಂಬೈ ಇಂಡಿಯನ್ಸ್ ತಂಡವು ಈವರೆಗೆ 8 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ. ಅತ್ತ ಸಿಎಸ್​ಕೆ ತಂಡ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಮೇಲೇರಲಿದೆ. ಹಾಗೆಯೇ ಪ್ಲೇಆಫ್ ರೇಸ್​ನಲ್ಲೂ ಉಳಿಯಲಿದೆ.

CSK ವಿರುದ್ಧ ಮುಂಬೈ ಇಂಡಿಯನ್ಸ್ ಗೆಲ್ಲಲೇಬೇಕು, ಇಲ್ಲದಿದ್ದರೆ..?
Mumbai Indians

Updated on: May 02, 2026 | 9:05 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 44ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಮುಂಬೈ ಇಂಡಿಯನ್ಸ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಮುಂಬೈ ಇಂಡಿಯನ್ಸ್​ ನೇರವಾಗಿ ಪ್ಲೇಆಫ್ ರೇಸ್​ನಲ್ಲಿ ಉಳಿಯಬಹುದು. ಹೀಗಾಗಿ ಈ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲೇಬೇಕು.

ಮುಂಬೈ ಇಂಡಿಯನ್ಸ್ ಯಾಕೆ ಗೆಲ್ಲಬೇಕು?

  • ಪ್ಲೇಆಫ್ ಆಸೆ ಜೀವಂತವಾಗಿಡಲು: ಮುಂಬೈ ಇಂಡಿಯನ್ಸ್ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆಡಿದ 8 ಪಂದ್ಯಗಳಲ್ಲಿ ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ ಜಯ ಸಾಧಿಸಿರುವ ಮುಂಬೈಗೆ, ಇನ್ನುಳಿದ ಎಲ್ಲಾ 6 ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಒಂದೇ ಒಂದು ಸೋಲು ಕೂಡ ಅವರ ಪ್ಲೇಆಫ್ ಹಾದಿಯನ್ನು ಕಠಿಣವಾಗಿಸಬಹುದು. ಮುಚ್ಚಬಹುದು.
  • ನೆಟ್ ರನ್ ರೇಟ್ (NRR) ಸುಧಾರಣೆ: ಸದ್ಯ ಮುಂಬೈ ತಂಡದ ನೆಟ್ ರನ್ ರೇಟ್ -0.784 ರಷ್ಟಿದೆ. ಕೇವಲ ಗೆಲುವು ಮಾತ್ರವಲ್ಲ, ದೊಡ್ಡ ಅಂತರದ ಗೆಲುವು ಅವರಿಗೆ ಅಂಕಪಟ್ಟಿಯ ಟೈ-ಬ್ರೇಕರ್ ಸಂದರ್ಭಗಳಲ್ಲಿ ನೆರವಾಗಲಿದೆ.
  • ಹಳೆಯ ಸೋಲಿಗೆ ಸೇಡು: ಇದೇ ಸೀಸನ್‌ನ ಹಿಂದಿನ ಮುಖಾಮುಖಿಯಲ್ಲಿ CSK ತಂಡವು ಮುಂಬೈ ತಂಡವನ್ನು 103 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಅದು ಮುಂಬೈ ಪಾಲಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೋಲಾಗಿತ್ತು. ಇಂದಿನ ಗೆಲುವು ಆ ಕಹಿ ನೆನಪನ್ನು ಅಳಿಸಿ ತಂಡದಲ್ಲಿ ಆತ್ಮವಿಶ್ವಾಸ ತುಂಬಲು ಅಗತ್ಯವಾಗಿದೆ.
  • ಎಲ್ ಕ್ಲಾಸಿಕೋ ಗೌರವ: ಐಪಿಎಲ್‌ನ ಎರಡು ಬಲಿಷ್ಠ ತಂಡಗಳ ನಡುವಿನ ಈ ಪೈಪೋಟಿಯಲ್ಲಿ ಸೋಲುವುದರಿಂದ ತಂಡದ ನೈತಿಕ ಸ್ಥೈರ್ಯ ಕುಸಿಯಬಹುದು. ಪ್ಲೇಆಫ್ ರೇಸ್‌ನಲ್ಲಿ ಮುನ್ನಡೆಯಲು ಮುಂಬೈಗೆ ಈ ‘ಹೈ-ವೋಲ್ಟೇಜ್’ ಪಂದ್ಯದ ಗೆಲುವು ಸಂಜೀವಿನಿಯಾಗಲಿದೆ.

ಅಂದರೆ ನೇರವಾಗಿ ಪ್ಲೇಆಫ್​ಗೇರಲು ಮುಂಬೈ ಇಂಡಿಯನ್ಸ್​ ಇನ್ನುಳಿದ 6 ಮ್ಯಾಚ್​ಗಳಲ್ಲೂ ಜಯ ಸಾಧಿಸಲಬೇಕು. ಹೀಗೆ ಗೆಲುವು ದಾಖಲಿಸಿದರೆ ಒಟ್ಟು 16 ಅಂಕಗಳೊಂದಿಗೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಬಹುದು. ಒಂದು ವೇಳೆ ಇಂದಿನ ಪಂದ್ಯದಲ್ಲಿ ಸಿಎಸ್​ಕೆ  ವಿರುದ್ಧ ಸೋತರೆ?

  • ಪ್ಲೇಆಫ್ ಹಾದಿ ಕಠಿಣ: ಮುಂಬೈ ಇಂಡಿಯನ್ಸ್ ತಂಡವು ಸಿಎಸ್​ಕೆ ವಿರುದ್ಧ ಸೋತರೆ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಅಂದರೆ ಉಳಿದ ಐದು ಮ್ಯಾಚ್​ಗಳನ್ನು ಗೆದ್ದರೂ 14 ಅಂಕಗಳನ್ನು ಮಾತ್ರ ಪಡೆಯಲಿದೆ.
  • ನೆಟ್​ರನ್ ರೇಟ್ ಕುಸಿತ: ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ನೆಟ್ ರನ್​ ರೇಟ್ ಕೂಡ ಮತ್ತಷ್ಟು ಇಳಿಕೆಯಾಗಲಿದೆ. ಇದರಿಂದ 14 ಅಂಕಗಳೊಂದಿಗೆ ಪ್ಲೇಆಫ್​ಗೇರುವುದು ಕಷ್ಟಸಾಧ್ಯ.
  • ಇತರೆ ತಂಡಗಳ ಫಲಿತಾಂಶ: ಪ್ರಸ್ತುತ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 13 ಅಂಕಗಳನ್ನು ಹೊಂದಿದ್ದರೆ, ಆರ್​ಸಿಬಿ, ಆರ್​ಆರ್​, ಎಸ್​ಆರ್​ಹೆಚ್ 12 ಅಂಕಗಳನ್ನು ಹೊಂದಿದೆ. ಈ ತಂಡಗಳು ಮುಂದಿನ ಪಂದ್ಯದಲ್ಲಿ 2 ಅಥವಾ ಒಂದು ಮ್ಯಾಚ್ ಗೆದ್ದರೆ ಮುಂಬೈ ಇಂಡಿಯನ್ಸ್ ತಂಡ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.

ಇದನ್ನೂ ಓದಿ: KL Rahul: ಒಂದು ಗೆಲುವು ಎಲ್ಲವನ್ನೂ ಮರೆಸುತ್ತದೆ..!

ಈ ಎಲ್ಲಾ ಕಾರಣಗಳಿಂದಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಾಲಿಗೆ ಗೆಲುವು ಅನಿವಾರ್ಯ. ಒಂದು ವೇಳೆ ಸೋತರೆ ಉಳಿದ 5 ಪಂದ್ಯಗಳಲ್ಲಿ ಗೆದ್ದರೂ ಇತರೆ ತಂಡಗಳ ಫಲಿತಾಂಶದ ಆಧಾರದ ಮೇಲೆ ತನ್ನ ಪ್ಲೇಆಫ್ ಹಾದಿ ನಿರ್ಧಾರವಾಗಲಿದೆ. ಹೀಗಾಗಿ ಇಂದಿನ ಪಂದ್ಯವು ಮುಂಬೈ ಇಂಡಿಯನ್ಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.

 

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us