Women’s Asia Cup 2022: ಭಾರತದ ಪರ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಸ್ಮೃತಿ ಮಂಧಾನ..!

| Updated By: ಪೃಥ್ವಿಶಂಕರ

Updated on: Oct 10, 2022 | 3:53 PM

Smriti Mandhana: ಇಂದು 100 ಟಿ20 ಪಂದ್ಯವನ್ನಾಡಿರುವ ಸ್ಮೃತಿ ಮಂಧಾನ 26.96 ಸರಾಸರಿಯಲ್ಲಿ 2,373 ರನ್ ಗಳಿಸಿದ್ದಾರೆ. ಜೊತೆಗೆ ಟಿ20 ಕ್ರಿಕೆಟ್​ನಲ್ಲಿ 17 ಅರ್ಧ ಶತಕಗಳನ್ನು ಬಾರಿಸಿರುವ ಸ್ಮೃತಿ ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 86 ರನ್ ಆಗಿದೆ.

Womens Asia Cup 2022: ಭಾರತದ ಪರ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಸ್ಮೃತಿ ಮಂಧಾನ..!
Smriti Mandhana
Follow us on

ಮಹಿಳಾ ಏಷ್ಯಾಕಪ್​ನಲ್ಲಿ (Women’s Asia Cup 2022) ಅದ್ಭುತ ಪ್ರದರ್ಶನ ನೀಡಿ ಈಗಾಗಲೇ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿರುವ ಟೀಂ ಇಂಡಿಯಾ ವನಿತಾ ಬಳಗ ಇಂದು ನಡೆದ ಥಾಯ್ಲೆಂಡ್ ವಿರುದ್ಧದ ಔಪಚಾರಿಕ ಪಂದ್ಯದಲ್ಲಿ ದಾಖಲೆಯ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಥಾಯ್ಲೆಂಡ್ ತಂಡ 15.1 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಕೇವಲ 37 ರನ್​ಗಳಿಸಿತು. ಇದಕ್ಕುತ್ತರವಾಗಿ ಸುಲಭ ಗುರಿ ಪಡೆದಿದ್ದ ಟೀಂ ಇಂಡಿಯಾ ಕೇವಲ 36 ಎಸೆತಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಹರ್ಮನ್​ ಪಡೆ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಹಾಗೆಯೇ ಈ ಪಂದ್ಯದಲ್ಲಿ ನಾಯಕತ್ವವಹಿಸಿದ್ದ ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ಈ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಪೂರ್ಣಗೊಳಿಸಿದ ಎರಡನೇ ಭಾರತೀಯ ಆಟಗಾರ್ತಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಂದಾನ ಹೊರತಾಗಿ, ಭಾರತದ ಹಾಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಭಾರತದ ಪರ 100 T20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಮಹಿಳಾ ಕ್ರಿಕೆಟರ್ ಆಗಿದ್ದಾರೆ. ಇಲ್ಲಿಯವರೆಗೆ, ಹರ್ಮನ್‌ಪ್ರೀತ್ ಭಾರತದ ಪರ 135 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ 27.28 ಸರಾಸರಿಯಲ್ಲಿ 2,647 ಗಳಿಸಿದ್ದಾರೆ. ಜೊತೆಗೆ ಟಿ20 ಕ್ರಿಕೆಟ್​ನಲ್ಲಿ ಒಂದು ಶತಕ ಮತ್ತು ಎಂಟು ಅರ್ಧ ಶತಕಗಳು ಬಾರಿಸಿರುವ ಕೌರ್, ಈ ಮಾದರಿಯಲ್ಲಿ ಭಾರತ ಪರ 32 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತೊಂದೆಡೆ, ಇಂದು 100 ಟಿ20 ಪಂದ್ಯವನ್ನಾಡಿರುವ ಸ್ಮೃತಿ ಮಂಧಾನ 26.96 ಸರಾಸರಿಯಲ್ಲಿ 2,373 ರನ್ ಗಳಿಸಿದ್ದಾರೆ. ಜೊತೆಗೆ ಟಿ20 ಕ್ರಿಕೆಟ್​ನಲ್ಲಿ 17 ಅರ್ಧ ಶತಕಗಳನ್ನು ಬಾರಿಸಿರುವ ಸ್ಮೃತಿ ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 86 ರನ್ ಆಗಿದೆ.

ಈ ಇಬ್ಬರನ್ನು ಹೊರತುಪಡಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯೂಜಿಲೆಂಡ್‌ನ ಅನುಭವಿ ಆಟಗಾರ್ತಿ ಸುಜಿ ಬೇಟ್ಸ್ 136 ಟಿ20 ಪಂದ್ಯಗಳನ್ನಾಡಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ಇವರ ನಂತರ ಇಂಗ್ಲೆಂಡ್‌ನ ಡೇನಿಯಲ್ ವ್ಯಾಟ್ (135) ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯದ ಅಲಿಸ್ಸಾ ಹೀಲಿ (132) 3ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ ಡೇಂಡ್ರಾ ಡಾಟಿನ್ (127) 4ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸೋಮವಾರ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ T20 ಮಹಿಳಾ ಏಷ್ಯಾಕಪ್​ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಹಂಗಾಮಿ ನಾಯಕಿ ಸ್ಮೃತಿ ಮಂಧನಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಥಾಯ್ಲೆಂಡ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಮೂರನೇ ಓವರ್​ನಲ್ಲಿ 6 ರನ್​ಗಳಿಸಿದ್ದ ಸ್ಟಾರ್ ಆಟಗಾರ್ತಿ ನತ್ತಕಾನ್ ಚಂತಮ್ ಅವರ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾ ಬೌಲರ್ ದೀಪ್ತಿ ಶರ್ಮಾ ಶುಭಾರಂಭ ಮಾಡಿದ್ದರು.

ಇದರ ಬೆನ್ನಲ್ಲೇ ನಾಯಕಿ ಚೈವಾಯಿ (3) ರನೌಟ್ ಆದರು. ಈ ಹಂತದಲ್ಲಿ ದಾಳಿಗಿಳಿದ ಸ್ನೇಹಾ ರಾಣಾ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಪರಿಣಾಮ 24 ರನ್​ಗಳಿಸುವಷ್ಟರಲ್ಲಿ ಥಾಯ್ಲೆಂಡ್ ತಂಡವು ಪ್ರಮುಖ 6 ವಿಕೆಟ್ ಕಳೆದುಕೊಂಡಿತು. ಆ ಬಳಿಕ ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್ ಕಬಳಿಸಿದರೆ, ಮೇಘನಾ ಸಿಂಗ್ 1 ವಿಕೆಟ್ ಪಡೆದರು. ಅಂತಿಮವಾಗಿ ಥಾಯ್ಲೆಂಡ್ ತಂಡವು 15.1 ಓವರ್​ಗಳಲ್ಲಿ ಕೇವಲ 37 ರನ್​ಗಳಿಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಸ್ನೇಹಾ ರಾಣಾ 4 ಓವರ್​ಗಳಲ್ಲಿ 9 ರನ್​ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.

38 ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 3ನೇ ಓವರ್​ನಲ್ಲಿ ಸ್ಪೋಟಕ ಆಟಗಾರ್ತಿ ಶಫಾಲಿ ವರ್ಯಾ (8) ಕಳೆದುಕೊಂಡಿತು. ಇದಾಗ್ಯೂ ಪವರ್​ಪ್ಲೇನಲ್ಲಿ 40 ರನ್​ ಬಾರಿಸುವ ಮೂಲಕ ಭಾರತ ವನಿತೆಯರು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.