Women’s Asia Cup: ಆರಂಭಿಕರ ಸೂಪರ್ ಶೋ; ಏಷ್ಯಾಕಪ್​ನಲ್ಲಿ ಸತತ ಎರಡನೇ ಪಂದ್ಯ ಗೆದ್ದ ಭಾರತ ವನಿತಾ ತಂಡ

| Updated By: ಪೃಥ್ವಿಶಂಕರ

Updated on: Oct 03, 2022 | 6:21 PM

Women’s Asia Cup: ಏಷ್ಯಾಕಪ್-2022 ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದೆ. ತನ್ನ ಎರಡನೇ ಪಂದ್ಯದಲ್ಲಿ ಮಲೇಷ್ಯಾವನ್ನು ಸೋಲಿಸುವ ಮೂಲಕ ಹರ್ಮನ್ ಪಡೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ.

Women’s Asia Cup: ಆರಂಭಿಕರ ಸೂಪರ್ ಶೋ; ಏಷ್ಯಾಕಪ್​ನಲ್ಲಿ ಸತತ ಎರಡನೇ ಪಂದ್ಯ ಗೆದ್ದ ಭಾರತ ವನಿತಾ ತಂಡ
Indian women's cricket team
Follow us on

ಏಷ್ಯಾಕಪ್-2022 (Asia Cup-2022) ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ (Indian women’s cricket team) ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದೆ. ತನ್ನ ಎರಡನೇ ಪಂದ್ಯದಲ್ಲಿ ಮಲೇಷ್ಯಾವನ್ನು ಸೋಲಿಸುವ ಮೂಲಕ ಹರ್ಮನ್ ಪಡೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ತಂಡವನ್ನು 30 ರನ್‌ಗಳಿಂದ ಡಕ್ವರ್ತ್ ಲೂಯಿಸ್ ನಿಯಮದಡಿ (Duckworth-Lewis rule) ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಮಲೇಷ್ಯಾ ತಂಡ ಎರಡು ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿ ಆಡುತ್ತಿರುವಾಗ ಅನಿರೀಕ್ಷಿತವಾಗಿ ಎಂಟ್ರಿಕೊಟ್ಟ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು.

ಪಂದ್ಯ ಪುನರಾರಂಭವಾಗದ ಹಿನ್ನೆಲೆಯಲ್ಲಿ ಅಂಪೈರ್‌ಗಳು ಡಕ್‌ವರ್ತ್ ಲೂಯಿಸ್ ನಿಯಮವನ್ನು ಬಳಸಿಕೊಂಡು ಭಾರತವನ್ನು ವಿಜೇತ ತಂಡ ಎಂದು ಘೋಷಿಸಿದರು. ಇದಕ್ಕೂ ಮುನ್ನ ಭಾರತ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿತ್ತು. ಆದರೆ, ಈ ಪಂದ್ಯ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮವಾಗಿತ್ತು. ಈ ಪಂದ್ಯದಲ್ಲಿ ತಂಡದ ಅಗ್ರ-3 ಬ್ಯಾಟರ್​ಗಳು ಬಿರುಸಿನ ಸ್ಕೋರ್ ಮಾಡಿ ತಂಡಕ್ಕೆ ಉತ್ತಮ ಸ್ಕೋರ್ ನೀಡಿದರು.

ಮೇಘನಾ ಅರ್ಧಶತಕ

ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅವರ ಸ್ಥಾನದಲ್ಲಿ ಶಬಾಹಿನಿ ಮೇಘನಾ ಅವರು ಶೆಫಾಲಿ ವರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿ ಅದ್ಭುತ ಬ್ಯಾಟಿಂಗ್ ಮಾಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 53 ಎಸೆತಗಳನ್ನು ಎದುರಿಸಿದ ಮೇಘಾನಾ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 69 ರನ್ ಗಳಿಸಿದರು. ಕಳೆದ ಕೆಲವು ಪಂದ್ಯಗಳಲ್ಲಿ ಬೃಹತ್ ಸ್ಕೋರ್​ ಮಾಡುವಲ್ಲಿ ವಿಫಲರಾಗಿದ್ದ ಶೆಫಾಲಿ ವರ್ಮಾ ಈ ಪಂದ್ಯದಲ್ಲಿ 46 ರನ್​ಗಳ ಇನಿಂಗ್ಸ್ ಆಡಿದರು. 39 ಎಸೆತಗಳನ್ನು ಎದುರಿಸಿದ ಶೆಫಾಲಿ, ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಇವರಿಬ್ಬರನ್ನು ಬಿಟ್ಟರೆ ರಿಚಾ ಘೋಷ್ ಕೇವಲ 19 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಔಟಾಗದೆ 33 ರನ್ ಗಳಿಸಿದರು.

ಈ ಪಂದ್ಯದಲ್ಲಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸ್ವತಃ ಬ್ಯಾಟಿಂಗ್ ಮಾಡದೆ ಇತರ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಿದರು. ಕಿರಣ್ ನವಗಿರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ರಾಧಾ ಯಾದವ್ ನಾಲ್ಕು ಎಸೆತಗಳಲ್ಲಿ ಎಂಟು ರನ್ ಗಳಿಸಿದರು. ದಯಾಲನ್ ಹೇಮಲತಾ ನಾಲ್ಕು ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗಿ ಉಳಿದರು.

ಮಲೇಷ್ಯಾಕ್ಕೆ ಕಳಪೆ ಆರಂಭ

182 ರನ್‌ಗಳ ಗುರಿ ಬೆನ್ನತ್ತಿದ ಮಲೇಷ್ಯಾ ತಂಡ ಕಳಪೆ ಆರಂಭ ಪಡೆದಿತ್ತು. ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ದೀಪ್ತಿ ಶರ್ಮಾ ನಾಯಕಿ ವಿನ್‌ಫೀಲ್ಡ್ ದುರಾಸಿಂಗಮ್ ಅವರನ್ನು ಖಾತೆ ತೆರೆಯದೆ ಔಟ್ ಮಾಡಿದರು. ವ್ಯಾನ್ ಜೂಲಿಯಾಳನ್ನು ರಾಜೇಶ್ವರಿ ಗಾಯಕ್ವಾಡ್ ವೈಯಕ್ತಿಕ ಸ್ಕೋರ್ ಒಂದು ರನ್‌ನಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ಮಾಸ್ ಅಲಿಸ್ಸಾ 14 ಮತ್ತು ಎಲ್ಸಾ ಹಂಟರ್ ಕೇವಲ ಒಂದು ರನ್ ಗಳಿಸಿದ್ದಾಗ ಮಳೆ ಬಂದ ನಂತರ ಪಂದ್ಯವನ್ನು ನಿಲ್ಲಿಸಲಾಯಿತು.