
ಒಂದೆಡೆ 2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪ್ರಸ್ತುತ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿದ್ದರೆ, ಮತ್ತೊಂದೆಡೆ ಥೈಲ್ಯಾಂಡ್‌ನಲ್ಲಿ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ (Women’s Asia Cup Rising Stars) ಭಾರತ ಎ ಮಹಿಳಾ ತಂಡ ಕೂಡ ಇಂದಿನಿಂದ ತನ್ನ ಅಭಿಯಾನವನ್ನು ಆರಂಭಿಸಿದೆ. ಇಂದು ನಡೆದ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಿದ ಭಾರತ ಎ ಮಹಿಳಾ ತಂಡ ಹೀನಾಯ ಸೋಲಿಗೆ ಕೊರಳೊಡ್ಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ 20 ಓವರ್‌ಗಳಲ್ಲಿ ಕೇವಲ 130 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಯುಎಇ 3 ವಿಕೆಟ್ ಕಳೆದುಕೊಂಡು 19.2 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿತು.
ಇಂದಿನಿಂದ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಪಂದ್ಯಾವಳಿ ಫೆಬ್ರವರಿ 13 ಶುಕ್ರವಾರದಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಪ್ರಾರಂಭವಾಗಿದೆ. 2025 ರ ಮಹಿಳಾ ವಿಶ್ವಕಪ್ ಗೆದ್ದ ಮತ್ತು ಇತ್ತೀಚೆಗೆ ಡಬ್ಲ್ಯೂಪಿಎಲ್ 2026 ಅನ್ನು ಗೆದ್ದ ಸ್ಟಾರ್ ಆಲ್‌ರೌಂಡರ್ ರಾಧಾ ಯಾದವ್ ಈ ಪಂದ್ಯಾವಳಿಯಲ್ಲಿ ಭಾರತೀಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಡಬ್ಲ್ಯೂಪಿಎಲ್ ಎರಡರಲ್ಲೂ ತಮ್ಮ ಛಾಪು ಮೂಡಿಸಿದ ಹಲವಾರು ಇತರ ಆಟಗಾರ್ತಿಯರು ಸಹ ಭಾರತೀಯ ತಂಡದ ಭಾಗವಾಗಿದ್ದಾರೆ. ಆದರೆ ಇದರ ಹೊರತಾಗಿಯೂ ಭಾರತ ಮಹಿಳಾ ತಂಡ ಮೊದಲ ಪಂದ್ಯದಲ್ಲಿಯೇ ಸೋಲನ್ನು ಅನುಭವಿಸಬೇಕಾಯಿತು.
ಈ ಪಂದ್ಯದಲ್ಲಿ, ಭಾರತ ಎ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತಾದರೂ ತಂಡದ ಬ್ಯಾಟಿಂಗ್ ಶೋಚನೀಯವಾಗಿ ವಿಫಲವಾಯಿತು. ಯುಎಇಯಂತಹ ದುರ್ಬಲ ತಂಡದ ವಿರುದ್ಧ ಭಾರತ ಎ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 130 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಅನುಷ್ಕಾ ಶರ್ಮಾ 47 ರನ್ ಕಲೆಹಾಕುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ತನುಜಾ ಕನ್ವರ್ ಕೆಳ ಕ್ರಮಾಂಕದಲ್ಲಿ 34 ರನ್‌ಗಳ ಕಾಣಿಕೆ ನೀಡಿದರು. ಇವರಿಬ್ಬರನ್ನು ಹೊರತುಪಡಿಸಿ, ಇತರ 7 ಆಟಗಾರ್ತಿಯರಿಗೆ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಯುಎಇ ಪರ ಸಮೈರಾ 3 ವಿಕೆಟ್ ಪಡೆದರು.
IND vs PAK: ಟಿ20 ವಿಶ್ವಕಪ್ನಲ್ಲಿ ಭಾರತ- ಪಾಕ್ ಮುಖಾಮುಖಿ ದಾಖಲೆ ಹೇಗಿದೆ?
ಈ ಗುರಿ ಬೆನ್ನಟ್ಟಿದ ಯುಎಇ ಪರ ನಾಯಕಿ ಮತ್ತು ಆರಂಭಿಕ ಬ್ಯಾಟರ್ ಇಶಾ ಓಜಾ 61 ಎಸೆತಗಳಲ್ಲಿ ಔಟಾಗದೆ 72 ರನ್ ಗಳಿಸಿ, ಯುಎಇ ಕೇವಲ 19.2 ಓವರ್‌ಗಳಲ್ಲಿ ಈ ಗುರಿ ತಲುಪಲು ಸಹಾಯ ಮಾಡಿದಲ್ಲದೆ ಎಲ್ಲರನ್ನೂ ಅಚ್ಚರಿಗೊಳಿಸಿದರು. ನಾಯಕಿ ರಾಧಾ ಸೇರಿದಂತೆ ಭಾರತೀಯ ಬೌಲರ್‌ಗಳು ಇಶಾ ಓಜಾ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ವಿಫಲರಾದರು. ಅಂತಿಮವಾಗಿ, ಯುಎಇ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತಕ್ಕೆ ಮರೆಯಲಾಗದ ಆಘಾತ ನೀಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 pm, Fri, 13 February 26