
2026 ರ ಮಹಿಳಾ ಟಿ20 ವಿಶ್ವಕಪ್ ( Women’s T20 World Cup 2026) ಇನ್ನೇರಡು ದಿನಗಳಲ್ಲಿ ಆರಂಭವಾಗಲಿದೆ. ಅದರ ತಯಾರಿಯಾಗಿ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಅದರಂತೆ ಟೀಂ ಇಂಡಿಯಾ ಕೂಡ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ (England vs India Women Warm-up) ಗೆಲುವಿನಂಚಲ್ಲಿ ಎಡವಿ 5 ರನ್‌ಗಳಿಂದ ಸೋಲನ್ನಪ್ಪಿತು. ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 171 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೂಡ ಗೆಲುವಿಗಾಗಿ ಹೋರಾಟ ನೀಡಿತು. ಆದರೆ ಕೊನೆಯ ಓವರ್‌ನಲ್ಲಿ 3 ಎಸೆತಗಳಲ್ಲಿ 6 ರನ್ ಬಾರಿಸಲು ವಿಫಲವಾಗಿ ಸೋಲಿಗೆ ಕೊರಳೊಡ್ಡಬೇಕಾಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 171 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ತಂಡದ ಪರ ಆರಂಭಿಕ ಆಟಗಾರ್ತಿ ಆಮಿ ಜೋನ್ಸ್ ಅದ್ಭುತ 64 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕಿ ನ್ಯಾಟ್ ಸಿವರ್-ಬ್ರಂಟ್ 57 ರನ್‌ಗಳ ಕಾಣಿಕೆ ನೀಡಿದರು. ಉಳಿದಂತೆ ಡ್ಯಾನಿ ಗಿಬ್ಸನ್ 30 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ ಪರ ಶ್ರೇಯಾಂಕ ಪಾಟೀಲ್ ಎರಡು ವಿಕೆಟ್ ಪಡೆದರೆ, ಶಫಾಲಿ ವರ್ಮಾ, ರೇಣುಕಾ ಸಿಂಗ್, ರಾಧಾ ಯಾದವ್ ಮತ್ತು ಶ್ರೀ ಚರಣಿ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕಳಪೆ ಆರಂಭ ನೀಡಿತು. ಉಪನಾಯಕಿ ಸ್ಮೃತಿ ಮಂಧಾನ ಕೇವಲ 1 ರನ್‌ಗೆ ಔಟಾದರು. ಶಫಾಲಿ ವರ್ಮಾ ಕೂಡ 13 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಯಸ್ತಿಕಾ ಭಾಟಿಯಾ (15), ಹರ್ಮನ್‌ಪ್ರೀತ್ ಕೌರ್ (17), ಮತ್ತು ಭಾರತಿ ಫುಲ್ಮಾಲಿ (18) ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಆದರೆ ಒಂದು ತುದಿಯಲ್ಲಿ ಹೋರಾಟದ ಇನ್ನಿಂಗ್ಸ್ ಕಟ್ಟಿದ ರಿಚಾ ಘೋಷ್ 36 ಎಸೆತಗಳಲ್ಲಿ 68 ರನ್ ಬಾರಿಸಿದರು. ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿದ್ದವು.
Womens T20 World Cup 2026: ಮಹಿಳಾ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟ
ರಿಚಾ ಘೋಷ್ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರಾದರೂ ಕೊನೆಯ ಓವರ್ನ 4ನೇ ಎಸೆತದಲ್ಲಿ ಅವರ ವಿಕೆಟ್ ಪತನದೊಂದಿಗೆ ತಂಡಕ್ಕೆ ಸೋಲು ಖಚಿತವಾಯಿತು. ವಾಸ್ತವವಾಗಿ 20ನೇ ಓವರ್ನ ಕೊನೆಯ 3 ಎಸೆತಗಳಲ್ಲಿ ತಂಡದ ಗೆಲುವಿಗೆ 6 ರನ್‌ಗಳು ಬೇಕಾಗಿದ್ದವು. ಆದರೆ 4ನೇ ಎಸೆತದಲ್ಲಿ ರಿಚಾ ಔಟಾದರೆ, ಆ ನಂತರದ ಎಸೆತದಲ್ಲಿ ರೇಣುಕಾ ಸಿಂಗ್ ಔಟಾಗುವ ಮೂಲಕ ತಂಡ ಆಲೌಟ್ ಆಯಿತು. ಹೀಗಾಗಿ ಹರ್ಮನ್ ಪಡೆ 5 ರನ್‌ಗಳಿಂದ ಪಂದ್ಯವನ್ನು ಸೋತಿತು. ಅಂತಿಮವಾಗಿ ಟೀಂ ಇಂಡಿಯಾ 19.5 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್ ಆಯಿತು.