WPL 2023: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (Womens Day) ವಿಶೇಷವಾಗಿ ಆಚರಿಸಲು ವುಮೆನ್ಸ್ ಪ್ರೀಮಿಯರ್ ಲೀಗ್ (WPL 2023) ನಿರ್ಧರಿಸಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಅಂದರೆ ಮಾರ್ಚ್ 8, 2023 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ ಪಂದ್ಯಕ್ಕೆ ಉಚಿತ ಟಿಕೆಟ್ ಘೋಷಿಸಲಾಗಿದೆ. ಮಹಿಳಾ ದಿನಾಚರಣೆಯ ಗೌರವಾರ್ಥವಾಗಿ GG vs RCB ಪಂದ್ಯಕ್ಕೆ ಎಂಟ್ರಿ ಫ್ರೀ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ ಮಹಿಳೆಯರಿಗೆ ಉಚಿತ ಟಿಕೆಟ್‌ಗಳನ್ನು ನೀಡುತ್ತಿದೆ. ಇದಾಗ್ಯೂ ಪುರುಷ ಪ್ರೇಕ್ಷಕರು ಮಾತ್ರ ರೂ. 100 ರಿಂದ 400 ರೂ. ಒಳಗಿನ ಟಿಕೆಟ್ ತೆಗೆದುಕೊಳ್ಳಬೇಕಿತ್ತು. ಆದರೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪುರುಷರು ಮತ್ತು ಮಹಿಳೆಯರಿಗೆ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತಿರುವುದು ವಿಶೇಷ.
ಅದರಂತೆ ಮಾರ್ಚ್ 8 ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ನಡುವಣ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು. ಇಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ತಿಳಿಸಲಾಗಿದೆ. ಹೀಗಾಗಿ ಸ್ಟೇಡಿಯಂ ತುಂಬಿದ ಬಳಿಕ ಬಂದವರಿಗೆ ಗ್ಯಾಲರಿಯಲ್ಲಿ ಕೂತು ಪಂದ್ಯವನ್ನು ವೀಕ್ಷಿಸಲು ಅವಕಾಶ ಇರುವುದಿಲ್ಲ.
ಈಗಾಗಲೇ ಎರಡು ಪಂದ್ಯಗಳನ್ನಾಡಿರುವ ಆರ್ಸಿಬಿ 2 ಮ್ಯಾಚ್ನಲ್ಲೂ ಸೋತಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 143 ರನ್ಗಳಿಂದ ಹೀನಾಯವಾಗಿ ಸೋತಿದ್ದ ಸ್ಮೃತಿ ಮಂಧಾನ ಪಡೆ, 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ಗಳಿಂದ ಸೋಲನುಭವಿಸಿತ್ತು. ಇದೀಗ ಮಹಿಳಾ ದಿನಾಚರಣೆಯ ದಿನದಂದು ಆರ್ಸಿಬಿ ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಜಯದ ಖಾತೆ ತೆರೆಯಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: WTC Final: ಹೀಗಾದ್ರೆ ಮಾತ್ರ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ದಿಶಾ ಕಸತ್, ರಿಚಾ ಘೋಷ್(ವಿಕೆಟ್ ಕೀಪರ್), ಹೀದರ್ ನೈಟ್, ಕನಿಕಾ ಅಹುಜಾ, ಆಶಾ ಶೋಬನಾ, ಮೇಗನ್ ಸ್ಚುಟ್, ಪ್ರೀತಿ ಬೋಸ್, ರೇಣುಕಾ ಠಾಕೂರ್ ಸಿಂಗ್, ಡೇನ್ ವ್ಯಾನ್ ನೀಕರ್ಕ್, ಇಂದ್ರಾಣಿ ರಾಯ್, ಎರಿನ್ ಬರ್ನ್ಸ್, ಪೂನಂ ಖೇಮ್ನಾರ್, ಸಹನಾ ಪವಾರ್, ಶ್ರೇಯಾಂಕ ಪಾಟೀಲ್, ಕೋಮಲ್ ಝಂಝಾದ್.
Published On - 3:35 pm, Tue, 7 March 23