Sunil Gavaskar: ಹೀಗೆ ಮಾಡಿದ್ರೆ ಭಾರತ 4ನೇ ಟೆಸ್ಟ್ ಪಂದ್ಯ ಗೆಲ್ಲುತ್ತೆ…ಆದರೆ
India vs Australia 4th Test: ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಹಾಗೂ 4ನೇ ಟೆಸ್ಟ್ ಪಂದ್ಯವು ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ಶುರುವಾಗಲಿದೆ.
India vs Australia 4th Test: ಅಹಮದಾಬಾದ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಸುನಿಲ್ ಗವಾಸ್ಕರ್ (Sunil Gavaskar) ಬಿಸಿಸಿಐಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 4ನೇ ಟೆಸ್ಟ್ ಪಂದ್ಯಕ್ಕಾಗಿ ಮತ್ತೊಮ್ಮೆ ಟರ್ನಿಂಗ್ ಟ್ರ್ಯಾಕ್ ಮಾಡಿದರೆ, ಭಾರತ ತಂಡವು ಪಂದ್ಯವನ್ನು ಗೆಲ್ಲಬಹುದು. ಆದರೆ ಈ ಪಿಚ್‌ಗೂ ಡಿಮೆರಿಟ್ ಪಾಯಿಂಟ್ ಸಿಗಬಹುದು ಎಂದು ಗವಾಸ್ಕರ್ ಎಚ್ಚರಿಸಿದ್ದಾರೆ. ಐಸಿಸಿ ನಿಯಮಗಳ ಪ್ರಕಾರ ಯಾವುದಾದರು ಪಿಚ್ ಸತತವಾಗಿ 5 ವರ್ಷಗಳ ಅವಧಿಯಲ್ಲಿ 5 ಡಿಮೆರಿಟ್ ಪಾಯಿಂಟ್ ಪಡೆದರೆ ಆ ಮೈದಾನವನ್ನು 1 ವರ್ಷಗಳ ಕಾಲ ನಿಷೇಧ ಮಾಡಲಿದೆ. ಹೀಗಾಗಿ ಪಿಚ್ ನಿರ್ಮಾಣದಲ್ಲಿ ಇದೀಗ ಎಲ್ಲಾ ಕ್ರಿಕೆಟ್ ಮಂಡಳಿಗಳು ಎಚ್ಚರಿಕೆ ವಹಿಸುತ್ತಿದೆ.
ಇದಾಗ್ಯೂ ಇಂದೋರ್ ಪಿಚ್ಗೆ ಈಗಾಗಲೇ ಐಸಿಸಿ 3 ಡಿಮೆರಿಟ್ ಪಾಯಿಂಟ್ ನೀಡಿದೆ. ಇದೇ ಕಾರಣದಿಂದಾಗಿ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲೂ ಭಾರತ ತಂಡ ಗೆಲ್ಲಲು ಪಿಚ್ ರೂಪಿಸಿದರೆ ಅದರಿಂದ ಡಿಮೆರಿಟ್ ಪಾಯಿಂಟ್ ಸಿಗುವ ಸಾಧ್ಯತೆಯಿದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸುನಿಲ್ ಗವಾಸ್ಕರ್ ಪ್ರಕಾರ, ಪಿಚ್ ಬೌಲರ್ ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಸಮಾನವಾಗಿ ನೆರವು ನೀಡುವಂತಿರಬೇಕು. ಇದು ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯನ್ನು ಉಂಟು ಮಾಡಬಹುದು. ಆದರೆ ಬೌಲರ್ ಹಾಗೂ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಿದರೆ ಮಾತ್ರ ಪಂದ್ಯವು ಸ್ಪರ್ಧಾತ್ಮಕವಾಗಿರುತ್ತದೆ ಎಂದು ತಿಳಿಸಿದ್ದಾರೆ.
ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಸೋತಿದ್ದರೂ ಇಂದೋರ್‌ನಲ್ಲಿ ಗೆದ್ದು ಅಮೋಘ ಪುನರಾಗಮನ ಮಾಡಿದೆ. ಇದೀಗ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲೂ ಗೆದ್ದು ಆಸ್ಟ್ರೇಲಿಯಾ ತಂಡವು ಸರಣಿ ಡ್ರಾ ಮಾಡಿಕೊಳ್ಳುವ ಇರಾದೆಯಲ್ಲಿದೆ. ಇತ್ತ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಜಯ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರುವ ತವಕದಲ್ಲಿದೆ.
ಇದರ ನಡುವೆ 4ನೇ ಟೆಸ್ಟ್ ಪಂದ್ಯಕ್ಕಾಗಿ ಪಿಚ್ ಹೇಗಿರಲಿದೆ ಎಂಬ ಚರ್ಚೆಗಳು ಕೂಡ ಶುರುವಾಗಿದೆ. ಏಕೆಂದರೆ ಇದುವರೆಗಿನ ಮೂರು ಪಂದ್ಯಗಳ ಪಿಚ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಹೀಗಾಗಿಯೇ ಅಹಮದಾಬಾದ್‌ನಲ್ಲಿ ಪಿಚ್‌ನ ಸ್ವರೂಪ ಹೇಗಿರಲಿದೆ ಎಂಬ ಚರ್ಚೆ ತೀವ್ರಗೊಂಡಿದೆ.
ಬ್ಯಾಟ್ಸ್ಮನ್ ಹಾಗೂ ಬೌಲರ್‌ಗಳಿಗೆ ಉತ್ತಮ ಸಮತೋಲನ ಹೊಂದಿರುವ ಪಿಚ್‌ಗಳನ್ನು ನಿರ್ಮಿಸಬೇಕು. ಮೊದಲ ಎರಡು ದಿನಗಳಲ್ಲಿ ಹೊಸ ಚೆಂಡಿನ ಮೂಲಕ ಬೌಲರ್‌ಗಳಿಗೆ ನೆರವಾಗುವಂತಹ ಪಿಚ್‌ನ ಅಗತ್ಯವಿದೆ. ಆ ಬಳಿಕ ಬ್ಯಾಟ್ಸ್ಮನ್ಗಳು ಕೂಡ ರನ್ಗಳಿಸಬಹುದು. ಅಷ್ಟೇ ಅಲ್ಲದೆ ಮೂರನೇ ಮತ್ತು ನಾಲ್ಕನೇ ದಿನದಲ್ಲಿ ಚೆಂಡು ಸ್ವಲ್ಪ ತಿರುವು ಪಡೆಯಬಹುದು. ಇದಾಗ್ಯೂ ಬ್ಯಾಟರ್ಗಳಿಗೆ ರನ್ಗಳಿಸಲು ಕಷ್ಟವಾಗುವುದಿಲ್ಲ.
ಆದರೆ ಅಹಮದಾಬಾದ್‌ನಲ್ಲಿ ಏನಾಗಲಿದೆ ಎಂದು ನನಗೆ ತಿಳಿದಿಲ್ಲ. ಅಲ್ಲಿ ಕೂಡ ಬೌಲರ್‌ಗಳಿಗೆ ನೆರವಾಗುವಂತಹ ತಿರುವು ಪಡೆಯುವ ಪಿಚ್ ರೂಪಿಸಿದರೆ ಭಾರತ ಗೆಲ್ಲಬಹುದು. ಆದರೆ ಆ ಪಿಚ್‌ಗೂ ಡಿಮೆರಿಟ್ ಪಾಯಿಂಟ್ ಸಿಗುವ ಸಾಧ್ಯತೆಯಿದೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ: WPL 2023: ಬಣ್ಣದೋಕುಳಿಯಲ್ಲಿ ಮಿಂದೆದ್ದ RCB ಆಟಗಾರ್ತಿಯರು: ಇಲ್ಲಿದೆ ಫೋಟೋಸ್
ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಹಾಗೂ 4ನೇ ಟೆಸ್ಟ್ ಪಂದ್ಯವು ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ಶುರುವಾಗಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.