WPL 2023: RCB ತಂಡಕ್ಕೆ ಸತತ ಸೋಲು..!

| Updated By: ಝಾಹಿರ್ ಯೂಸುಫ್

Updated on: Mar 06, 2023 | 11:09 PM

Mumbai Indians Women vs Royal Challengers Bangalore Women: 43 ರನ್​ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್​ಸಿಬಿ ತಂಡಕ್ಕೆ ಎಲ್ಲಿಸ್ ಪೆರ್ರಿ ಹಾಗೂ ರಿಚಾ ಘೋಷ್ ಆಸರೆಯಾದರು.

WPL 2023: RCB ತಂಡಕ್ಕೆ ಸತತ ಸೋಲು..!
RCB
Follow us on

WPL 2023: ಮುಂಬೈ ಬ್ರಬೋರ್ನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ ತನ್ನ 2ನೇ ಪಂದ್ಯದಲ್ಲೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬ್ಯಾಟಿಂಗ್ ಆಯ್ಕೆ ಮಾಡಿದರು. ಅದರಂತೆ ಇನಿಂಗ್ಸ್ ಆರಂಭಿಸಿದ ಬೆಂಗಳೂರು ತಂಡವು ಉತ್ತಮ ಆರಂಭ ಪಡೆಯಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಸೋಫಿ ಡಿವೈನ್ 3 ಓವರ್​ನಲ್ಲೇ ತಂಡದ ಮೊತ್ತವನ್ನು 30 ರ ಗಡಿದಾಟಿಸಿದ್ದರು.

ಆದರೆ ತಂಡದ ಮೊತ್ತ 39 ಆಗಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಸೋಫಿ ಡಿವೈನ್ (16) ಸೈಕಾ ಇಶಾಕ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ದಿಶಾ ಕಸಟ್ (0) ಕೂಡ ಕ್ಲೀನ್ ಬೌಲ್ಡ್ ಆದರು. ಇನ್ನು 6ನೇ ಓವರ್​ನಲ್ಲಿ ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಸ್ಮೃತಿ ಮಂಧಾನ (23) ವೋಂಗ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ಹೀದರ್ ನೈಟ್ (0) ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

43 ರನ್​ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್​ಸಿಬಿ ತಂಡಕ್ಕೆ ಎಲ್ಲಿಸ್ ಪೆರ್ರಿ ಹಾಗೂ ರಿಚಾ ಘೋಷ್ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ತಂಡದ ಮೊತ್ತವನ್ನು 71 ಕ್ಕೇರಿಸಿದರು. ಈ ಹಂತದಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ಎಲ್ಲಿಸ್ ಪೆರ್ರಿ (13) ರನೌಟ್ ಆದರು. ಇನ್ನು ರಿಚಾ ಘೋಷ್ (28), ಕನ್ನಿಕಾ ಅಹುಜಾ (22) ರನ್ ಬಾರಿಸಿ ಹೊರನಡೆದರು.

ಇದನ್ನೂ ಓದಿ
Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
Rishabh Pant: ಅಪಘಾತದ ಬಳಿಕ ಜೀವನ ಹೇಗಿದೆ? ಮುಕ್ತವಾಗಿ ಮಾತನಾಡಿದ ರಿಷಭ್ ಪಂತ್
IPL 2023: ಐಪಿಎಲ್​ ವೇಳೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ RCB ತ್ರಿಮೂರ್ತಿಗಳು
IPL 2023: ಐಪಿಎಲ್​ನಿಂದ ಬುಮ್ರಾ ಔಟ್: ಮುಂಬೈ ಇಂಡಿಯನ್ಸ್​ ಮುಂದಿದೆ 3 ಆಯ್ಕೆಗಳು

ಮತ್ತೊಂದೆಡೆ ಚೊಚ್ಚಲ ಪಮದ್ಯವಾಡಿದ ಕರ್ನಾಟಕದ ಆಟಗಾರ್ತಿ ಶ್ರೇಯಾಂಕ ಪಾಟೀಲ್ 15 ಎಸೆತಗಳಲ್ಲಿ 23 ರನ್​ ಬಾರಿಸಿ ಉಪಯುಕ್ತ ಕಾಣಿಕೆ ನೀಡಿದರು. ಹಾಗೆಯೇ ಮೇಗನ್ ಶಟ್ ಅಂತಿಮ ಓವರ್​ಗಳ ವೇಳೆ 20 ರನ್​ ಬಾರಿಸಿದರು. ಆದರೆ ವಿಕೆಟ್ ಕೈಚೆಲ್ಲುತ್ತಾ ಸಾಗಿದ ಆರ್​ಸಿಬಿ 18.4 ಓವರ್​ಗಳಲ್ಲಿ 155 ರನ್​ಗಳಿಸಿ ಆಲೌಟ್ ಆಯಿತು.

156 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡವು ಅದ್ಭುತ ಆರಂಭ ಪಡೆಯಿತು. ಆರಂಭಿಕ ಅಟಗಾರ್ತಿಯರಾದ ಯಾಸ್ತಿಕಾ ಭಾಟಿಯಾ ಹಾಗೂ ಹೇಲಿ ಮ್ಯಾಥ್ಯೂಸ್ ಆರಂಭದಲ್ಲೇ ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದರು. ಕೇವಲ 5 ಓವರ್​ಗಳಲ್ಲಿ 45 ರನ್​ ಪೇರಿಸಿದ್ದ ವೇಳೆ ಯಾಸ್ತಿಕಾ ಭಾಟಿಯಾ (23) ಎಲ್​ಬಿಡಬ್ಲ್ಯೂ ಆಗಿ ಔಟಾದರು.
ಈ ಹಂತದಲ್ಲಿ ಜೊತೆಯಾದ ಹೇಲಿ ಮ್ಯಾಥ್ಯೂಸ್ ಹಾಗೂ ನ್ಯಾಟ್ ಸಿವರ್ ಬ್ರಂಟ್ ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕೇವಲ 26 ಎಸೆತಗಳಲ್ಲಿ ಮ್ಯಾಥ್ಯೂಸ್ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬ್ರಂಟ್ (55) ಕೂಡ ಬ್ಯಾಟ್ ಮೇಲೆತ್ತಿದರು.

ಅರ್ಧಶತಕದ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಹೇಲಿ ಮ್ಯಾಥ್ಯೂಸ್ ಕೇವಲ 38 ಎಸೆತಗಳಲ್ಲಿ 13 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ ಅಜೇಯ 77 ರನ್​ ಬಾರಿಸಿದರು. ಪರಿಣಾಮ ಕೇವಲ 14.2 ಓವರ್​ಗಳಲ್ಲಿ 159 ರನ್​ಗಳ ಗುರಿ ಮುಟ್ಟುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ದಿಶಾ ಕಸತ್, ರಿಚಾ ಘೋಷ್ (ವಿಕೆಟ್ ಕೀಪರ್), ಹೀದರ್ ನೈಟ್, ಕನಿಕಾ ಅಹುಜಾ, ಮೇಗನ್ ಶಟ್, ಶ್ರೇಯಾಂಕಾ ಪಾಟೀಲ್, ಪ್ರೀತಿ ಬೋಸ್, ರೇಣುಕಾ ಠಾಕೂರ್ ಸಿಂಗ್

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ಇದನ್ನೂ ಓದಿ: WTC Final: ಹೀಗಾದ್ರೆ ಮಾತ್ರ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ​ ಫೈನಲ್​ಗೇರಬಹುದು..!

ಆರ್​ಸಿಬಿಗೆ ಸತತ ಸೋಲು:

ಆರ್​ಸಿಬಿ ಆಡಿದ ಮೊದಲ ಪಂದ್ಯದಲ್ಲೂ ಹೀನಾಯವಾಗಿ ಸೋಲನುಭವಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲಿ ಆರ್​ಸಿಬಿ 143 ರನ್​ಗಳಿಂದ ಸೋಲೊಪ್ಪಿಕೊಂಡಿತ್ತು. ಇದೀಗ 2ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್​​ಗಳ ಹೀನಾಯ ಸೋಲನುಭವಿಸಿದೆ.

 

Published On - 10:39 pm, Mon, 6 March 23