WPL 2024: ಇಂದು RCB vs DC ಮುಖಾಮುಖಿ
RCB vs DC: ವುಮೆನ್ಸ್ ಪ್ರೀಮಿಯರ್ ಲೀಗ್ನ 2ನೇ ಆವೃತ್ತಿಯಲ್ಲಿ ಆರ್ಸಿಬಿ ಆಡಿರುವ ಎರಡೂ ಪಂದ್ಯಗಳಲ್ಲೂ ಜಯ ಸಾಧಿಸಿದೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಪಂದ್ಯದಲ್ಲಿ ವಿರೋಚಿತ ಸೋಲುಂಡರೆ, 2ನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2024) 7ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ 3ನೇ ಮ್ಯಾಚ್ ಎಂಬುದು ವಿಶೇಷ. ಅಂದರೆ ಎರಡೂ ತಂಡಗಳು ಈಗಾಗಲೇ ತಲಾ 2 ಪಂದ್ಯಗಳನ್ನಾಡಿದೆ.
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 2ನೇ ಪಂದ್ಯದದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಮತ್ತೊಂದೆಡೆ ಆರ್ಸಿಬಿ ತಂಡವು ಎರಡೂ ಪಂದ್ಯಗಳಲ್ಲೂ ಜಯಭೇರಿ ಬಾರಿಸಿದೆ.
ಯುಪಿ ವಾರಿಯರ್ಸ್ ವಿರುದ್ಧ ಮೊದಲ ಮ್ಯಾಚ್ನಲ್ಲಿ 2 ರನ್ಗಳ ರೋಚಕ ಜಯ ಸಾಧಿಸಿದ್ದ ಆರ್ಸಿಬಿ, ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯ ಸಾಧಿಸುವ ಇರಾದೆಯಲ್ಲಿದೆ.
ಉಭಯ ತಂಡಗಳ ಮುಖಾಮುಖಿ:
ವುಮೆನ್ಸ್ ಪ್ರೀಮಿಯರ್ ಲೀಗ್ 2023 ರಲ್ಲಿ ಉಭಯ ತಂಡಗಳು 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಎರಡೂ ಮ್ಯಾಚ್ಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದುಕೊಂಡಿರುವುದು ವಿಶೇಷ. ಅಂದರೆ ಈ ಬಾರಿಯ ಮುಖಾಮುಖಿಯಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಮೊದಲ ಜಯದ ನಿರೀಕ್ಷೆಯಲ್ಲಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.