WPL 2024: ಬರೋಬ್ಬರಿ 1.3 ಕೋಟಿ ರೂ.ಗೆ ಹರಾಜಾದ ಕನ್ನಡತಿ

| Updated By: ಝಾಹಿರ್ ಯೂಸುಫ್

Updated on: Dec 09, 2023 | 5:26 PM

Vrinda Dinesh: ಟೀಮ್ ಇಂಡಿಯಾದ ಯುವ ಭರವಸೆಯ ಆಟಗಾರ್ತಿಯರಲ್ಲಿ ವೃಂದಾ ದಿನೇಶ್ ಕೂಡ ಒಬ್ಬರು. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಈ ಹಿಂದೆ ನಡೆದ ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಕರ್ನಾಟಕ ಪರ ವೃಂದಾ ಭರ್ಜರಿ ಪ್ರದರ್ಶನ ನೀಡಿದ್ದರು.

WPL 2024: ಬರೋಬ್ಬರಿ 1.3 ಕೋಟಿ ರೂ.ಗೆ ಹರಾಜಾದ ಕನ್ನಡತಿ
Vrinda Dinesh
Follow us on

ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2024) ಆಕ್ಷನ್​ನಲ್ಲಿ ಕೆಲ ಸ್ಟಾರ್ ಆಟಗಾರ್ತಿಯರು ಅನ್​ಸೋಲ್ಡ್ ಆದರೆ, ಇನ್ನು ಕೆಲ ಯುವ ಆಟಗಾರ್ತಿಯರು ಕೋಟಿ ರೂ.ಗೆ ಹರಾಜಾಗಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ವೃಂದಾ ದಿನೇಶ್ ಕೂಡ ಇರುವುದು ವಿಶೇಷ. WPL ಸೀಸನ್-2 ಹರಾಜಿನಲ್ಲಿ 10 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಕನ್ನಡತಿಯ ಖರೀದಿಗೆ ಆರಂಭದಲ್ಲಿ ಆರ್​ಸಿಬಿ ಆಸಕ್ತಿವಹಿಸಿತು.

ವೃಂದಾ ದಿನೇಶ್ ಹೆಸರು ಕೂಗುತ್ತಿದ್ದಂತೆ ಆರ್​ಸಿಬಿ 15 ಲಕ್ಷ ರೂ. ಮೊದಲ ಬಿಡ್ ಮಾಡಿತು. ಆದರೆ ಈ ವೇಳೆ ಪೈಪೋಟಿಗೆ ಇಳಿದ ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್​ ಆರ್​ಸಿಬಿಯ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿತು.

ಅದರಲ್ಲೂ ಕರ್ನಾಟಕದ ಯುವ ಆಟಗಾರ್ತಿಯರ ಖರೀದಿಗೆ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್​ ನಡುವೆ ಹೆಚ್ಚಿನ ಪೈಪೋಟಿ ಕಂಡು ಬಂತು. ಪರಿಣಾಮ ವೃಂದಾ ದಿನೇಶ್ ಅವರ ಮೌಲ್ಯವು ಏಕಾಏಕಿ 1 ಕೋಟಿ ರೂ. ದಾಟಿತು.

ಇದಾಗ್ಯೂ ಯುಪಿ ವಾರಿಯರ್ಸ್, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ಯುವ ಆಟಗಾರ್ತಿಯ ಖರೀದಿಗೆ ಪೈಪೋಟಿಯನ್ನು ಮುಂದುವರೆಸಿತು. ಅಂತಿಮವಾಗಿ 1.30 ಕೋಟಿ ನೀಡುವ ಮೂಲಕ ಯುಪಿ ವಾರಿಯರ್ಸ್ ವೃಂದಾ ದಿನೇಶ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಸ್ಪೋಟಕ ಬ್ಯಾಟರ್ ವೃಂದಾ:

ಭಾರತದ ಯುವ ಭರವಸೆಯ ಆಟಗಾರ್ತಿಯರಲ್ಲಿ ವೃಂದಾ ದಿನೇಶ್ ಕೂಡ ಒಬ್ಬರು. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಈ ಹಿಂದೆ ನಡೆದ ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಕರ್ನಾಟಕ ಪರ ವೃಂದಾ ಭರ್ಜರಿ ಪ್ರದರ್ಶನ ನೀಡಿದ್ದರು.

11 ಇನಿಂಗ್ಸ್​ಗಳನ್ನು ಆಡಿದ್ದ ವೃಂದಾ ದಿನೇಶ್ 47.70 ಸರಾಸರಿಯಲ್ಲಿ 477 ರನ್​ ಬಾರಿಸಿ ಕರ್ನಾಟಕ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ ಫಲವಾಗಿ ಇದೀಗ ವೃಂದಾ ದಿನೇಶ್ 1.30 ಕೋಟಿ ರೂ.ಗೆ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ.

ಇದನ್ನೂ ಓದಿ: WPL 2024: 10 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಆಟಗಾರ್ತಿಗೆ 2 ಕೋಟಿ ರೂ..!

ಯುಪಿ ವಾರಿಯರ್ಸ್ ಉಳಿಸಿಕೊಂಡಿರುವ ಅಟಗಾರ್ತಿಯರು: ಅಲಿಸ್ಸಾ ಹೀಲಿ*, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್*, ಕಿರಣ್ ನವಗಿರೆ, ಲಾರೆನ್ ಬೆಲ್*, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್. ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್*, ತಹ್ಲಿಯಾ ಮೆಗ್ರಾತ್*.