WPL 2026: ಹರ್ಮನ್- ಬ್ರಂಟ್ ಬ್ಯಾಟಿಂಗ್ ಸುನಾಮಿಗೆ ತತ್ತಿರಿಸಿದ ಡೆಲ್ಲಿ ಕ್ಯಾಪಿಟಲ್ಸ್
Mumbai Indians Secure First WPL 2026 Win: ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ WPL 2026 ರ ಮೂರನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 195 ರನ್ ಗಳಿಸಿದರೆ, ಡೆಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು. ನಾಯಕಿ ಹರ್ಮನ್ಪ್ರೀತ್ ಕೌರ್ (74*) ಮತ್ತು ನೇಟ್ ಸೀವರ್ ಬ್ರಂಟ್ (70) ಮಿಂಚಿದರು.

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2026 ರ (WPL 2026) ಮೂರನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವು, ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ಕ್ರಿಕೆಟ್ ತಂಡವನ್ನು 50 ರನ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್ ಗಳಿಸಿ, ದೆಹಲಿಗೆ ಗೆಲ್ಲಲು 196 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿ 19 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಸೋತಿತು.
ಮುಂಬೈಗೆ ಮತ್ತೆ ಆರಂಭಿಕ ಆಘಾತ
ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರೊಡ್ರಿಗಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಎರಡನೇ ಓವರ್‌ನಲ್ಲಿ ಖಾತೆ ತೆರೆಯದೆಯೇ ಆರಂಭಿಕ ಆಟಗಾರ್ತಿ ಅಮೆಲಿಯಾ ಕೆರ್ ಔಟ್ ಆದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ಜಿ. ಕಮಲಿನಿ ಕೂಡ 16 ರನ್‌ಗಳಿಗೆ ಔಟಾದರು, ಇದರಿಂದಾಗಿ ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಪವರ್‌ಪ್ಲೇ ಅಂತ್ಯದ ವೇಳೆಗೆ ಮುಂಬೈ ಒಂದು ವಿಕೆಟ್ ನಷ್ಟಕ್ಕೆ ಕೇವಲ 43 ರನ್ ಗಳಿಸಿತ್ತು. ಆ ಬಳಿಕ ಜೊತೆಯಾದ ನೇಟ್ ಸೀವರ್ ಬ್ರಂಟ್ ಮತ್ತು ನಾಯಕಿ ಹರ್ಮನ್‌ಪ್ರೀತ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು.
ಬ್ರಂಟ್- ಹರ್ಮನ್ ಅರ್ಧಶತಕ
ನೇಟ್ ಸೀವರ್ ಬ್ರಂಟ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಒಟ್ಟು 46 ಎಸೆತಗಳಲ್ಲಿ 70 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ಔಟಾದ ನಂತರ, ನಾಯಕಿ ಹರ್ಮನ್ಪ್ರೀತ್ ಕೌರ್ ಇನ್ನಷ್ಟು ಆಕ್ರಮಣಕಾರಿಯಾಗಿ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಹರ್ಮನ್ 74 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿಗಳು ಮತ್ತು 3 ಬೃಹತ್ ಸಿಕ್ಸರ್‌ಗಳು ಸೇರಿದ್ದವು. ಇದು ಹರ್ಮನ್ ಪ್ರೀತ್ ಕೌರ್ ಅವರ 9ನೇ ಟಿ20 ಅರ್ಧಶತಕವಾಗಿದೆ. ಉಳಿದಂತೆ ನಿಕೋಲಾ ಕ್ಯಾರಿ 21 ರನ್ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಪರ ನಂದಿನಿ ಶರ್ಮಾ 2 ವಿಕೆಟ್ ಪಡೆದರು.
ಆರಂಭದಿಂದಲೂ ತತ್ತರಿಸಿದ ಡೆಲ್ಲಿ
196 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಂಪೂರ್ಣ ವಿಫಲವಾಯಿತು. ಆರಂಭಿಕರಾದ ಶಫಾಲಿ ವರ್ಮಾ (8) ಮತ್ತು ಲಿಜೆಲ್ಲೆ ಲೀ (10) ಸಂಪೂರ್ಣ ನಿರಾಶೆ ಮೂಡಿಸಿದರು. ನಾಯಕಿ ಜೆಮಿಮಾ ರೊಡ್ರಿಗಸ್ (1) ಕೂಡ ವಿಫಲರಾದರು. ಸ್ಟಾರ್ ಆಟಗಾರ್ತಿಯರಾದ ಲಾರಾ ವೋಲ್ವಾರ್ಡ್ (9) ಮತ್ತು ಮರಿಯನ್ ಕಪ್ (10) ಕೂಡ ಕಡಿಮೆ ಸ್ಕೋರ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇದು ಡೆಲ್ಲಿಯ ಸೋಲನ್ನು ದೃಢಪಡಿಸಿತು. ಒಂದು ಹಂತದಲ್ಲಿ, ಡೆಲ್ಲಿ 74 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು.
ಹೆನ್ರಿ ಏಕಾಂಗಿ ಹೋರಾಟ
ಸತತವಾಗಿ ವಿಕೆಟ್ ಕಳೆದುಕೊಂಡರೂ, ಚಿನೆಲ್ಲೆ ಹೆನ್ರಿ ಅದ್ಭುತ ಹೋರಾಟ ನೀಡಿದರು. ಕೇವಲ 33 ಎಸೆತಗಳಲ್ಲಿ 56 ರನ್ ಗಳಿಸುವ ಮೂಲಕ ತಂಡದ ಭರವಸೆಯನ್ನು ಜೀವಂತವಾಗಿಡಲು ಪ್ರಯತ್ನಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳು ಮತ್ತು 3 ಬೃಹತ್ ಸಿಕ್ಸರ್‌ಗಳು ಸೇರಿದ್ದವು. ಆದಾಗ್ಯೂ, ಉಳಿದವರಿಂದ ಅವರಿಗೆ ಯಾವುದೇ ಬೆಂಬಲ ಸಿಗಲಿಲ್ಲ. ಕೊನೆಯಲ್ಲಿ, ಮಿನ್ನು ಮಣಿ (7) ವಿಕೆಟ್ ಪತನದೊಂದಿಗೆ ದೆಹಲಿ 145 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಮುಂಬೈ ಬೌಲರ್‌ಗಳಲ್ಲಿ, ಶಬ್ನಿಮ್ ಇಸ್ಮಾಯಿಲ್, ಅಮೆಲಿಯಾ ಕೆರ್ ಮತ್ತು ಸೀವರ್ ಬ್ರಂಟ್ ಉತ್ತಮವಾಗಿ ಬೌಲಿಂಗ್ ಮಾಡಿ ದೆಹಲಿ ತಂಡವನ್ನು ಕಟ್ಟಿಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 pm, Sat, 10 January 26
