Wriddhiman Saha: ನಿವೃತ್ತಿ ನೀಡು ಎಂದು ದ್ರಾವಿಡ್ ಸೂಚಿಸಿದರು: ತಂಡದಿಂದ ಕೈಬಿಟ್ಟ ಬೆನ್ನಲ್ಲೇ ಸಾಹ ಶಾಕಿಂಗ್ ಹೇಳಿಕೆ
India squad for Sri Lanka series: ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟವಾದ ಬೆನ್ನಲ್ಲೇ ಇದೀಗ ವೃದ್ದಿಮಾನ್ ಸಾಹ, ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಪ್ರಮುಖವಾಗಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ನನ್ನ ಬಳಿ ನೀನು ನಿವೃತ್ತಿ ಬಗ್ಗೆ ಯೋಚಿಸು ಎಂಬ ಮಾತು ಹೇಳಿದರು ಎಂದು ಬಹಿರಂಗ ಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ನ ಆಯ್ಕೆ ಸಮಿತಿ ಶನಿವಾರ ಶ್ರೀಲಂಕಾ (India vs Sri Lanka) ವಿರುದ್ಧದ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ್ದು ಕೆಲವು ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಟೆಸ್ಟ್ ತಂಡದಿಂದ ನಾಲ್ಕು ಹಿರಿಯ ಆಟಗಾರರನ್ನು ಕೈಬಿಟ್ಟಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ, ಇಶಾಂತ್ ಶರ್ಮಾ ಮತ್ತು ವೃದ್ದಿಮಾನ್ ಸಾಹ (Wriddhiman Saha) ಅವರನ್ನು ಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ. ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಈ ಆಟಗಾರರಿಗೆ ಆಯ್ಕೆ ಮಾಡದ ಬಗ್ಗೆ ಮಾಹಿತಿಯನ್ನು ಕೂಡ ನೀಡಿದ್ದು ರಣಜಿ ಟ್ರೋಫಿಯಲ್ಲಿ (Ranji Trophy) ಆಡಿ ಫಾರ್ಮ್ ಕಂಡುಕೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ರಹಾನೆ ಮತ್ತು ಪೂಜಾರ ರಣಜಿಯಲ್ಲಿ ಕಣಕ್ಕಿಳಿದಿದ್ದರೆ ಇಶಾಂತ್ ಶರ್ಮಾ ಎರಡನೇ ರಣಜಿ ಪಂದ್ಯಕ್ಕೆ ಲಭ್ಯರಿದ್ದಾರೆ. ಆದರೆ, ವೃದ್ದಿಮಾನ್ ಸಾಹ ಮಾತ್ರ ದೇಶೀಯ ಕ್ರಿಕೆಟ್ ಆಡದೆ ಹಿಂದೆ ಸರಿದಿದ್ದಾರೆ.
ಇದೀಗ ಆಯ್ಕೆ ಸಮಿತಿ ತಮ್ಮನ್ನು ಟೆಸ್ಟ್ ಸರಣಿಗೆ ಆಯ್ಕೆ ಮಾಡದ ಬಗ್ಗೆ ಬೇಸರ ಹೊರಹಾಕಿರುವ ವೃದ್ದಿಮಾನ್ ಸಾಹ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಇವರು, ಟೆಸ್ಟ್ ಸರಣಿಯಿಂದ ನನ್ನನ್ನು ಹೊರಗಿಡುವ ಬಗ್ಗೆ ಮೊದಲ ತಿಳಿಸಿದ್ದರು, ಆದರೆ ಈ ಬಗ್ಗೆ ತುಟಿಬಿಚ್ಚುವಂತಿರಲಿಲ್ಲ ಎಂದಿದ್ದಾರೆ. ಜೊತೆಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿರುವ ಸಾಹ, ರಾಹುಲ್ ದ್ರಾವಿಡ್ ಅವರು ನನ್ನ ಬಳಿ ನೀನು ನಿವೃತ್ತಿ ಬಗ್ಗೆ ಯೋಚಿಸು ಎಂಬ ಮಾತು ಹೇಳಿದರು ಎಂದು ಬಹಿರಂಗ ಪಡಿಸಿದ್ದಾರೆ.
“ಹೌದು, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಆಯ್ಕೆ ಸಮಿತಿಯವರು ನನ್ನನ್ನು ಮುಂದಿನ ಸರಣಿಗೆ ಆಯ್ಕೆ ಮಾಡುತ್ತಿಲ್ಲ ಎಂದು ಮೊದಲೇ ಹೇಳಿದ್ದರು. ಹೀಗಾಗಿ ತಂಡ ಪ್ರಕಟವಾಗುವ ಮುನ್ನ ಈ ಬಗ್ಗೆ ನಾನು ಎಲ್ಲಿಯೂ ಮಾತನಾಡುವಂತ್ತಿರಲಿಲ್ಲ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ನನಗೆ ನಿವೃತ್ತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧ ಕಳೆದ ನವೆಂಬರ್‌ನಲ್ಲಿ ನಡೆದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ನೋವಿನ ನಡುವೆಯೂ ಪೇಯ್ನ್ ಕಿಲ್ಲರ್‌ಗಳನ್ನು ತೆಗೆದುಕೊಂಡು ಬ್ಯಾಟ್ ಮಾಡಿ 61 ರನ್ ಗಳಿಸಿದ್ದಾಗ ಸೌರವ್ ಗಂಗೂಲಿ ನನಗೆ ವಾಟ್ಸ್‌ಆಪ್ ಮೂಲಕ ಶುಭ ಕೋರಿ ಉತ್ತಮ ಆಟ ಆಡಿದ್ದೀರಿ ಎಂದು ಪ್ರಶಂಸಿಸಿದ್ದರು. ಬಿಸಿಸಿಐನ ಪ್ರಧಾನ ಹುದ್ದೆಯಲ್ಲಿ ತಾವು ಇರುವವರೆಗೂ ಭಾರತ ತಂಡದಲ್ಲಿನ ಸ್ಥಾನದ ಬಗ್ಗೆ ಚಿಂತಿಸಬೇಡ ಎಂದಿದ್ದರು. ಬಿಸಿಸಿಐ ಅಧ್ಯಕ್ಷರಿಂದ ಈ ಮಾತುಗಳನ್ನು ಕೇಳಿ ನನ್ನ ಆತ್ಮವಿಶ್ವಾಸ ಹೆಚ್ಚಾಗಿತ್ತು. ಆದರೆ, ಇವೆಲ್ಲವೂ ಶೀಘ್ರವೇ ಬದಲಾಗಲಿದೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,” ಎಂದು ಸಾಹ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ಗೆ ವೃದ್ದಿಮಾನ್ ಸಾಹ ಜಾಗದಲ್ಲಿ ಕೆಎಸ್ ಭರತ್ ಅವರನ್ನು ಆಯ್ಕೆ ಮಾಡಲಾಗಿದೆ. 2010ರಲ್ಲೇ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಸಹಾ, 2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂಎಸ್ ಧೋನಿ ಹಠಾತ್ ನಿವೃತ್ತಿ ಘೋಷಿಸಿದ ಬಳಿಕ ಭಾರತ ಟೆಸ್ಟ್ ತಂಡದ ಖಾಯಂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಂಡರು. ಬಳಿಕ ರಿಷಭ್ ಪಂತ್ ಆಗಮನ ನಂತರ ಅವರಿಗೆ ಅವಕಾಶಗಳು ಸಿಗದಂತಾಯಿತು. ಇದೀಗ ಅವರನ್ನು ತಂಡದಿಂದ ಕೈಬಿಟ್ಟಿದ್ದು ಮುಂಬರುವ ಸರಣಿಗೆ ಪರಿಗಣಿಸಲಾಗುತ್ತಾ ಎಂಬುದು ನೋಡಬೇಕಿದೆ.
IND vs WI T20: ಕೊಹ್ಲಿ-ಪಂತ್ ಔಟ್: 3ನೇ ಟಿ20ಗೆ ಭಾರತದಲ್ಲಿ ದೊಡ್ಡ ಬದಲಾವಣೆ: ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ XI
IND vs WI T20: ಇಂದು ಭಾರತ- ವೆಸ್ಟ್ ಇಂಡೀಸ್ ಅಂತಮ ಟಿ20: ವೈಟ್ವಾಷ್ ಮಾಡುವತ್ತ ರೋಹಿತ್ ಚಿತ್ತ