WTC Final 2023: ವಿವಾದಾತ್ಮಕ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದ ಶುಭ್ಮನ್ ಗಿಲ್..!
WTC Final 2023: ತಮ್ಮ ವಿಕೆಟ್ ಬಗ್ಗೆ ಟ್ವೀಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಗಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship final) ಪಂದ್ಯದಲ್ಲಿ ನಾಲ್ಕನೇ ದಿನದಾಟ ಮುಕ್ತಾಯಗೊಂಡಿದೆ. ಟೀಂ ಇಂಡಿಯಾ (Team India) 40 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಹೀಗಾಗಿ ಟೀಂ ಇಂಡಿಯಾ ಗೆಲುವಿಗೆ ಇನ್ನೂ 280 ರನ್‌ಗಳ ಅಗತ್ಯವಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೀಂ ಇಂಡಿಯಾಗೆ ಗೆಲ್ಲಲು 444 ರನ್‌ಗಳ ಬೃಹತ್ ಸವಾಲನ್ನು ನೀಡಿದೆ. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ (Australia) 469 ರನ್ ಗಳಿಸಿತ್ತು. ಆ ಬಳಿಕ ಟೀಂ ಇಂಡಿಯಾ 296 ರನ್‌ಗಳಿಗೆ ಆಲೌಟ್ ಆಗಿತ್ತು. ಇದರಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ 173 ರನ್‌ಗಳ ಮುನ್ನಡೆ ಸಾಧಿಸಿದ್ದ ಆಸೀಸ್ ಈ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ನಲ್ಲಿ 84.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 270 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಟೀಂ ಇಂಡಿಯಾಕ್ಕೆ 444 ರನ್‌ಗಳ ಸವಾಲನ್ನು ನೀಡಿತ್ತು.
ನಾಲ್ಕನೇ ದಿನ ಆಟ ಕೊನೆಗೊಂಡಾಗ ವಿರಾಟ್ 44 ಮತ್ತು ಅಜಿಂಕ್ಯ 20 ರನ್ಗಳಿಸಿ ಅಜೇಯರಾಗಿ ಉಳಿದು ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಈಗಾಗಲೇ ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ರೂಪದಲ್ಲಿ 3 ವಿಕೆಟ್ ಕಳೆದುಕೊಂಡಿದೆ. ಪೂಜಾರ 27, ರೋಹಿತ್ 43 ಮತ್ತು ಶುಭಮನ್ 18 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಆದರೆ ಈ ಮೂವರ ವಿಕೆಟ್ಗಳಲ್ಲಿ ಶುಭ್ಮನ್ ಗಿಲ್ ಅವರ ವಿಕೆಟ್ ಮಾತ್ರ ಇದೀಗ ಸಾಕಷ್ಟು ವಿವಾದ ಹುಟ್ಟುಹಾಕಿದೆ. ಅಂಪೈರ್‌ನ ಈ ನಿರ್ಧಾರಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಸಮಾಧಾನ ಹೊರಹಾಕಿದ ಗಿಲ್
ಇದೀಗ ವಿವಾದಾತ್ಮಕ ರೀತಿಯಲ್ಲಿ ಹೊರಬಂದ ನಂತರ ಶುಭ್ಮನ್ ಗಿಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ವಿಕೆಟ್ ಬಗ್ಗೆ ಟ್ವೀಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಗಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಖಾತೆಗಳಲ್ಲಿ ಗಿಲ್, ಕ್ಯಾಮರೂನ್ ಗ್ರೀನ್ ಕ್ಯಾಚ್ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಒಂದರಲ್ಲಿ ಚಪ್ಪಾಳೆ ತಟ್ಟುವ ಎಮೋಜಿಯನ್ನು ಹಾಕಿದ್ದರೆ, ಟ್ವಿಟರ್ನಲ್ಲಿ ಬೂತಗನ್ನಡಿ ಎಮೋಜಿಯನ್ನು ಹಾಕಿದ್ದಾರೆ.
????♂️ pic.twitter.com/pOnHYfgb6L
— Shubman Gill (@ShubmanGill) June 10, 2023
ನಿಖರವಾಗಿ ಏನಾಯಿತು?
ಸ್ಕಾಟ್ ಬೋಲ್ಯಾಂಡ್ ಪಂದ್ಯದ ನಾಲ್ಕನೇ ಇನಿಂಗ್ಸ್‌ನ ಎಂಟನೇ ಓವರ್ ಬೌಲ್ ಮಾಡಿದರು. ಈ ಓವರ್ ಎದುರಿಸಿದ ಗಿಲ್, ಬೋಲ್ಯಾಂಡ್ ಅವರ ಮೊದಲ ಎಸೆತವನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್ನ ಅಂಚಿಗೆ ತಾಗಿ ಗಲ್ಲಿ ಬಳಿ ನಿಂತಿದ್ದ ಕ್ಯಾಮರೂನ್ ಗ್ರೀನ್ ಕಡೆಗೆ ಹೋಯಿತು. ಗ್ರೀನ್ ಡೈವ್ ಬಿದ್ದು ಕ್ಯಾಚ್ ತೆಗೆದುಕೊಂಡರು. ಆದರೆ ಗ್ರೀನ್ ಕ್ಯಾಚ್ ಹಿಡಿಯುವಾಗ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ಅಂಪೈರ್ ಗಿಲ್ ಔಟ್ ಎಂದು ತೀರ್ಪು ನೀಡಿದರು. ಇದರಿಂದ ನೆಟ್ಟಿಗರು ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ