WTC 2025 Final: ಮೊದಲ ದಿನವೇ 14 ವಿಕೆಟ್ ಪತನ
South Africa vs Australia, Final: ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬೌಲರ್ಗಳು ಪರಾಕ್ರಮ ಮರೆದಿದ್ದು, ಮೊದಲ ದಿನದಾಟವೇ 14 ವಿಕೆಟ್ಗಳು ಉರುಳಿದೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC25 Final) ಪಂದ್ಯದ ಮೊದಲ ದಿನದಾಟವೇ ಬೌಲರ್ಗಳು ಪರಾಕ್ರಮ ಮರೆದಿದ್ದಾರೆ. ಈ ಪರಾಕ್ರಮದಿಂದಾಗಿ ಮೊದಲ ದಿನವೇ 14 ವಿಕೆಟ್ಗಳು ಉರುಳಿವೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್ಗಳು 67 ರನ್ಗಳಿಗೆ 4 ವಿಕೆಟ್ ಉರುಳಿಸಿದ್ದರು.
ಈ ಹಂತದಲ್ಲಿ ಜೊತೆಗೂಡಿದ ಸ್ಟೀವ್ ಸ್ಮಿತ್ ಹಾಗೂ ಬ್ಯೂ ವೆಬ್‌ಸ್ಟರ್ 5ನೇ ವಿಕೆಟ್ಗೆ 79 ರನ್ಗಳನ್ನು ಪೇರಿಸಿದರು. ಆದರೆ ತಂಡದ ಮೊತ್ತ 147 ಆಗಿದ್ದ ವೇಳೆ ಸ್ಟೀವ್ ಸ್ಮಿತ್ (66) ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ವೆಬ್‌ಸ್ಟರ್ 92 ಎಸೆತಗಳಲ್ಲಿ 11 ಫೋರ್ಗಳೊಂದಿಗೆ 72 ರನ್ಗಳ ಕೊಡುಗೆ ನೀಡಿದರು. ಆದರೆ ಆ ಬಳಿಕ ಬಂದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 212 ರನ್ಗಳಿಗೆ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು.
ಸೌತ್ ಆಫ್ರಿಕಾ ಪರ 15.4 ಓವರ್ಗಳನ್ನು ಎಸೆದ ಕಗಿಸೊ ರಬಾಡ 51 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಮಾರ್ಕೊ ಯಾನ್ಸೆನ್ 3 ವಿಕೆಟ್ ಪಡೆದು ಮಿಂಚಿದರು.
CAUGHT & Webster departs! 💪🏻#BeauWebster‘s resistance is broken! #KagisoRabada gets the breakthrough and he now moves up to No. 4 on South Africa’s all-time Test wicket-takers list! 👏🏻
LIVE NOW 👉 https://t.co/9lZGHcdMLn #WTCFinal | #SAvAUS, Day 1, watch LIVE on Star Sports… pic.twitter.com/jxFTAtcr2f
— Star Sports (@StarSportsIndia) June 11, 2025
ಸೌತ್ ಆಫ್ರಿಕಾ ಮೊದಲ ಇನಿಂಗ್ಸ್:
ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಪೇರಿಸಿದ 212 ರನ್ಗಳಿಗೆ ಉತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಮೊದಲ ಓವರ್ನಲ್ಲೇ ಐಡೆನ್ ಮಾರ್ಕ್ರಾಮ್ (0) ವಿಕೆಟ್ ಕಬಳಿಸಿ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.
ಇದರ ಬೆನ್ನಲ್ಲೇ ರಯಾನ್ ರಿಕೆಲ್ಟನ್ (16) ಕೂಡ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಯಾನ್ ಮುಲ್ಡರ್ (11) ಗೆ ಪ್ಯಾಟ್ ಕಮಿನ್ಸ್ ಪೆವಿಲಿಯನ್ ಹಾದಿ ತೋರಿಸಿದರೆ, ಜೋಶ್ ಹೇಝಲ್ವುಡ್ ಎಸೆತದಲ್ಲಿ ಟ್ರಿಸ್ಟನ್ ಸ್ಟಬ್ಸ್ (1) ಔಟಾದರು. ಈ ಮೂಲಕ ಮೊದಲ ದಿನದಾಟ ಮುಕ್ತಾಯದ ವೇಳೆ ಸೌತ್ ಆಫ್ರಿಕಾ ತಂಡವು 4 ವಿಕೆಟ್ ಕಳೆದುಕೊಂಡು ಕೇವಲ 43 ರನ್ ಮಾತ್ರ ಕಲೆಹಾಕಿದೆ.
ಒಂದೇ ದಿನ 14 ವಿಕೆಟ್:
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲ ದಿನವೇ ಬೌಲರ್ಗಳು ಪರಾಕ್ರಮ ಮರೆದಿರುವ ಕಾರಣ, ಫೈನಲ್ ಫೈಟ್ ಮತ್ತಷ್ಟು ರೋಚಕತೆಯನ್ನು ಸೃಷ್ಟಿಸಿದೆ. ಅದರಲ್ಲೂ ಉಭಯ ತಂಡಗಳಲ್ಲೂ ಅತ್ಯುತ್ತಮ ಬೌಲರ್ಗಳಿರುವಾಗ ಕಾರಣ ಈ ಪಂದ್ಯವು 5ನೇ ದಿನದಾಟಕ್ಕೆ ಕಾಲಿಡಲಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಮೊದಲ ದಿನದಾಟದಲ್ಲಿ ಸೌತ್ ಆಫ್ರಿಕಾ ಆಸ್ಟ್ರೇಲಿಯಾ ತಂಡದ 10 ವಿಕೆಟ್ ಕಬಳಿಸಿದರೆ, ಕೇವಲ 22 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡವು ಸೌತ್ ಆಫ್ರಿಕಾ ತಂಡದ 4 ವಿಕೆಟ್ ಉರುಳಿಸಿದೆ. ಹೀಗಾಗಿ ಮೊದಲ ಇನಿಂಗ್ಸ್ಗಳಲ್ಲಿ ಮುನ್ನಡೆ ಸಾಧಿಸಿದ ಬೇಕಿದ್ದರೆ ದ್ವಿತೀಯ ದಿನದಾಟದಲ್ಲಿ ಸೌತ್ ಆಫ್ರಿಕಾ ಪರ ಬ್ಯಾಟರ್ಗಳು ಕ್ರೀಸ್ ಕಚ್ಚಿ ನಿಲ್ಲಲೇಬೇಕು.
ಉಭಯ ತಂಡಗಳ ಪ್ಲೇಯಿಂಗ್ 11:
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ರಯಾನ್ ರಿಕೆಲ್ಟನ್ , ಟ್ರಿಸ್ಟನ್ ಸ್ಟಬ್ಸ್ , ಟೆಂಬಾ ಬವುಮಾ (ನಾಯಕ) , ಡೇವಿಡ್ ಬೆಡಿಂಗ್ಹ್ಯಾಮ್ , ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್) , ವಿಯಾನ್ ಮುಲ್ಡರ್ , ಮಾರ್ಕೊ ಯಾನ್ಸೆನ್ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಲುಂಗಿ ಎನ್ಗಿಡಿ.
ಇದನ್ನೂ ಓದಿ: ಐಪಿಎಲ್ನ 3 ತಂಡಗಳು ಬ್ಯಾನ್, 2 ಟೀಮ್ಗಳು ಕ್ಯಾನ್ಸಲ್
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್ , ಕ್ಯಾಮರೋನ್ ಗ್ರೀನ್ , ಸ್ಟೀವನ್ ಸ್ಮಿತ್ , ಟ್ರಾವಿಸ್ ಹೆಡ್ , ಬ್ಯೂ ವೆಬ್‌ಸ್ಟರ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಜೋಶ್ ಹೇಝಲ್ವುಡ್.
