ಆರ್​ಸಿಬಿ ವೇಗಿ ಯಶ್ ದಯಾಳ್ ಬಂಧನ ತಡೆಯಲು ಹೈಕೋರ್ಟ್ ನಿರಾಕರಣೆ

Yash Dayal Faces Arrest: ಯಶ್ ದಯಾಳ್ ಅವರ ಮೇಲೆ ಎರಡು ದೈಹಿಕ ಕಿರುಕುಳದ ಆರೋಪಗಳು ದಾಖಲಾಗಿವೆ. ರಾಜಸ್ಥಾನ ಹೈಕೋರ್ಟ್ ಅಪ್ರಾಪ್ತ ಬಾಲಕಿಯ ಮೇಲಿನ ದೈಹಿಕ ಕಿರುಕುಳ ಪ್ರಕರಣದಲ್ಲಿ ಅವರ ಬಂಧನಕ್ಕೆ ತಡೆ ನೀಡಲು ನಿರಾಕರಿಸಿದೆ. ಗಾಜಿಯಾಬಾದ್‌ನಲ್ಲಿಯೂ ಇದೇ ರೀತಿಯ ಪ್ರಕರಣವಿದೆ. ದಯಾಳ್ ಪರ ವಕೀಲರು ಸಂಘಟಿತ ಗ್ಯಾಂಗ್‌ನಿಂದ ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿದೆ ಎಂದು ವಾದಿಸಿದ್ದಾರೆ. ಆದರೆ ನ್ಯಾಯಾಲಯ ಆಗಸ್ಟ್ 22, 2025ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.

ಆರ್​ಸಿಬಿ ವೇಗಿ ಯಶ್ ದಯಾಳ್ ಬಂಧನ ತಡೆಯಲು ಹೈಕೋರ್ಟ್ ನಿರಾಕರಣೆ
Yash Dayal

Updated on: Aug 06, 2025 | 8:14 PM

ಕಳೆದೊಂದು ತಿಂಗಳಲ್ಲಿ ಎರಡೆರಡು ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿರುವ ಆರ್​ಸಿಬಿ ವೇಗೆ ಯಶ್ ದಯಾಳ್ (Yash Dayal)​ ಇದೀಗ ಬಂಧನದ ಭೀತಿಯಲ್ಲಿದ್ದಾರೆ. ಅಪ್ರಾಪ್ತ ವಯಸ್ಕಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್​ನ ನ್ಯಾಯಮೂರ್ತಿ ಸುದೇಶ್ ಬನ್ಸಾಲ್ ಅವರ ಏಕ ಸದಸ್ಯ ಪೀಠವು ಯಶ್ ದಯಾಳ್ ಅವರ ಬಂಧನ ಮತ್ತು ಪೊಲೀಸ್ ಕ್ರಮಕ್ಕೆ ತಡೆ ನೀಡಲು ನಿರಾಕರಿಸಿದೆ. ಈ ವಿಷಯವು ಅಪ್ರಾಪ್ತ ವಯಸ್ಕಳಿಗೆ ಸಂಬಂಧಿಸಿರುವುದರಿಂದ, ಈ ಹಂತದಲ್ಲಿ ತಡೆ ನೀಡುವುದು ಸೂಕ್ತವಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಇದರ ಜೊತೆಗೆ ಪ್ರಕರಣದ ಡೈರಿಯನ್ನು ಹಾಜರುಪಡಿಸಲು ನ್ಯಾಯಾಲಯ, ಪೊಲೀಸರಿಗೆ ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 22, 2025 ಕ್ಕೆ ನಿಗದಿಪಡಿಸಲಾಗಿದೆ.

ಹೈಕೋರ್ಟ್‌ನಲ್ಲಿ ವಿಚಾರಣೆಯ ಸಮಯದಲ್ಲಿ, ಯಶ್ ದಯಾಳ್ ಪರ ವಾದ ಮಂಡಿಸಿದ ವಕೀಲ ಕುನಾಲ್ ಜೈಮನ್, ‘ಯಶ್ ದಯಾಳ್ ವಿರುದ್ಧ ಸಂಘಟಿತ ಗ್ಯಾಂಗ್​ವೊಂದು ಈ ರೀತಿಯ ಆರೋಪಗಳನ್ನು ಹೊರಿಸುತ್ತಿದೆ. ಈ ಗ್ಯಾಂಗ್ ದಯಾಳ್ ವಿರುದ್ಧ ಈ ರೀತಿಯ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಗಾಜಿಯಾಬಾದ್‌ನಲ್ಲಿಯೂ ಸಹ, ಯಶ್ ದಯಾಳ್ ವಿರುದ್ಧ ಒಬ್ಬ ಹುಡುಗಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾಳೆ. ಆದರೆ ಆ ಪ್ರಕರಣದಲ್ಲಿ ದಯಾಳ್ ಅವರನ್ನು ಬಂಧಿಸದಂತೆ ಅಲಹಾಬಾದ್ ಹೈಕೋರ್ಟ್ ತಡೆಹಿಡಿದಿತ್ತು. ಆದಾಗಿ ಕೇವಲ ಏಳು ದಿನಗಳ ನಂತರ ಜೈಪುರದಲ್ಲಿ ಮತ್ತೊಬ್ಬ ಹುಡುಗಿ ಯಶ್ ವಿರುದ್ಧ ದೂರು ದಾಖಲಿಸಿದ್ದಾಳೆ. ಇದೆಲ್ಲ ಈ ಸಂಘಟಿತ ಗ್ಯಾಂಗ್​ನ ಪಿತೂರಿಯ ಒಂದು ಭಾಗವಾಗಿದೆ. ಯಶ್ ಅವರ ಮೇಲೆ ಈ ರೀತಿಯ ಆರೋಪಗಳನ್ನು ಹೊರಿಸಿ ಅವರಿಂದ ಆರ್ಥಿಕ ಲಾಭ ಪಡೆಯಲು ಈ ಗ್ಯಾಂಗ್ ಈ ರೀತಿಯ ಕೆಲಸ ಮಾಡುತ್ತಿದೆ ಎಂದು ದಯಾಳ್ ಪರ ವಕೀಲರು ವಾದಿಸಿದರು.

ಅಪ್ರಾಪ್ತೆ ಮೇಲೆ ದಯಾಳ್ ಲೈಂಗಿಕ ದೌರ್ಜನ್ಯ?

ಜುಲೈ 23 ರಂದು, ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ 19 ವರ್ಷದ ಯುವತಿ, ಯಶ್ ದಯಾಳ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ತಮ್ಮ ದೂರಿನಲ್ಲಿ, ‘ಕ್ರಿಕೆಟ್ ಬಗ್ಗೆ ಸಲಹೆಗಳನ್ನು ನೀಡುವುದಾಗಿ ತನ್ನೊಂದಿಗೆ ಆತ್ಮೀಯತೆ ಹೆಚ್ಚಿಸಿಕೊಂಡಿದ್ದ ದಯಾಳ್, ಎರಡು ವರ್ಷಗಳ ಕಾಲ ನನ್ನನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡಿ ನನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದನ್ನು ಉಲ್ಲೇಖಿಸಿದ್ದಾಳೆ. ಗಮನಿಸಬೇಕಾದ ಸಂಗತಿಯೆಂದರೆ, ಯಶ್ ದಯಾಳ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಂದರ್ಭದಲ್ಲಿ ಆಕೆಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇತ್ತು ಎಂದು ವರದಿಯಾಗಿತ್ತು. ಹೀಗಾಗಿ ಪೊಲೀಸರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

‘ಐಪಿಎಲ್ ವೇಳೆ ದೈಹಿಕ ಕಿರುಕುಳ ನೀಡಿದ್ರು’; ಯಶ್ ದಯಾಳ್ ವಿರುದ್ಧ ದೂರು ನೀಡಿದ ಮತ್ತೋರ್ವ ಯುವತಿ

ಜುಲೈ 6 ರಂದು ಮೊದಲ ಪ್ರಕರಣ ದಾಖಲು

ವಾಸ್ತವವಾಗಿ, ಯಶ್ ದಯಾಳ್ ಮೇಲೆ ಈ ರೀತಿಯ ಆರೋಪ ಹೊರಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಜುಲೈ 6 ರಂದು, ಗಾಜಿಯಾಬಾದ್‌ನ ಮಹಿಳೆಯೊಬ್ಬರು, ಯಶ್ ದಯಾಳ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನನಗೆ ಐದು ವರ್ಷಗಳ ಕಾಲ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಬಳಿಕ ನ್ಯಾಯಾಲಯವು ಜುಲೈ 15, 2025 ರಂದು ದಯಾಳ್ ಅವರ ಬಂಧನಕ್ಕೆ ತಡೆ ನೀಡಿತ್ತು. ಆದರೀಗ ರಾಜಸ್ಥಾನ ಹೈಕೋರ್ಟ್ ದಯಾಳ್ ಬಂಧನವನ್ನು ತಡೆಯಲು ನಿರಾಕರಣೆ ಮಾಡಿದ್ದು, ಇದೀಗ ಅವರಿಗೆ ಬಂಧನಕ್ಕೊಳಗಾಗುವ ಆತಂಕ ಎದುರಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Wed, 6 August 25