16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಮುಕ್ತಾಯಗೊಂಡಿದೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿ ಟ್ರೋಫಿಗೆ ಮುತ್ತಿಕ್ಕಿದೆ. ಇದೀಗ ಮತ್ತೊಂದು ಮಹತ್ವದ ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ಕ್ರಿಕೆಟ್ ತಂಡ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ (WTC Final 2023) ತಯಾರಿ ನಡೆಸುತ್ತಿದೆ. ಜೂನ್ 7ಕ್ಕೆ ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಈ ಪಂದ್ಯ ಶುರುವಾಗಲಿದೆ. ಈಗಾಗಲೇ ಎಲ್ಲ ಆಟಗಾರರು ಇಂಗ್ಲೆಂಡ್ಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಭಾರತದ ದೇಶೀಯ ಪ್ರತಿಭೆ ಯಶಸ್ವಿ ಜೈಸ್ವಾಲ್ (Yashasvi Jaiswal) ಕೂಡ ಟೀಮ್ ಇಂಡಿಯಾ ಸೇರಿದ್ದು, ಇವರ ಅಭ್ಯಾಸದ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ತನ್ನ ಇನ್ಸ್ಟಾಗ್ರಾಮನ್ನಲ್ಲಿ ವಿಡಿಯೋ ಒಂದು ಹಂಚಿಕೊಂಡಿದೆ. ಇದರಲ್ಲಿ ಯಶಸ್ವಿ ಜೈಸ್ವಾಲ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅಭ್ಯಾಸ ನಡೆಸುತ್ತಿದ್ದಾರೆ. ವಿಶೇಷ ಎಂದರೆ ವಿರಾಟ್ ಕೊಹ್ಲಿ ಅವರು ಇವರಿಗೆ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬ ಬಗ್ಗೆ ಟಿಪ್ಸ್ ನೀಡುತ್ತಿದ್ದಾರೆ. ಅಲ್ಲದೆ ಬ್ಯಾಟಿಂಗ್ ಅಭ್ಯಾಸದಲ್ಲಿ ಸೌರವ್ ಗಂಗೂಲಿ ಅವರ ಫೇಮಸ್ ಕವರ್ ಡ್ರೈವ್ ಹೊಡೆದು ಹುಬ್ಬೇರುವಂತೆ ಮಾಡಿದ್ದಾರೆ. ಜೈಸ್ವಾಲ್ ಅವರು ರುತುರಾಜ್ ಗಾಯಕ್ವಾಡ್ ಬದಲು ತಂಡದಲ್ಲಿ ಸ್ಟ್ಯಾಂಡ್ ಬೈ ಆಟಗಾರನಾಗಿ ಸ್ಥಾನ ಪಡೆದುಕೊಂಡಿದ್ದಾರೆ.
IPL 2023: ಬರೋಬ್ಬರಿ 3298 ಬೌಂಡರಿಗಳು: ಅತೀ ಹೆಚ್ಚು ಸಿಕ್ಸ್-ಫೋರ್ ಬಾರಿಸಿದ್ದು ಯಾರು ಗೊತ್ತಾ?
ಇದರ ಜೊತೆಗೆ ವಿರಾಟ್ ಕೊಹ್ಲಿ, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಅಭ್ಯಾಸ ನಡೆಸುತ್ತಿರುವುದು ಕಂಡುಬಂತು. ಪ್ಲೇ ಆಫ್ನಲ್ಲಿ ಮುಂಬೈ ಸೋತ ನಂತರ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಜೈಸ್ವಾಲ್ ಒಟ್ಟಿಗೆ ಲಂಡನ್ಗೆ ತೆರಳಿದ್ದರು. ಸದ್ಯ ಭಾರತದ ಎಲ್ಲ ಆಟಗಾರರು ಲಂಡನ್ನ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಾರೆ.
Virat Kohli giving tips to Yashasvi Jaiswal in the practice session.
King Kohli always there for youngsters! pic.twitter.com/LGMPqX29NW
— CricketMAN2 (@ImTanujSingh) May 31, 2023
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಜೂನ್ 7 ರಿಂದ 11ರ ವರೆಗೆ ನಡೆಯಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನ ಈ ಐತಿಹಾಸಿಕ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಈ ಮಹತ್ವದ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾವನ್ನು ಕೂಡ ಪ್ರಕಟ ಮಾಡಿದೆ. ಈ ಹಿಂದೆ ಟೆಸ್ಟ್ ತಂಡದಿಂದ ಹೊರಬಿದ್ದ ಅಜಿಂಕ್ಯಾ ರಹಾನೆ ಕಮ್ಬ್ಯಾಕ್ ಮಾಡಿದ್ದಾರೆ. ಜಯದೇವ್ ಉನಾದ್ಕಟ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
WTC ಫೈನಲ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:43 am, Thu, 1 June 23