
ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಇತ್ತೀಚೆಗಷ್ಟೇ ಮುಂಬೈ ರಣಜಿ ತಂಡದಿಂದ (Mumbai Ranji Team) ತನ್ನನ್ನು ಬಿಡುಗಡೆ ಮಾಡುವಂತೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಪತ್ರ ಬರೆದಿದ್ದರು. ಜೈಸ್ವಾಲ್ ಮನವಿಯಂತೆ ಮುಂಬೈ ಕ್ರಿಕೆಟ್ ಮಂಡಳಿ ಕೂಡ ಅನುಮೋದನೆ ನೀಡಿತ್ತು. ಆದರೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವ ಯಶಸ್ವಿ ಜೈಸ್ವಾಲ್ ಮುಂಬೈ ತಂಡವನ್ನು ಬಿಟ್ಟು ಹೋಗದಿರಲು ನಿರ್ಧರಿಸಿದ್ದಾರೆ. ವಾಸ್ತವವಾಗಿ ಗೋವಾ ಪರ ರಣಜಿ ಆಡುವ ಸಲುವಾಗಿ ಜೈಸ್ವಾಲ್, ಮುಂಬೈ ತಂಡದಿಂದ ಹೊರನಡೆಯಲು ನಿರ್ಧರಿಸಿದ್ದರು. ಆದರೀಗ ಮುಂಬೈ ಪರ ಆಡುವುದನ್ನು ಮುಂದುವರೆಸಲು ಜೈಸ್ವಾಲ್ ಬಯಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಯಶಸ್ವಿ ಜೈಸ್ವಾಲ್ NOC ರದ್ದುಗೊಳಿಸುವಂತೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಮನವಿ ಮಾಡಿದ್ದಾರೆ.
ಯಶಸ್ವಿ ಜೈಸ್ವಾಲ್ ಎಂಸಿಎಗೆ ಕಳುಹಿಸಿರುವ ಇ-ಮೇಲ್‌ನಲ್ಲಿ, ‘ನನಗೆ ನೀಡಲಾದ ಎನ್‌ಒಸಿಯನ್ನು ರದ್ದುಗೊಳಿಸಬೇಕೆಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ನಾನು ನನ್ನ ಕುಟುಂಬದೊಂದಿಗೆ ಗೋವಾಕ್ಕೆ ಸ್ಥಳಾಂತರಗೊಳ್ಳಲು ಬಯಸಿದ್ದೆ. ಆದರೆ ಆ ಯೋಜನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಆದ್ದರಿಂದ, ಈ ಸೀಸನ್‌ನಲ್ಲಿ ಮುಂಬೈ ಪರ ಆಡಲು ನನಗೆ ಅವಕಾಶ ನೀಡುವಂತೆ ಎಂಸಿಎಯನ್ನು ವಿನಂತಿಸುತ್ತೇನೆ. ನಾನು ಈ NOC ಯನ್ನು ಬಿಸಿಸಿಐಗಾಗಲಿ ಅಥವಾ ಗೋವಾ ಕ್ರಿಕೆಟ್ ಅಸೋಸಿಯೇಷನ್‌ಗಾಗಲಿ ಸಲ್ಲಿಸಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ವಾಸ್ತವವಾಗಿ ಏಪ್ರಿಲ್‌ನಲ್ಲಿ ಯಶಸ್ವಿ ಜೈಸ್ವಾಲ್ ಮುಂಬೈನ ರಣಜಿ ತಂಡವನ್ನು ತೊರೆಯಲು NOC ಕೋರಿದಾಗ, ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಹಾಗೂ ಯಶಸ್ವಿ ಜೈಸ್ವಾಲ್ ನಡುವೆ ಬಿರುಕು ಮೂಡಿದೆ. ಇಬ್ಬರ ನಡುವೆ ಬಹಳ ದಿನಗಳಿಂದ ಜಗಳ ನಡೆಯುತ್ತಿದೆ. ಪಂದ್ಯದ ವೇಳೆ ಯಶಸ್ವಿ ಜೈಸ್ವಾಲ್ ರಹಾನೆ ಕಿಟ್ ಬ್ಯಾಗ್ ಅನ್ನು ಒದ್ದಿದ್ದಾರೆ. ಇಷ್ಟೇ ಅಲ್ಲ, ಮುಂಬೈ ಕೋಚ್ ಯಶಸ್ವಿ ಜೈಸ್ವಾಲ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಜೈಸ್ವಾಲ್ ಮುಂಬೈ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿತ್ತು.
ಪಾಕಿಸ್ತಾನಕ್ಕೆ ಮುಖಭಂಗ; PSL ಪಂದ್ಯಗಳಿಗೆ ಆತಿಥ್ಯವಹಿಸದಿರಲು ದುಬೈ ನಿರ್ಧಾರ; ವರದಿ
ಅಲ್ಲದೆ ಯಶಸ್ವಿ ಜೈಸ್ವಾಲ್ ಅವರೇ ಸ್ವತಃ ಮಾಧ್ಯಮಗಳ ಮುಂದೆ ಗೋವಾ ಪರ ಆಡಲು ಅವಕಾಶ ಸಿಕ್ಕಿದ್ದು, ಆ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿರುವುದಾಗಿಯೂ ಜೈಸ್ವಾಲ್ ಹೇಳಿದ್ದರು. ಆದರೆ ಈಗ ಯಶಸ್ವಿ ಜೈಸ್ವಾಲ್ ಯು-ಟರ್ನ್ ತೆಗೆದುಕೊಂಡಿದ್ದಾರೆ. ಆದರೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 pm, Fri, 9 May 25