ಭಾರತ ಕ್ರಿಕೆಟ್ಗೆ 2024 ಬಹಳ ವಿಶೇಷವಾಗಿತ್ತು. ಈ ವರ್ಷ ಟೀಂ ಇಂಡಿಯಾ ಹಲವು ಮೈಲಿಗಲ್ಲುಗಳನ್ನು ಸಾಧಿಸಿತು. ಅದರಲ್ಲಿ ಪ್ರಮುಖವಾಗಿ ಬರೋಬ್ಬರಿ 11 ವರ್ಷಗಳ ನಂತರ ಟೀಂ ಇಂಡಿಯಾ ತನ್ನ ಐಸಿಸಿ ಟ್ರೋಫಿಯ ಬರವನ್ನು ನೀಗಿಸಿಕೊಂಡಿತ್ತು. ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದಿದ್ದ ಈ ಬಾರಿಯ ಟಿ20 ವಿಶ್ವಕಪ್ ಟೀಂ ಇಂಡಿಯಾದ ಕೈಸೇರಿತ್ತು. ವೆಸ್ಟ್ ಇಂಡೀಸ್ನ ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿದ್ದ ಟೀಂ ಇಂಡಿಯಾ 7 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಈ ವಿಶ್ವಕಪ್ನ ಇನ್ನೊಂದು ವಿಶೇಷವೆಂದರೆ ಇಡೀ ಟೂರ್ನಿಯಲ್ಲಿ ಟೀಂ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್ ಕಣಕ್ಕಿಳಿದಿದ್ದ ಭಾರತ ತಂಡ ಬಲಿಷ್ಠ ತಂಡಗಳನ್ನು ಮಣಿಸಿ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಈ ಮೂಲಕ 17 ವರ್ಷಗಳ ನಂತರ ಮತ್ತೊಮ್ಮೆ ಟಿ20 ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿತ್ತು.
ವಾಸ್ತವವಾಗಿ 2007 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ ಚೊಚ್ಚಲ ಆವೃತ್ತಿಯಲ್ಲಿ ಟೀಂ ಇಂಡಿಯಾ ಎಂಎಸ್ ಧೋನಿ ನಾಯಕಯತ್ವದಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಆ ಬಳಿಕ ತಂಡ 2016 ರಲ್ಲಿ ಮತ್ತೊಮ್ಮೆ ಫೈನಲ್ಗೇರಿತ್ತಾದರೂ, ಚಾಂಪಿಯನ್ ಆಗುವಲ್ಲಿ ಎಡವಿತ್ತು. ಆದರೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಜೇಯ ತಂಡವಾಗಿ ಫೈನಲ್ಗೆ ಕಾಲಿಟ್ಟಿದ್ದ ಟೀಂ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಗೆಲುವಿನೊಂದಿಗೆ ತಂಡದ ಲೆಜೆಂಡರಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯ ಹೇಳಿದ್ದರು. ಇವರ ಜೊತೆಗೆ ಅಂದು ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಕೂಡ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು.
ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ತಂಡದ ಪರ ವಿರಾಟ್ ಕೊಹ್ಲಿ ಗರಿಷ್ಠ 76, ಅಕ್ಷರ್ ಪಟೇಲ್ 47 ಮತ್ತು ಶಿವಂ ದುಬೆ 27 ರನ್‌ಗಳ ಕಾಣಿಕೆ ನೀಡಿದರು. ಇತ್ತ ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ ಮತ್ತು ಎನ್ರಿಕ್ ನೋಕಿಯಾ ತಲಾ 2 ವಿಕೆಟ್ ಪಡೆದರೆ, ಮಾರ್ಕೊ ಯಾನ್ಸೆನ್ ಮತ್ತು ಕಗಿಸೊ ರಬಾಡ ತಲಾ 1 ವಿಕೆಟ್ ಪಡೆದರು.
177 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಲಷ್ಟೇ ಶಕತವಾಗಿ 7 ರನ್‌ಗಳಿಂದ ಚಾಂಪಿಯನ್ ಪಟ್ಟವನ್ನು ಕಳೆದುಕೊಂಡಿತು. ಆಫ್ರಿಕಾ ಪರ ಏಕಾಂಗಿ ಹೋರಾಟ ನಡೆಸಿದ್ದ ಹೆನ್ರಿಕ್ ಕ್ಲಾಸೆನ್ 52 ರನ್ ಗಳಿಸಿದರೆ, ಕ್ವಿಂಟನ್ ಡಿ ಕಾಕ್ 39 ರನ್, ಟ್ರಿಸ್ಟಾನ್ ಸ್ಟಬ್ಸ್ 31 ರನ್ ಡೇವಿಡ್ ಮಿಲ್ಲರ್ 21 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಕೂಡ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Sat, 14 December 24