ಹಿಂದಿ ಮಹಿಳೆಯರ ಭಾಷೆ: ಯೋಗರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ

Yograj SinghControversial Statement: ಭಾರತ ತಂಡದ ಮಾಜಿ ಆಟಗಾರ ಯೋಗರಾಜ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವ ಮೂಲಕ ಗಮನ ಸೆಳೆದಿದ್ದರು. ಇದೀಗ ಯೋಗರಾಜ್ ಸಿಂಗ್ ಹಿಂದಿ ಹೆಂಗಸರ ಭಾಷೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿಂದಿ ಮಹಿಳೆಯರ ಭಾಷೆ: ಯೋಗರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ
Yograj Singh - Yuvraj Singh

Updated on: Jan 13, 2025 | 12:54 PM

ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ತಮ್ಮ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಗಂಭೀರ ಆರೋಪಗಳೊಂದಿಗೆ ಸುದ್ದಿಯಲ್ಲಿದ್ದ ಯೋಗರಾಜ್ ಸಿಂಗ್ ಈ ಬಾರಿ ವಿವಾದಾತ್ಮಕ ಹೇಳಿಕೆಯೊಂದಿಗೆ ಮುನ್ನಲೆಗೆ ಬಂದಿದ್ದಾರೆ.

ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಯೋಗರಾಜ್ ಸಿಂಗ್, ಹಿಂದಿ ಭಾಷೆಯನ್ನು ಮಹಿಳೆಯರ ಭಾಷೆ ಎಂದು ತುಚ್ಛ ಹೇಳಿಕೆ ನೀಡಿದ್ದಾರೆ. ಹಿಂದಿ ಭಾಷೆಗೆ ಜೀವವಿಲ್ಲ. ಅದು ಗಂಡಸರ ಭಾಷೆಯಲ್ಲ. ಬೇಕಿದ್ದರೆ ಹೆಂಗಸರ ಭಾಷೆಯನ್ನಬಹುದು ಎಂದಿದ್ದಾರೆ.

ನನ್ನ ಪ್ರಕಾರ ಪಂಜಾಬಿ ಗಂಡಸರ ಭಾಷೆ. ಹಿಂದಿಯನ್ನು ಪುರುಷರು ಮಾತನಾಡುವಾಗ ಚೆನ್ನಾಗಿರಲ್ಲ. ಹೀಗಾಗಿಯೇ ನಾನು ಹಿಂದಿಯನ್ನು ಪುರಷರ ಭಾಷೆಯಲ್ಲ ಎಂದು ಹೇಳುತ್ತೇನೆ. ಅದು ಒಂಥಂತರ ಹೆಂಗಸರ ಭಾಷೆ ಎಂದು ಯೋಗರಾಜ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ನೀವೇ ನೋಡಿ, ಮಹಿಳೆಯರು ಹಿಂದಿ ಭಾಷೆ ಮಾಡನಾಡುವಾಗ ಚೆನ್ನಾಗಿರುತ್ತದೆ. ಅದನ್ನು ಕೇಳುವಾಗ ಇಷ್ಟವಾಗುತ್ತದೆ. ಅದೇ ಪುರುಷರು ಹಿಂದಿಯಲ್ಲಿ ಮಾತನಾಡುವುದನ್ನು ಕೇಳಿ ನೋಡಿ, ಚೆನ್ನಾಗಿರಲ್ಲ ಎಂದರು.

ಇದೇ ವೇಳೆ ಪಂಜಾಬಿ ಭಾಷೆಯನ್ನು ಪುರುಷರ ಭಾಷೆ ಎಂದು ಬಣ್ಣಿಸಿದ ಯೋಗರಾಜ್ ಸಿಂಗ್, ಪಂಜಾಬಿಯಲ್ಲಿ ಗಂಡಸರು ಮಾತನಾಡುವಾಗಲೇ ಒಂದು ಖದರ್ ಇರುತ್ತದೆ. ಅದೇ ಹಿಂದಿಯಲ್ಲಿ ಮಾತನಾಡುವಾಗ ಜೀವವಿರಲ್ಲ. ಹೀಗಾಗಿಯೇ ನಾನು ಪಂಜಾಬಿ ಭಾಷೆಯನ್ನು ಪುರುಷರ ಮತ್ತು ಹಿಂದಿಯನ್ನು ಮಹಿಳೆಯರ ಭಾಷೆ ಎನ್ನುತ್ತೇನೆ.

ಇದೀಗ ಯೋಗರಾಜ್ ಸಿಂಗ್ ನೀಡಿರುವ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದ್ದು, ಹಿಂದಿ ಭಾಷಾಪ್ರೇಮಿಗಳು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಎಂದಿನಂತೆ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡು ಯೋಗರಾಜ್ ಸಿಂಗ್ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.

ಅಂದಹಾಗೆ ಯುವರಾಜ್ ಸಿಂಗ್ ಅವರ ತಂದೆ ಕೂಡ ಭಾರತ ತಂಡದ ಮಾಜಿ ಆಟಗಾರ. 80ರ ದಶಕದಲ್ಲಿ ಅವರು ಭಾರತದ ಪರ ಒಟ್ಟು 7 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಂದು ಟೆಸ್ಟ್ ಪಂದ್ಯದಲ್ಲಿ 10 ರನ್​ಗಳಿಸಿದ್ದರೆ, 4 ಏಕದಿನ ಪಂದ್ಯಗಳ ಇನಿಂಗ್ಸ್​ಗಳಿಂದ 1 ರನ್ ಮಾತ್ರ ಕಲೆಹಾಕಿದ್ದರು.

ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ… 4 ತಿಂಗಳಲ್ಲಿ 3 ಪ್ರಮುಖ ಟೂರ್ನಿ

ಇದೇ ವೇಳೆ ಏಕದಿನ ಕ್ರಿಕೆಟ್​ನಲ್ಲಿ 4 ವಿಕೆಟ್ ಹಾಗೂ ಟೆಸ್ಟ್​ನಲ್ಲಿ 1 ವಿಕೆಟ್ ಅನ್ನು ಸಹ ಕಬಳಿಸಿದ್ದಾರೆ. ಇದೀಗ ಸ್ವಂತ ಕ್ರಿಕೆಟ್ ಅಕಾಡೆಮಿ ನಡೆಯುತ್ತಿರುವ ಯೋಗರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆಗಳೊಂದಿಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.