Yuzvendra Chahal: ಧನಶ್ರೀ ಜೊತೆಗಿನ ವಿಚ್ಛೇದನದ ಬಗ್ಗೆ ಮನಬಿಚ್ಚಿ ಮಾತನಾಡಿದ ಯುಜ್ವೇಂದ್ರ ಚಾಹಲ್
Yuzvendra Chahal and Dhanashree Verma: ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದ ನಂತರ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮೊದಲ ಬಾರಿಗೆ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಧನಶ್ರೀಯಿಂದ ವಿಚ್ಛೇದನ ಪಡೆದ ಅವರನ್ನು ಮೋಸಗಾರ ಎಂದೂ ಕರೆದರು. ಆ ಸಮಯದಲ್ಲಿ ನನಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು ಎಂದು ಹೇಳಿದ್ದಾರೆ.

ಬೆಂಗಳೂರು (ಆ. 01): ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (Yuzvendra Chahal) ಕಳೆದ ಕೆಲವು ವರ್ಷಗಳಿಂದ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು ಸುದ್ದಿಯಾದವರು. ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದಾಗ ಚಾಹಲ್ ಫುಲ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಆ ಸಮಯದಲ್ಲಿ, ಚಾಹಲ್ ಸಾಮಾಜಿಕ ಮಾಧ್ಯಮದಲ್ಲಿಯೂ ಸಹ ಸಾಕಷ್ಟು ಟ್ರೋಲ್ ಆಗಿದ್ದರು. ಧನಶ್ರೀ ಅವರಿಂದ ವಿಚ್ಛೇದನ ಪಡೆದ ನಂತರ ಜನರು ಇವರನ್ನು “ವಂಚಕ” ಎಂದು ಕರೆದರು. ಇದೀಗ ಚಾಹಲ್ ಇತ್ತೀಚಿನ ಸಂದರ್ಶನದಲ್ಲಿ, ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ ಮತ್ತು ಆ ಸಮಯದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳ ಬೇಕು ಎಂದು ಆಲೋಚಿಸುತ್ತಿದ್ದೆ ಎಂಬ ಆಘಾತಕಾರಿ ವಿಚಾರ ಹೇಳಿದ್ದಾರೆ.
ರಾಜ್ ಶಮ್ನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಮನದಾಳದ ಮಾತುಗಳನ್ನು ಆಡಿದ ಚಾಹಲ್, ಧನಶ್ರೀ ವರ್ಮಾ ಅವರಿಂದ ವಿಚ್ಛೇದನದ ನಂತರ ತಮ್ಮನ್ನು “ವಂಚಕ” ಎಂದು ತಪ್ಪಾಗಿ ಹಣೆಪಟ್ಟಿ ಕಟ್ಟಲಾಗಿದೆ. ನನ್ನನ್ನು ಮೋಸಗಾರ ಎಂದು ಕರೆಯಲಾಯಿತು, ಆದರೆ ನಾನು ಜೀವನದಲ್ಲಿ ಎಂದಿಗೂ ಮೋಸ ಮಾಡಲಿಲ್ಲ. ನಾನು ಅತ್ಯಂತ ನಿಷ್ಠಾವಂತ ವ್ಯಕ್ತಿ. ನನ್ನಂತಹ ನಿಷ್ಠಾವಂತ ವ್ಯಕ್ತಿಯನ್ನು ನೀವು ಎಲ್ಲಿಯೂ ಕಾಣುವುದಿಲ್ಲ. ನಾನು ನನ್ನೊಂದಿಗಿರುವ ಜನರ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇನೆ. ನನಗೆ ಇಬ್ಬರು ಸಹೋದರಿಯರಿದ್ದಾರೆ, ಆದ್ದರಿಂದ ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ನನಗೆ ತಿಳಿದಿದೆ. ನನಗೆ ಅತ್ಯಂತ ನೋವುಂಟುಮಾಡುವ ವಿಷಯವೆಂದರೆ ಜನರು ನನ್ನ ಇಡೀ ಕಥೆಯನ್ನು ತಿಳಿಯದೆಯೇ ಅವರಿಗೆ ಅನಿಸಿದ್ದನ್ನ ಬರೆಯುತ್ತಾರೆ ಎಂದು ಹೇಳಿದ್ದಾರೆ.
ತಮ್ಮ ವಿಚ್ಛೇದನಕ್ಕೆ ಕಾರಣವನ್ನು ನೀಡಿದ ಚಾಹಲ್, ಒಟ್ಟಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗದ ಕಾರಣ ಅಂತರ ಹೆಚ್ಚಾಯಿತು ಎಂದು ಹೇಳಿದರು. ಎರಡೂ ಕಡೆಯಿಂದ ರಾಜಿ ಅಗತ್ಯವಾಗಿದ್ದರೂ, ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿಂದಾಗಿ ಎಲ್ಲವೂ ಹಾಳಾಗುತ್ತದೆ ಎಂದು ಹೇಳಿದರು. ತಾವು ಮತ್ತು ಧನಶ್ರೀ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದೇವೆ. ಇದರಿಂದಾಗಿ, ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಅದು ಕ್ರಮೇಣ ಸಂಬಂಧದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಹೇಳಿದರು.
IND vs ENG 5th Test: ಎರಡನೇ ದಿನ ಆಟ ನಡೆಯುತ್ತ-ಇಲ್ವಾ?: ಇಲ್ಲಿದೆ ಇಡೀ ದಿನದ ಹವಾಮಾನ ವರದಿ
“ನಾನು ನಾಲ್ಕೈದು ತಿಂಗಳುಗಳಿಂದ ತುಂಬಾ ಖಿನ್ನತೆಯಲ್ಲಿದ್ದೆ. ನನಗೆ ತುಂಬಾ ಆತಂಕ ಆಗುತ್ತಿತ್ತು. ನನ್ನ ಕಣ್ಣುಗಳಲ್ಲಿ ಕತ್ತಲೆ ಆವರಿಸುತ್ತಿತ್ತು. ಆ ಸಮಯದಲ್ಲಿ ನನ್ನೊಂದಿಗಿದ್ದ ಕೆಲವೇ ಜನರಿಗೆ ಈ ವಿಷಯಗಳು ತಿಳಿದಿದ್ದವು. ಇದಲ್ಲದೆ, ನಾನು ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಈ ಸಮಯದಲ್ಲಿ, ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಯೋಚಿಸುತ್ತಿದ್ದೆ, ಏಕೆಂದರೆ ಆಗ ನನ್ನ ಮೆದುಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತು” ಎಂದು ಚಾಹಲ್ ಹೇಳಿದ್ದಾರೆ.
ಜೀವನದಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದರೂ, ನಾನು ಖಾಲಿತನ ಅನುಭವಿಸುತ್ತಿದ್ದೆ. ನಿಮ್ಮ ಜೀವನದಲ್ಲಿ ಎಲ್ಲವೂ ಇದೆ, ಎಲ್ಲಾ ಸೌಕರ್ಯಗಳಿವೆ, ಆದರೆ ನಿಮಗೆ ಸಂತೋಷವಿರದಿದ್ದರೆ ಏನೂ ಇಲ್ಲ ಎಂದು ಅವರು ಹೇಳಿದರು. ನೀವು ಯಾರೊಂದಿಗಾದರೂ ಕಾಣಿಸಿಕೊಂಡ ಮಾತ್ರಕ್ಕೆ ಜನರು ನಿಮ್ಮ ಬಗ್ಗೆ ಏನು ಬೇಕಾದರೂ ಯೋಚಿಸುತ್ತಾರೆ ಮತ್ತು ವೀವ್ಸ್ ಹೆಚ್ಚಿಸಲು ಏನು ಬೇಕಾದರೂ ಬರೆಯುತ್ತಾರೆ ಎಂದು ದುಃಖ ತೋಡಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 am, Fri, 1 August 25




