Zim Afro T10 2023: ಸ್ಯಾಂಪ್ ಆರ್ಮಿ vs ಹರಿಕೇನ್ಸ್ ಪಂದ್ಯ ಟೈ: ಸೂಪರ್ ಓವರ್ನಲ್ಲಿ ಗೆದ್ದಿದ್ದು ಯಾರು?
Cape Town Samp Army vs Harare Hurricanes: 116 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಕೇಪ್ ಟೌನ್ ಸ್ಯಾಂಪ್ ಆರ್ಮಿ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು.
Zim Afro T10 2023: ಝಿಂಬಾಬ್ವೆಯಲ್ಲಿ ನಡೆಯುತ್ತಿರುವ ಝಿಮ್ ಆಫ್ರೊ ಟಿ10 ಲೀಗ್ನ 14ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಹರಾರೆ ಹರಿಕೇನ್ಸ್ (Harare Hurricanes) ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇಪ್ ಟೌನ್ ಸ್ಯಾಂಪ್ ಆರ್ಮಿ (Cape Town Samp Army) ತಂಡವು ಬೌಲಿಂಗ್ ಆಯ್ದುಕೊಂಡಿತು. ಇತ್ತ ಮೊದಲು ಬ್ಯಾಟ್ ಮಾಡಿದ ಹರಾರೆ ಹರಿಕೇನ್ಸ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿತ್ತು.
ಹರಾರೆ ಹರಿಕೇನ್ಸ್ ತಂಡವು ಕೇವಲ 11 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಮಯದಲ್ಲಿ ಕಣಕ್ಕಿಳಿದ ಡೊನಾವನ್ ಫೆರೇರಾ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡೊನಾವನ್ 33 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 87 ರನ್ ಚಚ್ಚಿದರು. ಡೊನಾವನ್ ಫೆರೇರಾ ಅವರ ವಿಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಹರಾರೆ ಹರಿಕೇನ್ಸ್ ತಂಡವು 10 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 115 ರನ್ ಕಲೆಹಾಕಿತು.
116 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಕೇಪ್ ಟೌನ್ ಸ್ಯಾಂಪ್ ಆರ್ಮಿ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. 6 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 26 ಎಸೆತಗಳಲ್ಲಿ 56 ರನ್ ಬಾರಿಸಿ ಗುರ್ಬಾಝ್ ವಿಕೆಟ್ ಒಪ್ಪಿಸಿದರು.
ಇನ್ನು ಕೊನೆಯ 2 ಓವರ್ಗಳಲ್ಲಿ ಸ್ಯಾಂಪ್ ಆರ್ಮಿ ತಂಡಕ್ಕೆ ಗೆಲ್ಲಲು 23 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕರಿಮ್ ಜನ್ನತ್ ಹಾಗೂ ಭಾನುಕಾ ರಾಜಪಕ್ಸೆ ಜೊತೆಗೂಡಿ ಮೊಹಮ್ಮದ್ ನಬಿಯ ಓವರ್ನಲ್ಲಿ 15 ರನ್ ಕಲೆಹಾಕಿದರು. ಕೊನೆಯ ಓವರ್ನಲ್ಲಿ 8 ರನ್ಗಳ ಅವಶ್ಯಕತೆ. ಈ ಓವರ್ನಲ್ಲಿ 2 ವಿಕೆಟ್ ಉರುಳಿಸಿದ ಶ್ರೀಶಾಂತ್ ನೀಡಿದ್ದು ಕೇವಲ 7 ರನ್ ಮಾತ್ರ. ಇದರೊಂದಿಗೆ ಪಂದ್ಯವು 115 ರನ್ಗಳೊಂದಿಗೆ ಟೈನಲ್ಲಿ ಅಂತ್ಯಗೊಂಡಿತು.
ಸೂಪರ್ ಓಪರ್:
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಕೇಪ್ ಟೌನ್ ಸ್ಯಾಂಪ್ ಆರ್ಮಿ ತಂಡದ ಪರ ಗುರ್ಬಾಝ್ (0) ಶೂನ್ಯಕ್ಕೆ ಔಟಾದರು. ಅಲ್ಲದೆ ನಾಂಡ್ರೆ ಬರ್ಗರ್ ಎಸೆದ ಈ ಓವರ್ನಲ್ಲಿ ಕೇವಲ 7 ರನ್ಗಳಿಸಲಷ್ಟೇ ಶಕ್ತರಾದರು. ಇನ್ನು ಕೇವಲ 8 ರನ್ಗಳ ಗುರಿ ಪಡೆದ ಹರಾರೆ ಹರಿಕೇನ್ಸ್ ತಂಡವು 5 ಎಸೆತಗಳಲ್ಲಿ ಗುರಿ ಮುಟ್ಟುವ ಮೂಲಕ ರೋಚಕ ಜಯ ಸಾಧಿಸಿತು.
ಕೇಪ್ ಟೌನ್ ಸ್ಯಾಂಪ್ ಆರ್ಮಿ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ , ತಡಿವಾನಾಶೆ ಮರುಮಣಿ , ಸೆಫಸ್ ಝುವಾವೋ , ಸೀನ್ ವಿಲಿಯಮ್ಸ್ , ಕರೀಮ್ ಜನತ್ , ಮ್ಯಾಥ್ಯೂ ಬ್ರೀಟ್ಜ್ಕೆ , ಪಾರ್ಥಿವ್ ಪಟೇಲ್ (ನಾಯಕ) , ಪೀಟರ್ ಹ್ಯಾಟ್ಜೋಗ್ಲೋ , ರಿಚರ್ಡ್ ನಾಗರವ , ಮುಜೀಬ್ ಉರ್ ರೆಹಮಾನ್ , ಶೆಲ್ಡನ್ ಕಾಟ್ರೆಲ್.
ಇದನ್ನೂ ಓದಿ: Sikandar Raza: 6 ಸಿಕ್ಸ್, 5 ಫೋರ್: ಸ್ಪೋಟಕ ಅರ್ಧಶತಕ ಸಿಡಿಸಿ ದಾಖಲೆ ಬರೆದ ರಾಝ
ಹರಾರೆ ಹರಿಕೇನ್ ಪ್ಲೇಯಿಂಗ್ 11: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಎವಿನ್ ಲೂಯಿಸ್, ರೆಗಿಸ್ ಚಕಬ್ವಾ , ಇಯಾನ್ ಮೋರ್ಗನ್ (ನಾಯಕ) , ಡೊನಾವನ್ ಫೆರೇರಾ , ಮೊಹಮ್ಮದ್ ನಬಿ , ಸಮಿತ್ ಪಟೇಲ್ , ಬ್ರಾಂಡನ್ ಮಾವುಟಾ , ಲ್ಯೂಕ್ ಜೊಂಗ್ವೆ , ನಾಂಡ್ರೆ ಬರ್ಗರ್ , ಕ್ರಿಸ್ ಎಂಫೂಫು.