Yusuf Pathan: 26 ಎಸೆತಗಳಲ್ಲಿ 80 ರನ್! ಪಾಕ್ ವೇಗಿ ವಿರುದ್ಧ ಅಬ್ಬರಿಸಿದ ಯೂಸುಫ್ ಪಠಾಣ್..! ವಿಡಿಯೋ ನೋಡಿ
Zim Afro T10: ಪಾಕ್ ವೇಗಿ ಮೊಹಮ್ಮದ್ ಅಮೀರ್ ವಿರುದ್ಧ ಸಿಡಿಲಬ್ಬರ್ ಬ್ಯಾಟಿಂಗ್ ಮಾಡಿದ ಪಠಾಣ್, ಒಂದೇ ಓವರ್‌ನಲ್ಲಿ 3 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿಯೊಂದಿಗೆ 25 ರನ್ ದೋಚಿದರು.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಝಿಮ್ ಆಫ್ರೋ ಟಿ10 (Zim Afro T10) ಲೀಗ್ನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಡರ್ಬನ್ ಖಲಂದರ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಜೋಬರ್ಗ್ ಬಫಲೋಸ್ ತಂಡ (Joburg Buffaloes vs Durban Qalandars) ಫೈನಲ್ಗೆ ಟಿಕೆಟ್ ಖಚಿತಪಡಿಸಿಕೊಂಡಿದೆ. ಜೋಬರ್ಗ್ ಬಫಲೋಸ್ ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಮಾಜಿ ಆಟಗಾರ ಯೂಸುಫ್ ಪಠಾಣ್ (Yusuf Pathan) ಕೇವಲ 26 ಎಸೆತಗಳಲ್ಲಿ ಅಜೇಯ 80 ರನ್ ಸಿಡಿಸಿ ಗೆಲುವಿನ ಹೀರೋ ಎನಿಸಿಕೊಂಡರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡರ್ಬನ್ ಖಲಂದರ್ಸ್ ತಂಡ ನಿಗಧಿತ 10 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ದಾಖಲೆಯ 140 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಜೋಬರ್ಗ್ ಬಫಲೋಸ್ ತಂಡ ಇನ್ನೊಂದು ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಜೋಬರ್ಗ್ ಬಫಲೋಸ್ ತಂಡ, ಡರ್ಬನ್ ಖಲಂದರ್ಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಡರ್ಬನ್ ಖಲಂದರ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಸೀಫರ್ಟ್ 11 ರನ್ಗಳಿಗೆ ಸುಸ್ತಾದರೆ, ಮತ್ತೊಬ್ಬ ಆರಂಭಿಕ ಮಿರ್ಜಾ ಬೇಗ್ 20 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಮೂರನೇ ಕ್ರಮಾಂಕದಲ್ಲಿ ಬಂದ ಆಂಡ್ರೆ ಫ್ಲೆಚರ್ 14 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 39 ರನ್ ಸಿಡಿಸಿದರು.
60 ಎಸೆತಗಳಲ್ಲಿ 140 ರನ್‌ಗಳ ಟಾರ್ಗೆಟ್
ಹಾಗೆಯೇ 5ನೇ ಕ್ರಮಾಂಕದಲ್ಲಿ ಬಂದ ಆಸೀಪ್ ಅಲಿ ಕೂಡ 14 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 32 ರನ್ ಬಾರಿಸಿದರು. ಕೊನೆಯಲ್ಲಿ ನಿಕ್ ವೆಲ್ಚ್ ಕೂಡ 9 ಎಸೆತಗಳಲ್ಲಿ 24 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಡರ್ಬನ್ ಖಲಂದರ್ಸ್ ತಂಡ 60 ಎಸೆತಗಳಲ್ಲಿ 140 ರನ್‌ಗಳ ಟಾರ್ಗೆಟ್ ಸೆಟ್ ಮಾಡಿತು.
ಈ ಬೃಹತ್ ಗುರಿ ಬೆನ್ನಟ್ಟಿದ ಜೋಬರ್ಗ್ ಬಫಲೋಸ್ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದ ಆರಂಭಿಕರಾದ ಮೊಹಮ್ಮದ್ ಅಫೀಜ್ 17 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಟಾಮ್ ಬಾಂಟನ್ 4 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಮೂರನೇ ಕ್ರಮಾಂಕದಲ್ಲಿ ಬಂದ ವಿಲ್ ಸ್ಮಿದ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲದೆ 16 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
26 ಎಸೆತಗಳಲ್ಲಿ 4 ಬೌಂಡರಿ ಹಾಗೂ 9 ಸಿಕ್ಸರ್
ಹೀಗಾಗಿ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿತ್ತು. ಈ ವೇಳೆ ಬ್ಯಾಟಿಂಗ್ಗೆ ಇಳಿದ ಯೂಸುಫ್ ಪಠಾಣ್, ಡರ್ಬನ್ ಖಲಂದರ್ಸ್ ತಂಡದ ಬೌಲರ್ಗಳ ಬೆಂಡೆತ್ತಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 26 ಎಸೆತಗಳನ್ನು ಎದುರಿಸಿದ ಯೂಸುಫ್ 4 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಅಜೇಯ 80 ರನ್ ಬಾರಿಸಿದರು. ಕೊನೆಯಲ್ಲಿ ಯೂಸುಫ್ಗೆ ಸಾಥ್ ನೀಡಿದ ಮುಶ್ಫಿಕರ್ ರಹೀಮ್ 10 ಎಸೆತಗಳಲ್ಲಿ ಅಜೇಯ 14 ರನ್ ಬಾರಿಸಿದರು.
Far from over when @iamyusufpathan is in this form! ?#JBvDQ #T10League #ZimAfroT10 #CricketsFastestFormat pic.twitter.com/Cdgi7HCsAd
— T10 League (@T10League) July 28, 2023
ಪಾಕ್ ವೇಗಿ ಬೆವರಿಳಿಸಿದ ಯೂಸುಫ್
ವಾಸ್ತವವಾಗಿ 8ನೇ ಓವರ್‌ನಲ್ಲಿ ಪಾಕ್ ವೇಗಿ ಮೊಹಮ್ಮದ್ ಅಮೀರ್ ವಿರುದ್ಧ ಸಿಡಿಲಬ್ಬರ್ ಬ್ಯಾಟಿಂಗ್ ಮಾಡಿದ ಪಠಾಣ್, ಒಂದೇ ಓವರ್‌ನಲ್ಲಿ 3 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿಯೊಂದಿಗೆ 25 ರನ್ ದೋಚಿದರು. ಈ ಮೂಲಕ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಹೀಗಾಗಿ ಅಂತಿಮ ಎರಡು ಓವರ್‌ಗಳಲ್ಲಿ ಬಫಲೋಸ್‌ಗೆ ಗೆಲ್ಲಲು 39 ರನ್‌ಗಳು ಅಗತ್ಯವಿತ್ತು.
ಇನ್ನಿಂಗ್ಸ್ನ 9ನೇ ಓವರ್‌ನಲ್ಲಿ ತಮ್ಮ ಅರ್ಧಶತಕ ಪೂರೈಸಿದ ಯೂಸುಫ್, ಅಂತಿಮ ಓವರ್‌ನಲ್ಲಿ ಗೆಲ್ಲಲು 20 ರನ್‌ಗಳು ಬೇಕಾಗಿದ್ದಾಗ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ