IND vs ZIM: ಇಂದು ಭಾರತ- ಜಂಬಾಬ್ವೆ ಮೊದಲ ಏಕದಿನ: ಟೀಮ್ ಇಂಡಿಯಾ ಪ್ಲೇಯಿಂಗ್ XI ಹೇಗಿರಲಿದೆ?
India Probable Playing XI vs ZIM, 1st ODI: ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಇಂದು ಭಾರತ ಹಾಗೂ ಜಿಂಬಾಬ್ವೆ ನಡುವೆ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಇಂಜುರಿಯಿಂದ ಗುಣಮುಖರಾಗಿ ಫಿಟ್ ಆಗಿರುವ ಕೆಎಲ್ ರಾಹುಲ್ (KL Rahul) ತಂಡದವನ್ನು ಮುನ್ನಡೆಸಲಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಜಿಂಬಾಬ್ವೆಗೆ ತೆರಳಿರುವ ಭಾರತ ಕ್ರಿಕೆಟ್ ತಂಡ (Zimbabwe vs India) ಇಂದು ಅಗ್ನಿಪರೀಕ್ಷೆಗೆ ಇಳಿಯಲಿದೆ. ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ತಂಡದ ಪ್ರಮುಖ ಹಿರಿಯ ಆಟಗಾರರಾದ ರೋಹಿತ್ ಶರ್ಮಾ (Rohit Sharma), ರಿಷಭ್ ಪಂತ್, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇಂಜುರಿಯಿಂದ ಗುಣಮುಖರಾಗಿ ಫಿಟ್ ಆಗಿರುವ ಕೆಎಲ್ ರಾಹುಲ್ (KL Rahul) ತಂಡದವನ್ನು ಮುನ್ನಡೆಸಲಿದ್ದಾರೆ. ಇವರಿಗೆ ಶಿಖರ್ ಧವನ್ ಸಾಥ್ ನೀಡಲಿದ್ದಾರೆ. ಇತ್ತ ಜಿಂಬಾಬ್ವೆ ತಂಡವು ತಮ್ಮ ನಿಯಮಿತ ನಾಯಕ ಕ್ರೇಗ್ ಇರ್ವಿನ್ ಇಲ್ಲದೆ ಭಾರತ ವಿರುದ್ಧ ಅಖಾಡಕ್ಕಿಳಿಯಲಿದೆ. ಹೀಗಾಗಿ ತಂಡದ ನಾಯಕತ್ವವನ್ನು ರೆಗಿಸ್ ಚಕಬ್ವಾ ಅವರಿಗೆ ನೀಡಲಾಗಿದೆ.
ಭಾರತ ಪರ ಓಪನರ್ಗಳಾಗಿ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಯಾಕೆಂದರೆ ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಈ ಜೋಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿತ್ತು. ಗಿಲ್ ಓಪನರ್ ಆಗಿ ಯಶಸ್ಸು ಕಂಡಿದ್ದರು. ಅವಕಾಶಕ್ಕಾಗಿ ಕಾಯುತ್ತಿರುವ ರಾಹುಲ್ ತ್ರಿಪಾಠಿ ಮೂರನೇ ಸ್ಥಾನದಲ್ಲಿ ಆಡಿದರೆ, ನಾಯಕ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಮಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ವಿಕೆಟ್ ಕೀಪರ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ನಿರ್ವಹಿಸಲಿದ್ದಾರೆ. ಆಲ್ರೌಂಡರ್ಗಳಾದ ದೀಪಕ್ ಹೂಡ ಹಾಗೂ ಅಕ್ಷರ್ ಪಟೇಲ್ ಆರು ಮತ್ತು ಏಳನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿಯಬಹುದು. ಮುಖ್ಯ ವೇಗಿಗಳಾಗಿ ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಹಾಗೂ ಆವೇಶ್ ಖಾನ್ ಕಾಣಿಸಿಕೊಂಡರೆ, ಸ್ಪಿನ್ನರ್ ಆಗಿರುವ ಕುಲ್ದೀಪ್ ಯಾದವ್ ಅಥವಾ ಶಹ್ಹಾಜ್ ಅಹ್ಮದ್ಗೆ ಸ್ಥಾನ ಸಿಗುವ ಸಂಭವವಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಯೋಗ್ಯವಾಗಿದ್ದು, ಭಾರತದ ಬ್ಯಾಟರ್‌ಗಳಿಗೆ ದೊಡ್ಡ ಮೊತ್ತ ಪೇರಿಸುವುದು ಕಷ್ಟವೆನಿಸದು. ಹೀಗಾಗಿ ಇಂದಿನ ಪಂದ್ಯ ಹೈಸ್ಕೋರ್ ಗೇಮ್ ಆಗುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಸುಮಾರು ಆರು ತಿಂಗಳ ನಂತರ ಕೆಎಲ್ ರಾಹುಲ್ ತಂಡದಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಕನ್ನಡಿಗನ ಮೇಲೆ ಎಲ್ಲರ ಕಣ್ಣಿದ್ದು ಯಾವರೀತಿ ಪ್ರದರ್ಶನ ತೋರುತ್ತಾರೆ ಎಂಬುದು ನೋಡಬೇಕಿದೆ.
ಇತ್ತ ರೆಗಿಸ್ ಚಕಬ್ವಾ ನಾಯಕತ್ವದ ಜಿಂಬಾಬ್ವೆ ತಂಡ ಏಕದಿನ ಮತ್ತು ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಆತ್ಮವಿಶ್ವಾಸದಿಂದ ತುಂಬಿದೆ. ಸಿಕಂದರ್ ರಾಝಾ ಅವರು ಎರಡೂ ಸರಣಿಯಲ್ಲಿ ಅಪ್ರತಿಮ ಬ್ಯಾಟರ್ ಆಗಿ ಮೂಡಿಬಂದಿದ್ದು, ಇನ್ನೋಸೆಂಟ್ ಕೈಯಾ ಮತ್ತು ರಿಯಾನ್ ಬರ್ಲ್ ಅವರಂತಹವರು ಕೂಡ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಲು ಸಫಲರಾದರು. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ನ ಭಾಗವಾಗಿ ಈ ಸರಣಿ ನಡೆಯಲಿದ್ದು, ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಳ್ಳಲು ಜಿಂಬಾಬ್ವೆಗೆ ಈ ಸರಣಿ ಮಹತ್ವ ಪಡೆದುಕೊಂಡಿದೆ.
ಭಾರತ ಮತ್ತು ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ. ಸೋನಿ ಚಾನೆಲ್ (Sony Sports Network) ಲೈವ್ ಟೆಲಿಕಾಸ್ಟ್ ಮಾಡಲಿದೆ. ಹಾಗೆಯೇ ಸೋನಿ ಲೈವ್ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.
ಭಾರತದ ಸಂಭಾವ್ಯ XI- ಶುಭ್ಮನ್ ಗಿಲ್, ಶಿಖರ್ ಧವನ್, ರಾಹುಲ್ ತ್ರಿಪಾಠಿ, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅವೇಶ್ ಖಾನ್.
Published On - 7:37 am, Thu, 18 August 22