ಟೋಕಿಯೋ ಒಲಿಂಪಿಕ್ಸ್ ಮೂಲಕ ನೀರಜ್ ಚೋಪ್ರಾ ಹೊಸ ಸೆನ್ಸೇಷನ್ ಹುಟ್ಟುಹಾಕಿದ್ದಾರೆ. ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದರು. ಅದರಲ್ಲೂ ಮುಖ್ಯವಾಗಿ 125 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ, ಯಾವುದೇ ಭಾರತೀಯ ಆಟಗಾರ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿಲಿಲ್ಲ. ಇದೀಗ ಮೊದಲ ಬಾರಿಗೆ ಅಥ್ಲೆಟಿಕ್ಸ್‌ನಲ್ಲಿ ಭಾರತೀಯ ಆಟಗಾರನೊಬ್ಬ ಸ್ವರ್ಣ ಪದಕದೊಂದಿಗೆ ಒಲಿಂಪಿಕ್ಸ್ ಅಂಗಳದಿಂದ ಹಿಂತಿರುಗುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಬಾರಿ ಭಾರತವು 7 ಪದಕಗಳನ್ನು ಗೆಲ್ಲುವ ಮೂಲಕ ಒಲಿಂಪಿಕ್ ಇತಿಹಾಸದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಮೀರಾಬಾಯಿ ಚಾನು ಅವರ ಬೆಳ್ಳಿಯಿಂದ ಶುರುವಾದ ಭಾರತದ ಟೋಕಿಯೋ ಒಲಿಂಪಿಕ್ಸ್ ಅಭಿಯಾನವು ನೀರಜ್ ಚೋಪ್ರಾ ಚಿನ್ನದೊಂದಿಗೆ ಅಂತ್ಯವಾಗಿದ್ದು ಮತ್ತೊಂದು ವಿಶೇಷ. ನೀರಜ್ ಅವರ ಈ ಶ್ರೇಷ್ಠ ಸಾಧನೆಯನ್ನು ಗೌರವಿಸಿ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿಶೇಷ ಜೆರ್ಸಿಯನ್ನು ನೀಡಲಿದೆ. ಅಷ್ಟೇ ಅಲ್ಲದೆ ಪ್ರೋತ್ಸಾಹ ಧನವಾಗಿ ಒಂದು ಕೋಟಿ ರೂ ಕೂಡ ನೀಡುವುದಾಗಿ ಸಿಎಸ್‌ಕೆ ಫ್ರಾಂಚೈಸಿ ಘೋಷಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಸ್‌ಕೆ ವಕ್ತಾರರು, “ನೀರಜ್ ಚೋಪ್ರಾ ಬಗ್ಗೆ ನಮಗೆಲ್ಲಾ ಹೆಮ್ಮೆ ಇದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರ ಯಶಸ್ಸು ಲಕ್ಷಾಂತರ ಭಾರತೀಯರಿಗೆ ಜಾವೆಲಿನ್ ಕ್ರೀಡೆಯನ್ನು ಆಯ್ಕೆ ಮಾಡಲು ಸ್ಫೂರ್ತಿ ನೀಡಲಿದೆ. ಇದರೊಂದಿಗೆ ಅವರು ಸಹ ತಮ್ಮ ಆಟದ ಅತ್ಯುನ್ನತ ಮಟ್ಟವನ್ನು ಸಾಧಿಸಲು ಪ್ರಯತ್ನಿಸಲಿದ್ದಾರೆ. ನೀರಜ್ ಚೋಪ್ರಾ ಗೌರವಾರ್ಥವಾಗಿ ವಿಶೇಷ ಜರ್ಸಿ ಸಂಖ್ಯೆ 8758 ಅನ್ನು ಸಹ ಫ್ರಾಂಚೈಸಿ ನೀಡಲಿದೆ ಎಂದು ತಿಳಿಸಿದೆ. ಟೋಕಿಯೊದಲ್ಲಿ 87.58 ಮೀಟರ್ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ಇದೇ ಸಂಖ್ಯೆಯ ಜೆರ್ಸಿಯನ್ನು ನೀಡಿ ಗೌರವಿಸಲು ಸಿಎಸ್‌ಕೆ ನಿರ್ಧರಿಸಿದೆ.
ವೈಯಕ್ತಿಕ ಕ್ರೀಡೆಗಳಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ:
ನೀರಜ್ ಚೋಪ್ರಾ ವೈಯಕ್ತಿಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಕ್ರೀಡಾಪಟು. ಇದಕ್ಕೂ ಮೊದಲು ಅಭಿನವ್ ಬಿಂದ್ರಾ 2008 ರಲ್ಲಿ ಶೂಟಿಂಗ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅದರಲ್ಲೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಇದೇ ಮೊದಲ ಬಾರಿ ಭಾರತಕ್ಕೆ ಸ್ವರ್ಣ ಪದಕ ಸಿಗುತ್ತಿರುವುದು ವಿಶೇಷ.
ಭರ್ಜರಿ ಪ್ರೋತ್ಸಾಹ ಧನ:
ನೀರಜ್ ಚೋಪ್ರಾ ಅವರ ಐತಿಹಾಸಿಕ ಪ್ರದರ್ಶನಕ್ಕೆ ಭರ್ಜರಿ ಪ್ರೋತ್ಸಾಹ ವ್ಯಕ್ತವಾಗುತ್ತಿದೆ. ಈಗಾಗಲೇ ಹಲವು ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಒಟ್ಟು 12 ಕೋಟಿ ಮೊತ್ತವನ್ನು ಘೋಷಿಸಲಾಗಿದೆ. ಹರಿಯಾಣ ಸರ್ಕಾರವು ತಮ್ಮ ರಾಜ್ಯದ ಚಿನ್ನದ ಹುಡುಗನಿಗೆ 6 ಕೋಟಿ ರೂ. ನೀಡುವುದಾಗಿ ತಿಳಿಸಿದೆ. ಇದಲ್ಲದೇ, ಪಂಜಾಬ್ ಸರ್ಕಾರದಿಂದ 2 ಕೋಟಿ, ಬಿಸಿಸಿಐ ಮತ್ತು ಸಿಎಸ್‌ಕೆ ನಿಂದ ತಲಾ 1 ಕೋಟಿ ರೂ, ಮಣಿಪುರ ಸರ್ಕಾರದಿಂದ 1 ಕೋಟಿ ಮತ್ತು ಕೇಂದ್ರ ಸರ್ಕಾರ 75 ಲಕ್ಷ ರೂ. ನೀಡಲಿದೆ.
ಇದನ್ನೂ ಓದಿ: Tokyo Olympics 2020: ಭಾರತ ಸೋಲುತ್ತಿದ್ದಂತೆ ರೆಫರಿಗೆ ಬಿತ್ತು ಏಟು..!
ಇದನ್ನೂ ಓದಿ: Neeraj Chopra: ಆಸ್ಪತ್ರೆಯ ಬೆಡ್ನಿಂದ ಚಿನ್ನದ ಬೇಟೆ ತನಕ: ನೀರಜ್ ಚೋಪ್ರಾ ಎಂಬ ಗೋಲ್ಡನ್ ಸ್ಟಾರ್
ಇದನ್ನೂ ಓದಿ: ಬ್ಲೂಟೂತ್ ಹೆಡ್ಫೋನ್ ಸ್ಪೋಟ, ಯುವಕ ಸಾವು..!