ಕ್ರಿಕೆಟ್ ವಿಶೇಷ: 204 ರನ್‌ಗಳ ಅಂತರದಿಂದ ಸೋತ ತಂಡ, ಎದುರಾಳಿ ತಂಡಕ್ಕೆ ವೈಡ್-ನೋಬಾಲ್ಗಳಿಂದ ನೀಡಿದ್ದು ಬರೋಬ್ಬರಿ 67 ರನ್
ಕರ್ನಾಲಿ ತಂಡ ಗಳಿಸಿದ 31 ರನ್ಗಳಲ್ಲಿ ಬ್ಯಾಟ್ನಿಂದ ಬಂದಿದ್ದು ಕೇವಲ 16 ರನ್ ಅಷ್ಟೇ. ಉಳಿದ 15 ರನ್‌ಗಳು ಸಶಸ್ತ್ರ ಪೊಲೀಸ್ ಪಡೆ ಬೌಲರ್‌ಗಳು ಎಸೆದ ನೋಬಾಲ್ ಹಾಗೂ ವೈಡ್ಗಳಿಂದ ಬಂದಿವೆ. ಈ 15 ಹೆಚ್ಚುವರಿ ರನ್ಗಳಿಲ್ಲದಿದ್ದರೆ ಕರ್ನಾಲಿ ತಂಡದ ಸ್ಥಿತಿ ಇನ್ನು ಕೆಟ್ಟದಾಗಿರುತ್ತಿತ್ತು.
ಕೊರೊನಾ ಸಂಕಷ್ಟದ ನಂತರ ಕ್ರಿಕೆಟ್ ಈಗ ಪ್ರಪಂಚದಾದ್ಯಂತ ವೇಗ ಪಡೆಯುತ್ತಿದೆ. ನೆರೆಯ ದೇಶವಾದ ನೇಪಾಳದಲ್ಲೂ ಕ್ರಿಕೆಟ್ ಬಿಸಿ ಏರಿದೆ. ಪ್ರಧಾನಿ ಕಪ್ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನೇಪಾಳದಲ್ಲಿ ನಡೆಯುತ್ತಿದ್ದು, ಡಿ.26 ರಂದು ಸಶಸ್ತ್ರ ಪೊಲೀಸ್ ಪಡೆ ಮತ್ತು ಕರ್ನಾಲಿ ಪ್ರಾಂತ್ಯದ ನಡುವೆ ಹಣಾಹಣಿ ನಡೆಯಿತು. ಈ ಪಂದ್ಯ ಬಹಳ ವಿಚಿತ್ರವಾದ ಸ್ಕೋರ್ ಕಾರ್ಡ್‌ಗೆ ಸಾಕ್ಷಿಯಾಗಿದೆ. ಮೊದಲು ಬ್ಯಾಟ್ ಮಾಡಿದ ಪೊಲೀಸ್ ಫೋರ್ಸ್ ತಂಡ ನಾಲ್ಕು ವಿಕೆಟ್‌ಗೆ 235 ರನ್ ಗಳಿಸಿತು. ಆದರೆ ಎದುರಾಳಿ ಕರ್ನಾಲಿ ತಂಡವು 31 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಇದರ ಪರಿಣಾಮವಾಗಿ ಪೊಲೀಸ್ ಫೋರ್ಸ್ ತಂಡ 204 ರನ್‌ಗಳ ಭಾರಿ ಜಯ ಸಾಧಿಸಿದೆ.
67 ರನ್ ಹೆಚ್ಚುವರಿಯಾಗಿ ಪಡೆದುಕೊಂಡ ಪೋಲಿಸ್ ಫೋರ್ಸ್ ತಂಡ.. ಮೊದಲು ಬ್ಯಾಟ್ ಮಾಡಿದ ಪೋಲಿಸ್ ಫೋರ್ಸ್ ತಂಡ ತನ್ನ ಬ್ಯಾಟ್ನಿಂದ ಗಳಿಸಿದ್ದು 170 ರನ್ ಮಾತ್ರ. ಆದರೆ ಎದುರಾಳಿ ತಂಡ 67 ರನ್ಗಳನ್ನ ಹೆಚ್ಚುವರಿಯಾಗಿ ನೀಡಿ ಸುದ್ದಿಯಾಗಿದೆ. ಕರ್ನಾಲಿ ಬೌಲರ್‌ಗಳು 41 ವೈಡ್ ಮತ್ತು 18 ನೋಬಾಲ್ ಹಾಕಿದ್ದಾರೆ. ಇದರಿಂದಾಗಿಯೇ 170 ರನ್ ಗಳಿಸಿದ ಪೋಲಿಸ್ ಫೋರ್ಸ್ ತಂಡದ ಸ್ಕೋರ್ 235 ಕ್ಕೆ ತಲುಪಿತು.
ಆದಾಗ್ಯೂ, ಸಶಸ್ತ್ರ ಪೊಲೀಸ್ ಪಡೆಯ ಆಟಗಾರರು ಸಹ ಉತ್ತಮ ಬ್ಯಾಟಿಂಗ್ ಮಾಡಿದರು. ಇದರಲ್ಲಿ ನಾಯಕ ಸೀತಾ ರಾಣಾ ಮಗರ್ 68 ರನ್ ಗಳಿಸಿದರು. 59 ಎಸೆತಗಳಲ್ಲಿ ಎಂಟು ಬೌಂಡರಿಗಳ ಸಹಾಯದಿಂದ ಈ ಇನ್ನಿಂಗ್ಸ್ ಆಡಿದರು. ಅವರಲ್ಲದೆ, 34 ಎಸೆತಗಳಲ್ಲಿ ಆರು ಬೌಂಡರಿಗಳ ಸಹಾಯದಿಂದ 44 ರನ್ ಗಳಿಸಿದ ಸರಿತಾ ಅಜೇಯರಾಗಿ ಉಳಿದರು.
ಖಾತೆಯನ್ನೇ ತೆರೆಯದ ಕರ್ನಾಲಿ ತಂಡದ 5 ಆಟಗಾರರು.. ಕರ್ನಾಲಿ ತಂಡದ 5 ಆಟಗಾರರು ಖಾತೆಯನ್ನೇ ತೆರೆಯಲಿಲ್ಲ. 236 ರನ್‌ಗಳ ಭಾರಿ ಸ್ಕೋರ್ ಬೆನ್ನಟ್ಟಿದ ಕರ್ನಾಲಿಯ ತಂಡ ಮೊದಲ ಓವರ್‌ನಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಪರಿಣಾಮವಾಗಿ ಇಡೀ ತಂಡದಿಂದ ಗಳಿಸಿದ್ದು ಕೇವಲ 31 ರನ್‌ಗಳು. ಕರ್ನಾಲಿ ತಂಡದ ಒಬ್ಬನೇ ಒಬ್ಬ ಆಟಗಾರ ಎರಡಂಕಿ ದಾಟಲಿಲ್ಲ. ಆರು ರನ್ ಗಳಿಸಿದ ನಾಯಕಿ ಲಕ್ಷ್ಮಿ ರಿಮಾಲ್ ಅವರದೆ ಅತ್ಯಂತ ದೊಡ್ಡ ಮೊತ್ತವಾಯಿತು.
15 ಹೆಚ್ಚುವರಿ ರನ್ ನೀಡಿದ ಸಶಸ್ತ್ರ ಪೊಲೀಸ್ ಪಡೆ ಬೌಲರ್‌ಗಳು.. ಕರ್ನಾಲಿ ತಂಡ ಗಳಿಸದ 31 ರನ್ಗಳಲ್ಲಿ ಬ್ಯಾಟ್ನಿಂದ ಬಂದಿದ್ದು ಕೇವಲ 16 ರನ್ ಅಷ್ಟೇ. ಉಳಿದ 15 ರನ್‌ಗಳು ಸಶಸ್ತ್ರ ಪೊಲೀಸ್ ಪಡೆ ಬೌಲರ್‌ಗಳು ಎಸೆದ ನೋಬಾಲ್ ಹಾಗೂ ಅಗಲ ಎಸೆತಗಳಿಂದ ಬಂದಿವೆ. ಈ 15 ಹೆಚ್ಚುವರಿ ರನ್ಗಳಿಲ್ಲದಿದ್ದರೆ ಕರ್ನಾಲಿ ತಂಡದ ಸ್ಥಿತಿ ಇನ್ನು ಕೆಟ್ಟದಾಗಿರುತ್ತಿತ್ತು.
Published On - 11:55 am, Sun, 27 December 20