ಮುಸಲ್ಮಾನರು ಭಯೋತ್ಪಾದಕರು ಎಂದಿದ್ದ ಇಂಗ್ಲೆಂಡಿನ ಹೊಸ ಕ್ರಿಕೆಟಿಗ ರಾಬಿನ್ಸನ್ ತಲೆಯ ಮೇಲೆ ಅಮಾನತು ತೂಗುಗತ್ತಿ
Robinson Suspended by England: ಕಳೆದ ವಾರ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡದ ಆಟಗಾರರು ಮೊದಲ ಟೆಸ್ಟ್ ಆರಂಭವಾಗುವುದಕ್ಕೆ ಮೊದಲು ಮೈದಾನದಲ್ಲಿ ಔಪಚಾರಿಕವಾಗಿ ಸಾಲಾಗಿ ಐಕ್ಯತೆಯ ಮಂತ್ರ ಸಾರಲು ನಿಂತಿದ್ದರು. ಆ ವೇಳೆ, ಮೈದಾನದಾಚೆ ಓಲಿ ರಾಬಿನ್ಸನ್ ಅವರ ಜನಾಂಗೀಯ ನಿಂದನೆ ಮತ್ತು ಅಶ್ಲೀಲ ಹಳೆಯ ಪೋಸ್ಟ್ಗಳು ಮತ್ತೆ ಚರ್ಚೆಗೆ ಬಂದವು.
ಎಜ್ಬಾಸ್ಟನ್: ಇಂಗ್ಲೆಂಡ್ ಕ್ರಿಕೆಟ್ ಅಂಗಳದಲ್ಲಿ ಜನಾಂಗೀಯ ನಿಂದನೆ ಮತ್ತು ಸೆಕ್ಸಿ ಸಂದೇಶಗಳ ವಿರುದ್ಧ ಮತ್ತೊಮ್ಮೆ ಬಿರುಗಾಳಿ ಎದ್ದಿದೆ. ಆಲ್ರೌಂಡ್ ಆಟಗಾರ ಓಲಿ ರಾಬಿನ್ಸನ್ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ತನ್ನ ಆಟವನ್ನು ಅರ್ಧಕ್ಕೇ ನಿಲ್ಲಿಸಬೇಕಿದೆ. ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಆಟ ನಿಲ್ಲಿಸುವಂತೆ ತನ್ನ ಆಲ್ರೌಂಡರ್ ಆಟಗಾರ ಓಲಿ ರಾಬಿನ್ಸನ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (England and Wales Cricket Board -ECB) ಆದೇಶಿಸಿದೆ.
27 ವರ್ಷದ ಓಲಿ ರಾಬಿನ್ಸನ್ (Ollie Robinson) 2012 ಮತ್ತು 2013ನೇ ಸಾಲಿನಲ್ಲಿ ಹದಿಹರೆಯದವನಾಗಿ ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಜನಾಂಗೀಯ ನಿಂದನೆ ಮತ್ತು ಸೆಕ್ಸಿ ಸಂದೇಶಗಳ ವಿಚಾರ (racist and sexist Twitter messages) ಮತ್ತೆ ಸುದ್ದಿಯಾಗಿದೆ. ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಹಾಗಾಗಿ, ಶಿಸ್ತು ಕ್ರಮವಾಗಿ ಅವರನ್ನು ಸದ್ಯಕ್ಕೆ ಅಮಾನತು ಮಾಡಲಾಗಿದೆ ಎಂದು ECB ಹೇಳಿದೆ.
ಇದರಿಂದ ಸದ್ಯಕ್ಕೆ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಒಳ್ಳೆಯ ಬೌಲಿಂಗ್ ಪ್ರದರ್ಶನ ನೀಡಿದ್ದರೂ ಓಲಿ ರಾಬಿನ್ಸನ್ ಎರಡನೆಯ ಟೆಸ್ಟ್ನಿಂದಲೇ ದೂರವಾಗಲಿದ್ದಾರೆ. ಓಲಿ ರಾಬಿನ್ಸನ್, ಮೊದಲ ಇನ್ನಿಂಗ್ನಲ್ಲಿ 4-75 ಮತ್ತು ದ್ವಿತೀಯ ಇನ್ನಿಂಗ್ನಲ್ಲಿ ಇನ್ನಿಂಗ್ನಲ್ಲಿ 3-26 ವಿಕೆಟ್ ಪಡೆದಿದ್ದಲ್ಲದೆ 42 ಉಪಯುಕ್ತ ರನ್ ಸಹ ಬಾರಿಸಿದ್ದರು. ಆದರೆ ಈಗ ಜೂನ್ 10 ರಿಂದ ಎಜ್ಬಾಸ್ಟನ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆಯಲಿರುವ ಎರಡನೆಯ ಟೆಸ್ಟ್ ಪಂದ್ಯಕ್ಕೆ ಓಲಿ ರಾಬಿನ್ಸನ್ ಅಲಭ್ಯವಾಗಲಿದ್ದಾರೆ.
ಕಳೆದ ವಾರವಷ್ಟೇ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟಿಗ ಓಲಿ ರಾಬಿನ್ಸನ್ ಮುಸಲ್ಮಾನರು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ತನ್ನ ಹದಿಹರೆಯದಲ್ಲಿ ಬಹಿರಂಗವಾಗಿ ಹೇಳಿದ್ದ. ಮತ್ತು, ಏಷ್ಯಾ ಮೂಲದ ಮಹಿಳೆಯರು ಮತ್ತು ಜನಾಂಗದವರ ಬಗ್ಗೆ ಅಶ್ಲೀಲವಾಗಿ ಕೀಳುಮಟ್ಟದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಕಳೆದ ವಾರ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡದ ಆಟಗಾರರು ಮೊದಲ ಟೆಸ್ಟ್ ಆರಂಭವಾಗುವುದಕ್ಕೆ ಮೊದಲು ಮೈದಾನದಲ್ಲಿ ಔಪಚಾರಿಕವಾಗಿ ಸಾಲಾಗಿ ಐಕ್ಯತೆಯ ಮಂತ್ರ ಸಾರಲು ನಿಂತಿದ್ದರು. ಆ ವೇಳೆ, ಮೈದಾನದಾಚೆ ಓಲಿ ರಾಬಿನ್ಸನ್ ಅವರ ಜನಾಂಗೀಯ ನಿಂದನೆ ಮತ್ತು ಅಶ್ಲೀಲ ಪೋಸ್ಟ್ಗಳು ಮತ್ತೆ ಚರ್ಚೆಗೆ ಬಂದವು. ಗಮನಾರ್ಹವೆಂದ್ರೆ ಇಂಗ್ಲೆಂಡ್ ತಂಡದ ಆಟಗಾರರು Cricket is a game for everyone ಎಂಬ ಸಂದೇಶವಿರುವ ಟೀ ಶರ್ಟ್ಗಳನ್ನು ಧರಿಸಿದ್ದು ಸಹ ಟೀಕೆಗೆ ಗ್ರಾಸವಾಯಿತು.
ವಿವಾದಿತ ಕ್ರಿಕೆಟಿಗ ಓಲಿ ರಾಬಿನ್ಸನ್ ಅಂದು ಸಂಜೆಯೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ನನ್ನ ಈ ಹಿಂದಿನ ಹೇಳಿಕೆಗಳ ಬಗ್ಗೆ ನನಗೆ ಮುಜುಗುರ ಮತ್ತು ನಾಚಿಕೆ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು. ನಾನು ಜನಾಂಗೀಯ ನಿಂದನೆ ಮಾಡುವವನಲ್ಲ ಮತ್ತು ಅಶ್ಲೀಲ ಕೀಳುಮಟ್ಟದ ಸಂದೇಶ ರವಾನಿಸುವ ಸ್ವಭಾವದವನಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರೂ ಸಹ ಓಲಿ ರಾಬಿನ್ಸನ್ರ ಅಂದಿನ ಪೋಸ್ಟ್ಗಳ ಬಗ್ಗೆ ಅಸಮ್ಮತಿ ಸೂಚಿಸುತ್ತಾ, ಆತ ಅಂತಹ ಪೋಸ್ಟ್ಗಳನ್ನು ಮಾಡಿದ್ದ ಎಂಬುದನ್ನು ವೈಯಕ್ತಿಕವಾಗಿಯೂ ನನಗೆ ನಂಬುವುದಕ್ಕೇ ಆಗುತ್ತಿಲ್ಲ ಎಂದಿದ್ದರು. ಆದರೆ ಓಲಿ ರಾಬಿನ್ಸನ್ ಪಶ್ಚಾತ್ತಾಪ ಪಟ್ಟಿದ್ದಾನೆ ಮತ್ತು ಅದು ನೈಜವಾಗಿದೆ ಎಂದೂ ಜೋ ರೂಟ್ ಹೇಳಿದರು.
ಜೀವನದಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ ಓಲಿ ರಾಬಿನ್ಸನ್ನನ್ನು ಆಯ್ಕೆ ಮಾಡುವುದಕ್ಕೂ ಮೊದಲು ECB ಆತನ ಇತಿಹಾಸವನ್ನು ಕೂಲಂಕಶವಾಗಿ ಪರಿಶೀಲಿಸಬೇಕಿತ್ತು. ಇತಿಹಾಸವನ್ನು ಕೆದಕಿ ನೋಡದೇ ಇದ್ದುದ್ದಕ್ಕೆ ಬೇಸರ ವ್ಯಕ್ತಪಡಿಸಿದ ಜೋ ರೂಟ್ ಯಾಕೆ ಹೀಗಾಯಿತು ಎಂದು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಮುಂದೆ ಇಂತಹ ಅಚಾತುರ್ಯಗಳು ಘಟಿಸದಂತೆಯೂ ನಾವು ಎಚ್ಚರಿಕೆ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಆದರೆ, ಸಸ್ಸೆಕ್ಸ್ ಕ್ರಿಕೆಟ್ ಮಂಡಳಿ (Sussex) ಜೊತೆ ಪ್ರತ್ಯೇಕ ಕ್ರಿಕೆಟ್ ಒಪ್ಪಂದ ಹೊಂದಿರುವ ಓಲಿ ರಾಬಿನ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿಷೇಧಕ್ಕೆ ಒಳಗಾದರೂ ತಮ್ಮ ದಕ್ಷಿಣ ಕರಾವಳಿ ದೇಶದ ಪರ ಆಡಬಹುದು.
(England ECB Suspend Ollie Robinson From playing Cricket Pending Disciplinary investigation into his racist Twitter messages)