Explained: ವಿರಾಟ್ ಕೊಹ್ಲಿ ರಾಜೀನಾಮೆ, ಅನಿಲ್ ಕುಂಬ್ಳೆ ಕೋಚ್ ಹುದ್ದೆ: ‘ಬಾಸ್’​ಗಿರಿಗೆ ಬ್ರೇಕ್ ಹಾಕಲು ಬಿಸಿಸಿಐ ಪ್ಲ್ಯಾನ್?

Virat Kohli vs Anil Kumble: ಇದೀಗ ಕೊಹ್ಲಿಯ ಟಿ20 ಕಪ್ತಾನಗಿರಿ ಅಂತ್ಯ ಎನ್ನವಾಗಲೇ ಒಂದೊಂದೇ ಮಾಹಿತಿಗಳು ಹೊರಬೀಳುತ್ತಿದೆ. ತಂಡದಲ್ಲಿ ಕೊಹ್ಲಿಯು ಯಾರ ಮಾತನ್ನು ಕೇಳುವ ಸಂಯಮ ಹೊಂದಿರಲಿಲ್ಲ.

Explained: ವಿರಾಟ್ ಕೊಹ್ಲಿ ರಾಜೀನಾಮೆ, ಅನಿಲ್ ಕುಂಬ್ಳೆ ಕೋಚ್ ಹುದ್ದೆ: 'ಬಾಸ್'​ಗಿರಿಗೆ ಬ್ರೇಕ್ ಹಾಕಲು ಬಿಸಿಸಿಐ ಪ್ಲ್ಯಾನ್?
Virat kohli-Anil Kumble
Zahir PY

|

Sep 19, 2021 | 9:51 PM

24 ಜೂನ್​ 2016 ರಂದು ಟೀಮ್ ಇಂಡಿಯಾ ಕೋಚ್​ ಆಗಿ ಅನಿಲ್ ಕುಂಬ್ಳೆ ಆಯ್ಕೆಯಾಗಿದ್ದರು. ಅದಾಗಲೇ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದ ಕುಂಬ್ಳೆ ಆಗಮನದೊಂದಿಗೆ ಟೀಮ್ ಇಂಡಿಯಾ ಮತ್ತಷ್ಟು ಬಲಿಷ್ಠವಾಯಿತು. ಕುಂಬ್ಳೆ ಗರಡಿಯಲ್ಲಿ ಟೀಮ್​ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದದ​ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯಭೇರಿ ಬಾರಿಸಿತು. ಅಲ್ಲದೆ ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿಯನ್ನ ಭಾರತ 2-0 ಅಂತರದಿಂದ ಗೆಲ್ಲುವ ಮೂಲಕ ಕುಂಬ್ಳೆ ಜಯದೊಂದಿಗೆ ಹೊಸ ಇನಿಂಗ್ಸ್​ ಆರಂಭಿಸಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ದ ಜಯ…ಹೀಗೆ ಕುಂಬ್ಳೆ ಅವಧಿಯಲ್ಲಿ ಟೀಮ್ ಇಂಡಿಯಾ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂ.1 ಸ್ಥಾನಕ್ಕೇರಿತ್ತು. ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ನಾಗಾಲೋಟದ ಮೂಲಕ ಅನಿಲ್ ಕುಂಬ್ಳೆ ಗಮನ ಸೆಳೆದಿದ್ದರು. ಆದರೆ ಯಾವಾಗ 2017ರ ಚಾಂಪಿಯನ್ಸ್​ ಟ್ರೋಫಿ ಫೈನಲ್​​ನಲ್ಲಿ ಭಾರತ ಪಾಕ್ ವಿರುದ್ದ ಸೋತಿತೋ ಅದರ ಬೆನ್ನಲ್ಲೇ ಅನಿಲ್ ಕುಂಬ್ಳೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಆ ವೇಳೆ ಭಾರತ ಕ್ರಿಕೆಟ್​ನ ಲೆಜೆಂಡ್ ಆಟಗಾರ ಏಕಾಏಕಿ ಕೋಚ್ ಸ್ಥಾನವನ್ನು ತೊರೆಯಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವಿನ ವೈಮನಸ್ಸು ಕಾರಣ. ಕೊಹ್ಲಿಗೆ ಕುಂಬ್ಳೆ ಮಾತಿಗೆ ಮನ್ನಣೆ ನೀಡುತ್ತಿರಲಿಲ್ಲ. ಸ್ವಯಂ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಇದಾಗ್ಯೂ ಆ ಬಗ್ಗೆ ಯಾವುದೇ ಸ್ಪಷ್ಟನೆ ದೊರೆತಿರಲಿಲ್ಲ. ಇನ್ನು ಸಂದರ್ಶನವೊಂದರಲ್ಲಿ ಮಾತನಾಡಿದ ಕುಂಬ್ಳೆ, ಟೀಮ್ ಇಂಡಿಯಾ ಕೋಚ್ ಆಗಿದ್ದಕ್ಕೆ ನಾನು ಎಂದಿಗೂ ಪಶ್ಚಾತಾಪ ಪಟ್ಟಿಲ್ಲ. ನಿಜವಾಗಲೂ ನನಗೆ ಸಿಕ್ಕ ಅಲ್ಪಾವಧಿಯಲ್ಲಿ ತುಂಬಾ ಸಂತೋಷದಿಂದಲೇ ಕಾರ್ಯ ನಿರ್ವಹಿಸಿದ್ದೇನೆ. ತಂಡದೊಂದಿಗಿನ ಆ ಒಂದು ಒಂದು ವರ್ಷ ಅದ್ಭುತವಾಗಿತ್ತು. ಆದರೆ ನಾನು ಒಂದೊಳ್ಳೆಯ ಅಂತ್ಯ ಸಿಗಲಿದೆ ಎಂದುಕೊಂಡಿದ್ದೆ. ಆದರೆ ಆಗಿದ್ದೇ ಬೇರೆ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದರು.

ಇದಾಗಿ ವರ್ಷಗಳ ಬಳಿಕ ಬಿಸಿಸಿಐ ಮಾಜಿ ಸಿಓಎ ವಿನೋದ್ ರಾಯ್ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದರು. ಕುಂಬ್ಲೆ ಕೋಚ್ ಹುದ್ದೆ ತ್ಯಜಿಸಲು ಮುಖ್ಯ ಕಾರಣ ವಿರಾಟ್ ಕೊಹ್ಲಿ ಎಂದು ನೇರ ಆರೋಪ ಮಾಡಿದ್ದರು. ಅಂದು ಟೀಮ್ ಇಂಡಿಯಾ ಸಲಹಾ ಸಮಿತಿಯ ಸದಸ್ಯರಾಗಿದ್ದ ವಿವಿಎಸ್ ಲಕ್ಷ್ಮಣ್ ಅವರು ಅನಿಲ್ ಕುಂಬ್ಳೆ ಅವರನ್ನೆ ಮುಂದಿನ ಅವಧಿಗೂ ಕೋಚ್ ಆಗಿ ಮುಂದುವರೆಸಲು ಬಿಸಿಸಿಐಗೆ ಸಲಹೆ ನೀಡಿದ್ದರು. ಆದರೆ ಅಷ್ಟರಲ್ಲಾಗಲೇ ಅನಿಲ್ ಕುಂಬ್ಳೆ ಕೋಚ್​ ಹುದ್ದೆಯನ್ನು ತೊರೆಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಇದಾದ ಬಳಿಕ ಸಿಎಸಿ ಸದಸ್ಯರಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಂಬ್ಳೆ ಮನವೊಲಿಸಲು ಪ್ರಯತ್ನಿಸಿದ್ದರು. ಅಷ್ಟೇ ಅಲ್ಲದೆ ಕೊಹ್ಲಿಗೂ ಒಂದಷ್ಟು ಕಿವಿಮಾತು ಹೇಳಿದ್ದರು. ಆದರೆ ಟೀಮ್ ಇಂಡಿಯಾದ ಲೆಜೆಂಡ್​ ಆಟಗಾರರ ನಿರ್ಧಾರವನ್ನು ಒಪ್ಪಲು ನಾಯಕ ಕೊಹ್ಲಿ ತಯಾರಾಗಿರಲಿಲ್ಲ. ಇದರಿಂದಾಗಿ ಕುಂಬ್ಳೆ ಕೋಚಿಂಗ್ ಯುಗ ಅಂತ್ಯಗೊಂಡಿತ್ತು ಎಂದು ವಿನೋದ್ ರಾಯ್ ಗಂಭೀರ ಆರೋಪ ಮಾಡಿದ್ದರು. ಇತ್ತ ರಾಯ್ ಅವರ ಗಂಭೀರ ಆರೋಪವನ್ನು ಲಕ್ಷ್ಮಣ್, ಸಚಿನ್ ಅಥವಾ ಗಂಗೂಲಿಯಾಗಲಿ ಎಲ್ಲೂ ನಿರಾಕರಿಸಿರಲಿಲ್ಲ ಎಂಬುದು ವಿಶೇಷ.

ಇದೀಗ 4 ವರ್ಷಗಳು ಕಳೆದಿವೆ…ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಚುಟುಕು ಕ್ರಿಕೆಟ್ ಕಪ್ತಾನಗಿರಿಗೆ ರಾಜೀನಾಮೆ ನೀಡಲಿದ್ದಾರೆ. ಇದರ ಬೆನ್ನಲ್ಲೇ ಮತ್ತೊಮ್ಮೆ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ವರದಿಯಾಗಿದೆ. ಅಂದರೆ ಬಿಸಿಸಿಐ ಮತ್ತೊಮ್ಮೆ ಕುಂಬ್ಳೆ ಅವರನ್ನು ಟೀಮ್ ಇಂಡಿಯಾಗೆ ಸಾರಥಿಯನ್ನಾಗಿಸಲು ಮುಂದಾಗಿದೆ ಎನ್ನಬಹುದು. ಅಂದರೆ ಬಿಸಿಸಿಐ ಅನಿಲ್ ಕುಂಬ್ಳೆ ಅವರನ್ನು ಕೋಚ್ ಆಗಿಸಲು ಕಳೆದ ಕೆಲ ತಿಂಗಳಿಂದ ತೆರೆ ಮರೆಯ ಪ್ರಯತ್ನ ನಡೆಸುತ್ತಿದೆ ಎಂಬುದು ಸ್ಪಷ್ಟ. ಏಕೆಂದರೆ ವಿರಾಟ್ ಕೊಹ್ಲಿಯ ನಾಯಕತ್ವದ ಚರ್ಚೆ ಶುರುವಾಗಿದ್ದು 6 ತಿಂಗಳ ಹಿಂದೆ ಎಂಬುದನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇಂಗ್ಲೆಂಡ್​ ಸರಣಿಯ ಕೆಳ ಬೆಳವಣಿಗೆಗಳನ್ನೂ ಕೂಡ ಗಮನಿಸಬಹುದು.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶ ಜಯ್ ಶಾ ಸೇರಿದಂತೆ ಕೆಲ ಪ್ರಮುಖರು ಲಾರ್ಡ್ಸ್​ ಟೆಸ್ಟ್​ ವೇಳೆ ಇಂಗ್ಲೆಂಡ್​ನಲ್ಲಿದ್ದರು. ಈ ವೇಳೆ ಬಿಸಿಸಿಐ ಟಿ20 ವಿಶ್ವಕಪ್​ ತಯಾರಿ ಬಗ್ಗೆ ಟೀಮ್ ಇಂಡಿಯಾ ಜೊತೆ ಸಭೆ ನಡೆಸಲು ತೆರಳಿದ್ದಾಗಿ ತಿಳಿಸಿತ್ತು. ಆದರೆ ಸಾಮಾನ್ಯವಾಗಿ ವಿದೇಶಿ ಸರಣಿಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಟೀಮ್ ಇಂಡಿಯಾ ಜೊತೆ ಸಭೆ ನಡೆಸುವ ಬಿಸಿಸಿಐ ಅಂದು ಇಂಗ್ಲೆಂಡ್​ನಲ್ಲಿ ಸೇರಿದ್ದು, ಮುಂಬರುವ ಟಿ20 ವಿಶ್ವಕಪ್​ ನಾಯಕತ್ವದ ಚರ್ಚೆಗೆ ಎಂಬುದು ಇದೀಗ ಗುಟ್ಟಾಗಿ ಉಳಿದಿಲ್ಲ. ಅಂದರೆ ಈ ಬಾರಿಯ ಟಿ20 ವಿಶ್ವಕಪ್​ಗೂ ಮುನ್ನ ಭಾರತದ ನಾಯಕತ್ವ ಬದಲಾವಣೆಗೆ ಬಿಸಿಸಿಐ ಮುಂದಾಗಿತ್ತು. ಹೀಗಾಗಿಯೇ ನಾಯಕತ್ವದ ಚರ್ಚೆ 6 ತಿಂಗಳ ಹಿಂದೆಯೇ ಶುರುವಾಗಿತ್ತು ಎಂಬುದನ್ನು ಜಯ್​ ಶಾ ಹೇಳಿದ್ದರು. ಅಷ್ಟೇ ಇಂಗ್ಲೆಂಡ್ ಸರಣಿ ಬೆನ್ನಲ್ಲೇ ಟೈಮ್ಸ್​ ಆಫ್ ಇಂಡಿಯಾ ಭಾರತ ತಂಡದ ನಾಯಕತ್ವ ಬದಲಾವಣೆ ಆಗಲಿದೆ ಎಂದು ವರದಿ ಮಾಡಿತ್ತು. ಆ ವರದಿ ಈಗ ಸಂಪೂರ್ಣ ನಿಜವಾಗಿದೆ.

ಅತ್ತ ಮುಂದಿನ ಕೋಚ್ ಎನ್ನಲಾಗಿದ್ದ ರಾಹುಲ್ ದ್ರಾವಿಡ್​ ಎನ್​ಸಿಎ ಮುಖ್ಯಸ್ಥರಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅದರ ಬೆನ್ನಲ್ಲೇ ಅನಿಲ್ ಕುಂಬ್ಳೆ ಅವರನ್ನು ಕೋಚ್ ಆಗಿಸಲು ಬಿಸಿಸಿಐ ತೆರೆಮರೆಯ ಪ್ರಯತ್ನ ಶುರು ಮಾಡಿಕೊಂಡಿದೆ ಎಂದು ವರದಿಯಾಗಿದೆ. ಹೀಗಾಗಿಯೇ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಸೋಲನ್ನೇ ಗಂಭೀರವಾಗಿಸಿ ಬಿಸಿಸಿಐ ಕೂಡ ಕೊಹ್ಲಿ ಕಪ್ತಾನಗಿರಿಗೆ ಬ್ರೇಕ್ ಹಾಕಲು ನಿರ್ಧರಿಸಿದಂತಿದೆ. ಅದರ ಮೊದಲ ಹೆಜ್ಜೆಯೇ ಇಂಗ್ಲೆಂಡ್​ ಸರಣಿ ವೇಳೆಯ ಮಹತ್ವದ ಸಭೆ. ಆ ಬಳಿಕ ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಪ್ರಕಟಗೊಂಡಿತು. ಇಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ಇದ್ದರೂ, ತಂಡದ ಮೆಂಟರ್ ಆಗಿ ಮಹೇಂದ್ರ ಸಿಂಗ್ ಧೋನಿಯ ದಿಢೀರ್ ಎಂಟ್ರಿಯಾಗಿತ್ತು. ಅಂದರೆ ಕೊಹ್ಲಿಗೆ ವಿಶ್ವಕಪ್​ ಗೆಲುವಿನೊಂದಿಗೆ ವಿದಾಯ ಹೇಳಲು ಅನುಕೂಲವಾಗುವಂತೆ ಧೋನಿಯನ್ನು ನೇಮಿಸಿದ್ದಾರೆ ಎನ್ನಬಹುದು. ಇವೆಲ್ಲವೂ ಮುಗಿದ ಬಳಿಕ ವಿರಾಟ್ ಕೊಹ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಇದೀಗ ಕೊಹ್ಲಿಯ ಟಿ20 ಕಪ್ತಾನಗಿರಿ ಅಂತ್ಯ ಎನ್ನವಾಗಲೇ ಒಂದೊಂದೇ ಮಾಹಿತಿಗಳು ಹೊರಬೀಳುತ್ತಿದೆ. ತಂಡದಲ್ಲಿ ಕೊಹ್ಲಿಯು ಯಾರ ಮಾತನ್ನು ಕೇಳುವ ಸಂಯಮ ಹೊಂದಿರಲಿಲ್ಲ. ಕೊಹ್ಲಿ ಟೀಮ್ ಇಂಡಿಯಾದಲ್ಲಿ ಬಾಸ್​ ವರ್ತನೆ ತೋರುತ್ತಿದ್ದರು. ಈ ಬಗ್ಗೆ ಬಿಸಿಸಿಐಗೆ ಇತರೆ ಆಟಗಾರರಿಂದ ದೂರುಗಳು ಹೋಗಿದ್ದವು ಎಂಬಿತ್ಯಾದಿ ಸುದ್ದಿಗಳು ಹೊರಬೀಳುತ್ತಿವೆ. ಹೀಗಾಗಿ ಬಿಸಿಸಿಐ ಕೂಡ ಶಿಸ್ತು ಬದ್ಧ ಕೋಚ್​ ನೇಮಕಕ್ಕೆ ಮುಂದಾಗಿದೆ. ಅದರಂತೆ ಮೊದಲ ಆಯ್ಕೆ ಇದ್ದದ್ದು ರಾಹುಲ್ ದ್ರಾವಿಡ್. ಇದೀಗ ದ್ರಾವಿಡ್ ಎನ್​ಸಿಎ ಮುಖ್ಯಸ್ಥರಾಗಿ ಮುಂದುವರೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇನ್ನುಳಿದಿರುವ ಆಯ್ಕೆ ಅನಿಲ್ ಕುಂಬ್ಳೆ.

ಅತ್ತ ಸೌರವ್ ಗಂಗೂಲಿಗೂ ಕುಂಬ್ಳೆ ಆಪ್ತರು. ಹಾಗಾಗಿ ಕುಂಬ್ಳೆ ನೇಮಕಕ್ಕೆ ಬಿಸಿಸಿಐ ಕೂಡ ಹೆಚ್ಚಿನ ಒಲವು ಹೊಂದಿದೆ. ಏಕೆಂದರೆ 2016 ರಲ್ಲಿ ಕೋಚ್ ಸ್ಥಾನಕ್ಕಾಗಿ 57 ಅರ್ಜಿಗಳು ಬಂದಿದ್ದವು. ಅದರಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ನೇತೃತ್ವದ ಕ್ರಿಕೆಟ್ ಅಡ್ವೈಸರಿ ಕಮಿಟಿ ಆಯ್ಕೆ ಮಾಡಿದ್ದು ಕುಂಬ್ಳೆ ಅವರನ್ನು ಎಂಬುದು ಇಲ್ಲಿ ಗಮನಿಸಬೇಕು. ಇದೀಗ ಟಿ20 ವಿಶ್ವಕಪ್​ ಬಳಿಕ ಮತ್ತೆ ಕೋಚ್ ಹುದ್ದೆ ತೆರವಾಗಲಿದೆ. ಆ ಸ್ಥಾನಕ್ಕೆ ಮತ್ತೆ ಕುಂಬ್ಳೆ ಅವರನ್ನು ಕರೆತರಬೇಕಿದೆ. ಅದಕ್ಕೂ ಮುನ್ನ ಇತ್ತ ವಿರಾಟ್ ಕೊಹ್ಲಿಯನ್ನು ಕಂಟ್ರೋಲ್ ಮಾಡಲು ಟಿ20 ವಿಶ್ವಕಪ್​ ಬಳಿಕ ತಂಡದ ನಾಯಕತ್ವಕ್ಕೆ ರಾಜೀನಾಮೆ ಕೊಡಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಟಿ20 ವಿಶ್ವಕಪ್​ ಬಳಿಕ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್​ನ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಆ ಬಳಿಕ ಟೀಮ್ ಇಂಡಿಯಾ ಕೋಚ್ ಯಾರಾಗಲಿದ್ದಾರೆ ಎಂಬುದರ ಮೇಲೆ ಬಿಸಿಸಿಐಯ ತೆರೆ ಹಿಂದಿನ ಸತ್ಯ ಬಹಿರಂಗವಾಗಲಿದೆ.

ಇದನ್ನೂ ಓದಿ: IPL 2021: 5 ತಂಡಗಳಲ್ಲಿ 10 ಹೊಸ ವಿದೇಶಿ ಆಟಗಾರರು

ಇದನ್ನೂ ಓದಿ: IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್

ಇದನ್ನೂ ಓದಿ: ಗೂಗಲ್ ಬಿಗ್ ಆಫರ್: ಸ್ಮಾರ್ಟ್​ಫೋನ್ ಜೊತೆ ಕೇವಲ 1 ರೂ.ಗೆ ಸ್ಮಾರ್ಟ್​ ಸ್ಪೀಕರ್

(Four years after bitter with Virat Kohli Anil Kumble back on BCCI radar)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada