ಸ್ಪೇನ್‌ನ ದಂತಕಥೆ ಮತ್ತು ಅತ್ಯಂತ ಯಶಸ್ವಿ ಪುರುಷ ಟೆನಿಸ್ ಸ್ಟಾರ್ ರಾಫೆಲ್ ನಡಾಲ್ (Rafael Nadal) ಫ್ರೆಂಚ್ ಓಪನ್ 2022 (French Open 202)ರ ಫೈನಲ್ ತಲುಪಿದ್ದಾರೆ. ರಾಫೆಲ್ ನಡಾಲ್ ತಮ್ಮ ಹುಟ್ಟುಹಬ್ಬದ ದಿನದಂದು ದಾಖಲೆಯ 14 ನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದರು. ಆದಾಗ್ಯೂ, ಅವರು ಫೈನಲ್ ತಲುಪಿದ ರೀತಿ, ನಡಾಲ್‌ಗೆ ತೃಪ್ತಿಕೊಡಲಿಲ್ಲ. ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಡಾಲ್ ಅವರು ಜರ್ಮನಿಯ ಯುವ ತಾರೆ ಅಲೆಕ್ಸಾಂಡರ್ ಜೆರೆವ್ (Alexander Zverev) ಅವರನ್ನು ಎದುರಿಸುತ್ತಿದ್ದರು, ಆದರೆ ಜೆರೆವ್ ಅವರು ಎರಡನೇ ಸೆಟ್‌ನ ಕೊನೆಯ ಲೆಗ್‌ನಲ್ಲಿ ತಮ್ಮ ಕಾಲಿಗೆ ಗಾಯ ಮಾಡಿಕೊಂಡರು. ಇದರಿಂದಾಗಿ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನಡಾಲ್ 7-5, 5-5ರಲ್ಲಿ ಮುನ್ನಡೆಯಲ್ಲಿದ್ದರು. ಹೀಗಾಗಿ ನಡಾಲ್ ವಿಜಯಿ ಎಂದು ಘೋಷಿಸಲಾಯಿತು.
13 ಬಾರಿಯ ಚಾಂಪಿಯನ್ ನಡಾಲ್ ಮತ್ತು ಜೆರೆವ್ ಶುಕ್ರವಾರ ಜೂನ್ 3 ರಂದು ಪುರುಷರ ಸಿಂಗಲ್ಸ್ ಪ್ರಶಸ್ತಿ ಪಂದ್ಯಕ್ಕಾಗಿ ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾದರು. ಈ ಪಂದ್ಯ ಆರಂಭದಿಂದಲೂ ಅತ್ಯಂತ ಕಠಿಣವಾಗಿತ್ತು, ಮೊದಲ ಸೆಟ್ ಗೆಲ್ಲಲು ನಡಾಲ್ ಸಾಕಷ್ಟು ಬೆವರು ಹರಿಸಬೇಕಾಯಿತು. ಎರಡನೇ ಸೆಟ್‌ನಲ್ಲೂ ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ಮೊದಲೆರಡು ಗೇಮ್‌ಗಳಲ್ಲಿ ಇಬ್ಬರೂ ಸರ್ವೀಸ್ ಮುರಿದರು. ಇದಾದ ಬೆನ್ನಲ್ಲೇ ಜೆರೆವ್ 5-3 ಮುನ್ನಡೆ ಪಡೆದರು. ಆದಾಗ್ಯೂ, ನಡಾಲ್ ಪುನರಾಗಮನವನ್ನು ಮಾಡಿ, ಸ್ಕೋರ್ ಅನ್ನು 5-5 ಕ್ಕೆ ತಗ್ಗಿಸಿದರು. ನಂತರ ಇಬ್ಬರೂ ಸ್ಕೋರ್ 6-6 ರಲ್ಲಿ ಸಮಗೊಳಿಸಿದರು, ಆದರೆ ಇಲ್ಲಿಗೆ ಪಂದ್ಯ ನಿಂತಿತು. ಅದಕ್ಕೆ ಕಾರಣ ಜೆರೆವ್ ಅವರ ಇಂಜುರಿ.
?#RolandGarros pic.twitter.com/92f8AhegIQ
— Roland-Garros (@rolandgarros) June 3, 2022
ಎರಡನೇ ಸೆಟ್‌ನ 12ನೇ ಗೇಮ್‌ನಲ್ಲಿ ಜೆರೆವ್, ನಡಾಲ್ ಹೊಡೆತವನ್ನು ಹಿಂದಿರುಗಿಸಲು ಯತ್ನಿಸಿದರು. ಆದರೆ ಆಗಲಿಲ್ಲ, ಚೆಂಡು ಅಂಕಣದಲ್ಲಿ ಬಿದ್ದು ನಡಾಲ್ ಪಾಯಿಂಟ್ ಗಳಿಸಿದರೆ, ಜೆರೆವ್ ನೆಲಕ್ಕೆ ಕುಸಿದು ಬಿದ್ದರು. ಚೆಂಡನ್ನು ಹೊಡೆಯಲು ಪ್ರಯತ್ನಿಸುತ್ತಿರುವಾಗ, ಜೆರೆವ್ ಅವರ ಕಾಲು ಉಳುಕಿದರ ಕಾರಣ ಜೆರೆವ್ ಅಂಗಣದಲ್ಲಿ ಕುಸಿದ್ದುಬಿದ್ದು ನೋವಿನಿಂದ ಜೋರಾಗಿ ಅಳಲು ಪ್ರಾರಂಭಿಸಿದರು. ಅವರ ಕಣ್ಣುಗಳಿಂದ ನೀರು ಬರಲಾರಂಭಿಸಿತು, ನಂತರ ಆಟವನ್ನು ನಿಲ್ಲಿಸಲಾಯಿತು. ನಡಾಲ್ ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಹೋದರು, ನಂತರ ಅವರನ್ನು ವೈದ್ಯಕೀಯ ತಂಡದ ಸಹಾಯದಿಂದ ಗಾಲಿಕುರ್ಚಿಯಲ್ಲಿ ಹೊರಗೆ ಕರೆದೊಯ್ಯಲಾಯಿತು.
ಕೆಲವು ನಿಮಿಷಗಳ ನಂತರ, ಜೆರೆವ್ ವೈದ್ಯಕೀಯ ಕೊಠಡಿಯಿಂದ ಹೊರಬಂದರು. ಆದರೆ ಅವರು ನಡೆಯಲು ಊರುಗೋಲನ್ನು ಆಶ್ರಯಿಸಬೇಕಾಯಿತು. ಹೀಗಾಗಿ ಪಂದ್ಯ ಇಲ್ಲಿಗೆ ಕೊನೆಗೊಂಡಿತು ಎಂಬುದು ಸ್ಪಷ್ಟವಾಯಿತು. ಜೆರೆವ್ ಅಂಗಳಕ್ಕೆ ಬಂದು ಕಣ್ಣೀರು ತುಂಬಿದ ಕಣ್ಣುಗಳಿಂದ ಅಭಿಮಾನಿಗಳತ್ತ ನೋಡಿದರು, ಆದರೆ ಕ್ರೀಡಾಂಗಣದಲ್ಲಿದ್ದ ಎಲ್ಲಾ ಅಭಿಮಾನಿಗಳು ತಮ್ಮ ತಮ್ಮ ಸ್ಥಳಗಳಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಕ್ರೀಡಾ ಪ್ರೋತ್ಸಾಹ ಮೆರೆದರು.
ನಡಾಲ್‌ಗೆ 14ನೇ ಪ್ರಶಸ್ತಿ
ಇದರೊಂದಿಗೆ, ನಡಾಲ್ ಫೈನಲ್ ತಲುಪಿದ್ದು, ಅಲ್ಲಿ ಅವರು ತಮ್ಮ 14 ನೇ ಫ್ರೆಂಚ್ ಓಪನ್ ಮತ್ತು ದಾಖಲೆಯ 22 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲ್ಲು ಹೋರಾಡಲಿದ್ದಾರೆ. ಕಳೆದ ವರ್ಷ, ಅವರು ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಎದುರು ಸೋಲನ್ನು ಎದುರಿಸಬೇಕಾಯಿತು. ಆದರೆ ಈ ಬಾರಿ ಸ್ಪ್ಯಾನಿಷ್ ದೈತ್ಯ ಜೊಕೊವಿಕ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸುವ ಮೂಲಕ ತಮ್ಮ ಸೋಲಿಗೆ ಸೇಡು ತೀರಿಸಿಕೊಂಡಿದ್ದರು. ಫೈನಲ್‌ನಲ್ಲಿ ನಡಾಲ್ ಅವರನ್ನು ಯಾರು ಎದುರಿಸುತ್ತಾರೆ ಎಂಬುದನ್ನು ಎರಡನೇ ಸೆಮಿಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ ಮತ್ತು ಮರಿನ್ ಚಿಲಿಚ್ ಹೋರಾಟದಲ್ಲಿ ನಿರ್ಧರಿಸಲಾಗುತ್ತದೆ.
Published On - 10:08 pm, Fri, 3 June 22