ರೂಂ ಬಿಲ್ ಪಾವತಿಸಲು ಹಣವಿರಲಿಲ್ಲ; ಅರ್ಹತಾ ಸುತ್ತನ್ನಾಡಿ ಫೈನಲ್​ಗೇರಿದ ಚ್ವಾಲಿನ್ಸ್ಕ ಯಶೋಗಾಥೆ

French Open 2026: 2026ರ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್‌ಗೆ ಮಜಾ ಚ್ವಾಲಿನ್ಸ್ಕ ಕಾಲಿಟ್ಟಿದ್ದಾರೆ. ಅರ್ಹತಾ ಪಂದ್ಯಗಳಿಂದ ಬಂದು, ಖಿನ್ನತೆ, ಗಾಯ ಮತ್ತು ಆರ್ಥಿಕ ತೊಂದರೆಗಳನ್ನು ಮೀರಿ ಅಂತಿಮ ಹಂತ ತಲುಪಿದ ಅವರ ಕಥೆ ರೋಮಾಂಚನಕಾರಿ. ಪ್ರಾಯೋಜಕರ ಕೊರತೆ, ಹೋಟೆಲ್ ಬಿಲ್‌ಗೆ ಕಷ್ಟಪಟ್ಟ ಚ್ವಾಲಿನ್ಸ್ಕ ಇದೀಗ ಮೀರಾ ಆಂಡ್ರೀವಾ ವಿರುದ್ಧ ಸೆಣಸಲು ಸಿದ್ಧರಾಗಿದ್ದು, 114ನೇ ಶ್ರೇಯಾಂಕದಿಂದ ಟಾಪ್ 14ಕ್ಕೆ ಜಿಗಿಯುವ ಕನಸು ಕಂಡಿದ್ದಾರೆ.

ರೂಂ ಬಿಲ್ ಪಾವತಿಸಲು ಹಣವಿರಲಿಲ್ಲ; ಅರ್ಹತಾ ಸುತ್ತನ್ನಾಡಿ ಫೈನಲ್​ಗೇರಿದ ಚ್ವಾಲಿನ್ಸ್ಕ ಯಶೋಗಾಥೆ
Maja Chwalinska

Updated on: Jun 06, 2026 | 7:14 PM

2026 ರ ಫ್ರೆಂಚ್ ಓಪನ್ (French Open 2026) ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆಯಲಿರುವ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ 24 ವರ್ಷದ ಪೋಲಿಷ್ ಟೆನಿಸ್ ಆಟಗಾರ್ತಿ ಮಜಾ ಚ್ವಾಲಿನ್ಸ್ಕ (Maja Chwalinska), ರಷ್ಯಾದ ಮೀರಾ ಆಂಡ್ರೀವಾ ಅವರನ್ನು ಎದುರಿಸಲಿದ್ದಾರೆ. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ರಷ್ಯಾದ ಡಯಾನಾ ಶ್ನೈಡರ್ ಅವರನ್ನು 7-6(4), 6-4 ಸೆಟ್‌ಗಳಿಂದ ಸೋಲಿಸುವ ಮೂಲಕ ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್​ಗೇರಿರುವ ಚ್ವಾಲಿನ್ಸ್ಕ, ತಮ್ಮ ಅದ್ಭುತ ಪ್ರದರ್ಶನದ ಮೂಲಕ ಟೆನಿಸ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅರ್ಹತಾ ಪಂದ್ಯಗಳನ್ನಾಡುವ ಮೂಲಕ ಫ್ರೆಂಚ್ ಓಪನ್‌ಗೆ ಅರ್ಹತೆ ಪಡೆದಿದ್ದ ಚ್ವಾಲಿನ್ಸ್ಕ ಈ ಹಂತಕ್ಕೆ ಬರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಕೆ ತನ್ನ ವೃತ್ತಿಜೀವನದಲ್ಲಿ ನಡೆದು ಬಂದ ಹಾದಿ ಸಾಧನೆಯ ಹಾದಿಯಲ್ಲಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ.

ಯಾರು ಪ್ರಾಯೋಜಕರಿರಲಿಲ್ಲ

ಫ್ರೆಂಚ್ ಓಪನ್ ಆಡುವ ಸಲುವಾಗಿ ಕಳೆದ ವಾರವಷ್ಟೆ ಪ್ಯಾರಿಸ್​ಗೆ ಬಂದಿಳಿದಿದ್ದ 114ನೇ ಶ್ರೇಯಾಂಕಿತ ಚ್ವಾಲಿನ್ಸ್ಕ ಅವರಿಗೆ ಯಾರು ಪ್ರಾಯೋಜಕರಿರಲಿಲ್ಲ. ಒಂದೊಳ್ಳೆ ಆದಾಯದ ಮೂಲವೂ ಇರಲಿಲ್ಲ. ಇದೆಲ್ಲದರಕ್ಕಿಂತ ಮಿಗಿಲಾಗಿ ಆಕೆಯ ಬಳಿ ತಾನು ತಂಗುವ ಹೋಟೆಲ್​ ರೂಮ್​ನ ಬಿಲ್ ಪಾವತಿಸಲು ಸಹ ಹಣವಿರಲಿಲ್ಲ. ಈ ಎಲ್ಲಾ ತೊಂದರೆಗಳ ನಡುವೆ ಚ್ವಾಲಿನ್ಸ್ಕ ಫ್ರೆಂಚ್ ಓಪನ್ ಕಣಕ್ಕಿಳಿಯಬೇಕಾದರೆ, ಅರ್ಹತಾ ಪಂದ್ಯಗಳನ್ನು ಗೆಲ್ಲಲೇಬೇಕಿತ್ತು. ಈ ಅರ್ಹತಾ ಪಂದ್ಯಗಳನ್ನು ಗೆದ್ದರೂ ಆಕೆಗೆ ಪಂದ್ಯಾವಳಿ ಮುಗಿದ ಬಳಿಕವಷ್ಟೇ ಬಹುಮಾನದ ಹಣ ಸಿಗುತ್ತಿತ್ತು. ಹೀಗಾಗಿ ಹೋಟೆಲ್​ ರೂಮ್ ಬಿಲ್ ಪಾವತಿಸಲು ಕಷ್ಟಪಡುತ್ತಿದ್ದ ಚ್ವಾಲಿನ್ಸ್ಕ ನೆರವಿಗೆ ಬಂದಿದ್ದ ಪೋಲಿಷ್ ಕ್ರೀಡಾ ಪಾನೀಯ ಬ್ರ್ಯಾಂಡ್ ಹೋಟೆಲ್ ಬಿಲ್ ಪಾವತಿಸಿತ್ತು.

ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಚ್ವಾಲಿನ್ಸ್ಕ

ಈ ಪಂದ್ಯಾವಳಿಗೂ ಮೊದಲು ತಮ್ಮ ಇಡೀ ವೃತ್ತಿಜೀವನದಲ್ಲಿ ಚ್ವಾಲಿನ್ಸ್ಕ, ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಮುಖ್ಯ ಡ್ರಾ ಪಂದ್ಯವನ್ನು ಗೆದ್ದಿದ್ದರು. 2021 ರಲ್ಲಿ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಚ್ವಾಲಿನ್ಸ್ಕ, 2022 ರಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆ ಬಳಿಕ ತನ್ನ ವೃತ್ತಿಜೀವನವನ್ನು ಕಟ್ಟಿಕೊಳ್ಳುವ ಸಲುವಾಗಿ ಯುರೋಪಿನಾದ್ಯಂತ ಸಣ್ಣ ಪಂದ್ಯಾವಳಿಗಳನ್ನು ಆಡುತ್ತಿದ್ದ ಚ್ವಾಲಿನ್ಸ್ಕ ಇದೀಗ ಪ್ಯಾರಿಸ್ ನೆಲದಲ್ಲಿ ಇತಿಹಾಸ ಸೃಷ್ಟಿಸುವ ಸನಿಹದಲ್ಲಿದ್ದಾರೆ.

ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ

ಈ ಪಂದ್ಯಾವಳಿಯಲ್ಲಿ ಚ್ವಾಲಿನ್ಸ್ಕ ಇದುವರೆಗೆ ಒಟ್ಟು ಒಂಬತ್ತು ಪಂದ್ಯಗಳನ್ನು ಗೆದ್ದಿದ್ದಾರೆ. ಇದರಲ್ಲಿ ಅರ್ಹತಾ ಸುತ್ತಿನಲ್ಲಿ ಮೂರು ಪಂದ್ಯಗಳು ಮತ್ತು ಮುಖ್ಯ ಡ್ರಾದಲ್ಲಿ ಆರು ಪಂದ್ಯಗಳು ಸೇರಿವೆ. ಈ ಮೂಲಕ ಚ್ವಾಲಿನ್ಸ್ಕ ಅರ್ಹತಾ ಪಂದ್ಯಗಳನ್ನಾಡುವ ಮೂಲಕ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ತಲುಪಿದ ಎರಡನೇ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಇವರಿಗಿಂತ ಮೊದಲು, ಬ್ರಿಟನ್‌ನ ಎಮ್ಮಾ ರಾಡುಕಾನು 2021 ರ ಯುಎಸ್ ಓಪನ್‌ನಲ್ಲಿ ಈ ಸಾಧನೆ ಮಾಡುವುದರ ಜೊತೆಗೆ ಪ್ರಶಸ್ತಿಯನ್ನು ಗೆದ್ದಿದ್ದರು.

14 ನೇ ಸ್ಥಾನಕ್ಕೇರುವ ಅವಕಾಶ

ಇದೀಗ ಫೈನಲ್ ಪಂದ್ಯದಲ್ಲಿ ಚ್ವಾಲಿನ್ಸ್ಕ ಎಂಟನೇ ಶ್ರೇಯಾಂಕದ ಮೀರಾ ಆಂಡ್ರೀವಾ ಅವರನ್ನು ಎದುರಿಸಲಿದ್ದಾರೆ. ಇದು ಇಬ್ಬರು ಆಟಗಾರ್ತಿಯರ ನಡುವಿನ ಮೊದಲ ಮುಖಾಮುಖಿಯಾಗಲಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಚ್ವಾಲಿನ್ಸ್ಕ, 2026 ರ ಫ್ರೆಂಚ್ ಓಪನ್ ಪ್ರಾರಂಭವಾಗುವ ಮೊದಲು ಮಹಿಳಾ ಸಿಂಗಲ್ಸ್ ವಿಶ್ವ ಶ್ರೇಯಾಂಕದಲ್ಲಿ 114 ನೇ ಸ್ಥಾನದಲ್ಲಿದ್ದರು. ಇದೀಗ ಅವರು ಫ್ರೆಂಚ್ ಓಪನ್ ಗೆದ್ದರೆ, ತಮ್ಮ ಶ್ರೇಯಾಂಕದಲ್ಲಿ 100 ಸ್ಥಾನಗಳನ್ನು ಜಿಗಿದು 14 ನೇ ಸ್ಥಾನಕ್ಕೇರಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Sat, 6 June 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us