32 ತಂಡಗಳ ಟಿ20 ವಿಶ್ವಕಪ್ಗೆ ಐಸಿಸಿ ಮಾಸ್ಟರ್ ಪ್ಲ್ಯಾನ್!
T20 World Cup 2028: ಟಿ20 ಕ್ರಿಕೆಟ್ ಅನ್ನು 24 ಮತ್ತು 32 ತಂಡಗಳ ಬೃಹತ್ ಟೂರ್ನಿಯನ್ನಾಗಿ ಮಾಡಲು ಐಸಿಸಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಇದಾಗ್ಯೂ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಜಂಟಿಯಾಗಿ ಆಯೋಜಿಸಲಿರುವ 2028ರ ಪುರುಷರ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳೇ ಕಣಕ್ಕಿಳಿಯಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ICC) ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು 24 ತಂಡಗಳಿಗೆ ವಿಸ್ತರಿಸಲು ಗಂಭೀರ ಚಿಂತನೆ ನಡೆಸುತ್ತಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಇದನ್ನು ಬರೋಬ್ಬರಿ 32 ತಂಡಗಳ ಬೃಹತ್ ಟೂರ್ನಿಯನ್ನಾಗಿ ಮಾಡುವ ದೀರ್ಘಾವಧಿ ಯೋಜನೆಯನ್ನು ಹೊಂದಿದೆ. ಇಂಗ್ಲೆಂಡ್‌ನ ‘ದಿ ಟೆಲಿಗ್ರಾಫ್’ ಪತ್ರಿಕೆಯ ವರದಿಯ ಪ್ರಕಾರ, ಈ ಐತಿಹಾಸಿಕ ಬದಲಾವಣೆಯು 2032ರ ಆವೃತ್ತಿಯಿಂದ ಜಾರಿಗೆ ಬರುವ ಸಾಧ್ಯತೆಯಿದೆ.
ಕ್ರಿಕೆಟ್ ಆಟವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯಗೊಳಿಸಲು ಐಸಿಸಿ ಈಗ ಫಿಫಾ ವಿಶ್ವಕಪ್ ಮಾದರಿಯ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಟಿ20 ವಿಶ್ವಕಪ್‌ನಲ್ಲಿ ಅಸೋಸಿಯೇಟ್ ದೇಶಗಳು ನೀಡಿದ ಅದ್ಭುತ ಪ್ರದರ್ಶನವೇ ಈ ಹೊಸ ಯೋಜನೆಗೆ ಮುಖ್ಯ ಪ್ರೇರಣೆಯಾಗಿದೆ.
32 ತಂಡಗಳ ಟೂರ್ನಿ:
ಸದ್ಯದ ಮಾಹಿತಿ ಪ್ರಕಾರ, 24 ತಂಡಗಳ ವಿಶ್ವಕಪ್ ಪಂದ್ಯಾವಳಿಯು 2032 ರಲ್ಲಿ ಆರಂಭವಾಗಲಿದೆ. ಆದರೆ, ಆಡಳಿತ ಮಂಡಳಿಯು ಇದನ್ನು 2030 ರ ಆವೃತ್ತಿಯಲ್ಲೇ ತರಲು ಉತ್ಸುಕವಾಗಿದೆ.
ಕ್ರಿಕೆಟ್ ಅನ್ನು ಸಂಪೂರ್ಣ ಜಾಗತಿಕ ಕ್ರೀಡೆಯನ್ನಾಗಿ ಮಾಡಲು, ಟೂರ್ನಿಯನ್ನು ಭವಿಷ್ಯದಲ್ಲಿ 32 ರಾಷ್ಟ್ರಗಳಿಗೆ ವಿಸ್ತರಿಸುವ ಬದ್ಧತೆಯನ್ನು ಐಸಿಸಿ ಹೊಂದಿದೆ.
- 2028 ರಲ್ಲಿ 20 ತಂಡಗಳ ಟೂರ್ನಿ
- 2030 ಅಥವಾ 2032 ರಲ್ಲಿ 24 ತಂಡಗಳ ಟೂರ್ನಿ
- 2034 ಅಥವಾ 2036 ರಲ್ಲಿ 32 ತಂಡಗಳ ಟೂರ್ನಿ.
ಹೇಗಿರಲಿದೆ ಟೂರ್ನಿ?
24 ತಂಡಗಳು ಕಣಕ್ಕಿಳಿದಾಗ ಟೂರ್ನಿಯು ಈ ಕೆಳಗಿನ ಹಂತಗಳಲ್ಲಿ ನಡೆಯುವ ಸಾಧ್ಯತೆಯಿದೆ:
- ಲೀಗ್ ಹಂತ: ತಲಾ 4 ತಂಡಗಳಿರುವ 6 ಗ್ರೂಪ್‌ಗಳನ್ನು ಮಾಡಲಾಗುತ್ತದೆ.
- ಸೂಪರ್ 12 ಹಂತ: ಪ್ರತಿ ಗ್ರೂಪ್‌ನಿಂದ ಅಗ್ರ 2 ತಂಡಗಳು (ಒಟ್ಟು 12 ತಂಡಗಳು) ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತವೆ.
- ನಾಕೌಟ್ ಹಂತ: ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಜರುಗಲಿವೆ.
ಈ ಬದಲಾವಣೆಗೆ ಕಾರಣಗಳೇನು?
ತಂಡಗಳ ವಿಸ್ತರಣೆಯ ಹಿಂದೆ ದೊಡ್ಡ ವಾಣಿಜ್ಯ ಲಾಭವಿದೆ. ಭಾರತದಂತಹ ದೊಡ್ಡ ಮಾರುಕಟ್ಟೆಯಿರುವ ತಂಡಗಳಿಗೆ ಹೆಚ್ಚಿನ ಪಂದ್ಯಗಳು ಸಿಗುವಂತೆ ಹೊಸ ಸ್ವರೂಪವನ್ನು ವಿನ್ಯಾಸಗೊಳಿಸಲಾಗುತ್ತದೆ. ಇದರಿಂದ ಪ್ರಸಾರ ಹಕ್ಕುಗಳ ಮೌಲ್ಯ ದುಪ್ಪಟ್ಟಾಗಲಿದೆ.
ಯಾಹೂ ಸ್ಪೋರ್ಟ್ಸ್ ವರದಿಯ ಪ್ರಕಾರ, 2026ರ ವಿಶ್ವಕಪ್‌ನಲ್ಲಿ ಝಿಂಬಾಬ್ವೆ ತಂಡವು ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾವನ್ನು ಸೋಲಿಸಿ ಅಚ್ಚರಿ ಮೂಡಿಸಿತ್ತು. ಇಟಲಿ, ನೇಪಾಳದಂತಹ ದೇಶಗಳು ದೊಡ್ಡ ತಂಡಗಳಿಗೆ ಕಠಿಣ ಪೈಪೋಟಿ ನೀಡಿದ್ದವು. ಹೀಗಾಗಿ ಸಣ್ಣ ದೇಶಗಳಿಗೆ ಹೆಚ್ಚಿನ ಅವಕಾಶ ನೀಡಲು ಐಸಿಸಿ ಮುಂದಾಗಿದೆ.
ಯಾವ ದೇಶಗಳಿಗೆ ಅತಿ ಹೆಚ್ಚು ಲಾಭ?
ಈ ನಿರ್ಧಾರದಿಂದಾಗಿ ಪ್ರಸ್ತುತ ಐಸಿಸಿ ಶ್ರೇಯಾಂಕದಲ್ಲಿರುವ ಉಗಾಂಡ, ಪಪುವಾ ನ್ಯೂಗಿನಿ, ಇಟಲಿ, ಹಾಂಗ್ ಕಾಂಗ್, ಜರ್ಮನಿ ಮತ್ತು ನೈಜೀರಿಯಾ ನಂತಹ ಉದಯೋನ್ಮುಖ ಕ್ರಿಕೆಟ್ ರಾಷ್ಟ್ರಗಳು ನೇರವಾಗಿ ವಿಶ್ವಕಪ್ ಆಡುವ ಸುವರ್ಣ ಅವಕಾಶ ಪಡೆಯಲಿವೆ.
ಇದನ್ನೂ ಓದಿ: CWG 2026: 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ ಗೆದ್ದ ಭಾರತ
ಒಟ್ಟಾರೆಯಾಗಿ ಹೇಳುವುದಾದರೆ, ಏಕದಿನ ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿರುವ ಐಸಿಸಿ, ಟಿ20 ಮಾದರಿಯಲ್ಲಿ ಮಾತ್ರ ಕ್ರಾಂತಿಕಾರಿ ಜಾಗತೀಕರಣಕ್ಕೆ ಕೈಹಾಕಿದೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ಮತ್ತಷ್ಟು ಮನರಂಜನೆ ನೀಡುವುದರಲ್ಲಿ ಅನುಮಾನವಿಲ್ಲ.




