Khelo India University Games: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನಲ್ಲಿದ್ದಾರೆ ಒಲಿಂಪಿಕ್ಸ್ ಕ್ರೀಡಾಪಟುಗಳು
Khelo India University Games: ಈ ಬಾರಿ 200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 4,000 ಕ್ಕೂ ಹೆಚ್ಚು ಆಟಗಾರರು 20 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ವಿಶೇಷ ಎಂದರೆ ಎಂಟು ತಿಂಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಕೆಲವು ಪ್ರಮುಖ ತಾರೆಗಳು ಕೂಡ ಕಣದಲ್ಲಿದ್ದಾರೆ.
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನ (Khelo India University Games) ಎರಡನೇ ಆವೃತ್ತಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಈ ಕ್ರೀಡಾಕೂಟದಲ್ಲಿ 20 ವಿಭಾಗಗಳಲ್ಲಿ ಒಟ್ಟು 257 ಚಿನ್ನದ ಪದಕಗಳಿಗಾಗಿ ಪೈಪೋಟಿ ನಡೆಯಲಿದೆ. ಈ ಬಾರಿ 200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 4,000 ಕ್ಕೂ ಹೆಚ್ಚು ಆಟಗಾರರು 20 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ವಿಶೇಷ ಎಂದರೆ ಎಂಟು ತಿಂಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಕೆಲವು ಪ್ರಮುಖ ತಾರೆಗಳು ಕೂಡ ಕಣದಲ್ಲಿದ್ದಾರೆ. ಅಂದರೆ ಪ್ರಮುಖ ವಿಶ್ವವಿದ್ಯಾಲಯದ ಆಟಗಾರರು ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಇದೀಗ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತಹ ಆಟಗಾರರ ಕಿರು ಪರಿಚಯ ಇಲ್ಲಿದೆ.
ದ್ಯುತಿ ಚಂದ್: ಎರಡು ಬಾರಿ ಒಲಿಂಪಿಯನ್ ಆಗಿರುವ ದ್ಯುತಿ ಚಂದ್ ಕಳೆದ ಬಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 100 ಮೀಟರ್ ಮತ್ತು 200 ಮೀಟರ್ ಸ್ಪ್ರಿಂಟ್ ಸ್ಪರ್ಧೆಗಳಲ್ಲಿ ಈ ಬಾರಿ ಕೂಡ ದ್ಯುತಿ ಚಂದ್ ಓಡಲಿದ್ದಾರೆ. 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಡ್ಯೂಟಿ ಅವರು 2016 ರಲ್ಲಿ ರಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 100 ಮೀಟರ್‌ನಲ್ಲಿ ಸ್ಪರ್ಧಿಸಿದ ಆರನೇ ಭಾರತೀಯ ಮಹಿಳೆ ಎಂಬುದು ವಿಶೇಷ.
ಐಶ್ವರಿ ಪ್ರತಾಪ್ ಸಿಂಗ್ ತೋಮರ್: ಜೂನಿಯರ್ ಮಟ್ಟದಲ್ಲಿ ವಿಶ್ವ ದಾಖಲೆ ಹೊಂದಿರುವ ತೋಮರ್ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಏರ್ ರೈಫಲ್ ಸ್ಪರ್ಧೆಗಳಲ್ಲಿ ಕಣದಲ್ಲಿದ್ದಾರೆ. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ತೋಮರ್ ಇತ್ತೀಚೆಗೆ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್‌ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ ಟಿ2 ಇವೆಂಟ್‌ನಲ್ಲಿ ಚಿನ್ನ ಗೆದಿದ್ದರು.
ಶ್ರೀಹರಿ ನಟರಾಜ್: ಈಜುಪಟು ಶ್ರೀಹರಿ ನಟರಾಜ್ 2018 ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇತ್ತೀಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಕಾಣಿಸಿಕೊಂಡಿದ್ದರು. 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಹಿರಿಯ ರಾಷ್ಟ್ರೀಯ ದಾಖಲೆಗಳನ್ನು ಮುರಿದ ನಟರಾಜ್ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
ಜೆಸ್ವಿನ್ ಆಲ್ಡ್ರಿನ್: ಇತ್ತೀಚೆಗೆ ಕೇರಳದಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ, ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಜೆಸ್ವಿನ್ ಆಲ್ಡ್ರಿನ್ 8.37 ಮೀ. ಹಾರಿದ್ದರು. ಇದೀಗ ಅಥ್ಲೇಟಿಕ್ಸ್ನಲ್ಲಿ ಹೊಸ ಭರವಸೆ ಮೂಡಿಸಿರುವ ಆಲ್ಡ್ರಿನ್ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮುಂಬರುವ ದಿನಗಳಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ವಿಶ್ವಾಸದಲ್ಲಿದ್ದಾರೆ. ಈ ವಿಶ್ವಾಸದೊಂದಿಗೆ ಆಲ್ಡ್ರಿನ್ ಕೂಡ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಮನು ಭಾಕರ್: ಟೋಕಿಯೊ ಒಲಿಂಪಿಯನ್ ಮತ್ತು 2020 ರ ಅರ್ಜುನ ಪ್ರಶಸ್ತಿ ವಿಜೇತ ಮನು ಭಾಕರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, 16ನೇ ವಯಸ್ಸಿನಲ್ಲಿ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಇದೀಗ ತಮ್ಮ ವಿಶ್ವ ವಿದ್ಯಾಲಯದ ಮೂಲಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ