ಹೊಸ ವಿವಾದ… ಟ್ರಂಪ್ ಫೋನ್ ಕರೆ ಬೆನ್ನಲ್ಲೇ ಅಮೆರಿಕ ಆಟಗಾರನ ನಿಷೇಧ ರದ್ದು!

FIFA World Cup 2026: ಫುಟ್‌ಬಾಲ್ ಮೈದಾನದಲ್ಲಿ ರೆಫರಿ ಮಾತು ವೇದವಾಕ್ಯ, ಅವರು ತೋರಿಸಿದ ರೆಡ್ ಕಾರ್ಡ್‌ಗೆ ನೋ ಅಪೀಲ್, ನೋ ವಾದ ಅನ್ನೋದು ಜಗತ್ತಿನ ನಿಯಮ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಟ್ರಿ ಕೊಟ್ಟ ಮೇಲೆ ಫಿಫಾ ರೂಲ್ಸ್​ ಕೂಡ ಬದಲಾಗಿದೆ!

ಹೊಸ ವಿವಾದ... ಟ್ರಂಪ್ ಫೋನ್ ಕರೆ ಬೆನ್ನಲ್ಲೇ ಅಮೆರಿಕ ಆಟಗಾರನ ನಿಷೇಧ ರದ್ದು!
Trump - Balogun
Image Credit source: BBC/FIFA

Updated on: Jul 06, 2026 | 12:44 PM

ಫಿಫಾ ವಿಶ್ವಕಪ್‌ನಲ್ಲಿ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಈ ವಿವಾದದ ಕೇಂದ್ರಬಿಂದುವಾಗಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಮೈದಾನದಲ್ಲಿ ತಪ್ಪು ಎಸಗಿ ರೆಡ್ ಕಾರ್ಡ್ ಪಡೆದಿದ್ದ ಅಮೆರಿಕ ತಂಡದ ಸ್ಟಾರ್ ಸ್ಟ್ರೈಕರ್ ಫೋಲರಿನ್ ಬಾಲೋಗನ್ ಮೇಲಿನ ಒಂದು ಪಂದ್ಯದ ಕಡ್ಡಾಯ ನಿಷೇಧವನ್ನು, ಟ್ರಂಪ್ ಸೂಚನೆ ಮೇರೆಗೆ ಫಿಫಾ (FIFA) ದಿಢೀರ್ ರದ್ದುಗೊಳಿಸಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ, ಫುಟ್‌ಬಾಲ್ ಪ್ರೇಮಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ರೀಡಾಂಗಣದಲ್ಲೂ ಇಂತಹ ರಾಜಕೀಯ ಹಸ್ತಕ್ಷೇಪ ನಡೆದಿರುವುದು ಜಾಗತಿಕ ಮಟ್ಟದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ವಿವಾದದ ಹಿನ್ನಲೆಯೇನು?

ಬೋಸ್ನಿಯಾ ಮತ್ತು ಹೆರ್ಜೆಗೋವಿನಾ ವಿರುದ್ಧದ ‘ರೌಂಡ್ ಆಫ್ 32’ ಪಂದ್ಯದಲ್ಲಿ ಬಾಲೋಗನ್ ಎದುರಾಳಿ ಡಿಫೆಂಡರ್ ಕಾಲಿನ ಮೇಲೆ ಅಕಸ್ಮಾತ್ ಆಗಿ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ರೆಫರಿ ಅವರಿಗೆ ನೇರ ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಗಟ್ಟಿದ್ದರು.

ಫಿಫಾ ನಿಯಮಾವಳಿಗಳ ಪ್ರಕಾರ, ನೇರ ರೆಡ್ ಕಾರ್ಡ್ ಪಡೆದ ಆಟಗಾರನಿಗೆ ಮುಂದಿನ ಪಂದ್ಯದಿಂದ ಸ್ವಯಂಚಾಲಿತವಾಗಿ ನಿಷೇಧ ವಿಧಿಸಲಾಗುತ್ತದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಯಾವುದೇ ಅವಕಾಶವಿರುವುದಿಲ್ಲ. ಅದರಂತೆ ಬೆಲ್ಜಿಯಂ ವಿರುದ್ಧ ಪ್ರಿ-ಕ್ವಾರ್ಟರ್​ ಫೈನಲ್​ನಲ್ಲಿ ಪಂದ್ಯದಲ್ಲಿ ಕಣಕ್ಕಿಳಿಯಲು ಫೋಲರಿನ್ ಬಾಲೋಗನ್ ಅವಕಾಶವಿಲ್ಲ.

ಟ್ರಂಪ್ ಕರೆ:

ಅಮೆರಿಕ ತಂಡದ ಪ್ರಮುಖ ಆಟಗಾರ ಹೊರಬೀಳುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರಿಗೆ ಸತತ ಮೂರು ಬಾರಿ ಫೋನ್ ಕರೆ ಮಾಡಿ ತೀರ್ಪನ್ನು ಮರುಪರಿಶೀಲಿಸುವಂತೆ ಕಠಿಣ ಒತ್ತಡ ಹೇರಿದ್ದಾರೆ.

ಅಷ್ಟೇ ಅಲ್ಲದೆ ಅಮೆರಿಕ ಮತ್ತು ಬೋಸ್ನಿಯಾ-ಹೆರ್ಜೆಗೋವಿನಾ ನಡುವಿನ ಪಂದ್ಯದ ವೇಳೆ ಬಾಲೋಗನ್ ಅವರಿಗೆ ರೆಡ್ ಕಾರ್ಡ್ ನೀಡಿದ ಆ ಪಂದ್ಯದ ಮುಖ್ಯ ರೆಫರಿ ಬ್ರೆಜಿಲ್ ದೇಶದ ರಾಫೆಲ್ ಕ್ಲಾಸ್ ವಿರುದ್ಧ ಅಮೆರಿಕ ಸರ್ಕಾರವು ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳನ್ನು ಒಳಗೊಂಡ ದಾಖಲೆಗಳನ್ನು ಫಿಫಾಗೆ ಸಲ್ಲಿಸಿದೆ.

ಫಿಫಾ ಶರಣಾಗತಿ!

ಟ್ರಂಪ್ ಅವರ ಒತ್ತಡಕ್ಕೆ ಮಣಿದ ಫಿಫಾ ಶಿಸ್ತು ಸಮಿತಿಯು, ತನ್ನ ಶಿಸ್ತು ಸಂಹಿತೆಯ ‘ಆರ್ಟಿಕಲ್ 27’ ನಿಯಮವನ್ನು ಆಯುಧವಾಗಿ ಬಳಸಿಕೊಂಡಿದೆ. ಈ ವಿಶಿಷ್ಟ ನಿಯಮದ ಪ್ರಕಾರ, ಆಟಗಾರನಿಗೆ ವಿಧಿಸಲಾದ ಶಿಕ್ಷೆಯನ್ನು ಒಂದು ವರ್ಷದ ‘ಪರಿವೀಕ್ಷಣಾ ಅವಧಿ’ ಅವಧಿಗೆ ಮುಂದೂಡಬಹುದು.

ಈ ಆಯ್ಕೆಯ ಮೂಲಕ ಇದೀಗ ಫಿಫಾ ಶಿಸ್ತು ಸಮಿತಿಯು ಬಾಲೋಗನ್ ಮೇಲಿನ ನಿಷೇಧವನ್ನು ಸದ್ಯಕ್ಕೆ ಅಮಾನತ್ತಿನಲ್ಲಿಡಲಾಗಿದೆ. ಇದರಿಂದಾಗಿ ಇಂದು (ಸೋಮವಾರ) ಸಿಯಾಟಲ್‌ನಲ್ಲಿ ಬೆಲ್ಜಿಯಂ ವಿರುದ್ಧ ನಡೆಯಲಿರುವ ಹೈ-ವೋಲ್ಟೇಜ್ ‘ರೌಂಡ್ ಆಫ್ 16’ ಪಂದ್ಯದಲ್ಲಿ ಬಾಲೋಗನ್ ಅಮೆರಿಕ ಪರ ಕಣಕ್ಕಿಳಿಯಲು ಹಸಿರು ನಿಶಾನೆ ಸಿಕ್ಕಿದೆ.

ಅಂದರೆ ಇಲ್ಲಿ ಪ್ರೊಬೇಷನರಿ ಅವಧಿಯ ಆಯ್ಕೆಯನ್ನು ಬಳಸಿಕೊಂಡಿರುವ ಫಿಫಾ ಶಿಸ್ತು ಸಮಿತಿ ಅಮೆರಿಕ ಆಟಗಾರನ ಶಿಕ್ಷೆಯನ್ನು ಮುಂದೂಡಿದೆ. ಈ ಅವಧಿಯಲ್ಲಿ ಆಟಗಾರನಿಗೆ ವಿಧಿಸಲಾದ ನಿಷೇಧ ಅಥವಾ ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಿಲ್ಲ. ಬದಲಿಗೆ, ಆ ಶಿಕ್ಷೆಯನ್ನು ಜಾರಿಗೆ ತರದೇ ಸದ್ಯಕ್ಕೆ ತಡೆಹಿಡಿಯಲಾಗುತ್ತದೆ.

ಅದರಂತೆ ಅಮೆರಿಕ ತಂಡದ ಸ್ಟಾರ್ ಸ್ಟ್ರೈಕರ್ ಫೋಲರಿನ್ ಬಾಲೋಗನ್ ಮೇಲಿನ ಮುಂದಿನ ಪಂದ್ಯದ ಕಡ್ಡಾಯ ನಿಷೇಧವನ್ನು ತೆಗೆದು ಹಾಕಲಾಗಿದೆ.

“ಏಪ್ರಿಲ್ ಫೂಲ್” ಎಂದ ಬೆಲ್ಜಿಯಂ:

ಫಿಫಾದ ಈ ತಾರತಮ್ಯದ ನಿರ್ಧಾರದ ವಿರುದ್ಧ ಬೆಲ್ಜಿಯಂ ಫುಟ್‌ಬಾಲ್ ಸಂಸ್ಥೆ ತೀವ್ರ ಆಕ್ರೋಶ ಹೊರಹಾಕಿದೆ. ಇದು ಕ್ರೀಡಾ ನಿಯಮಗಳಿಗೆ ಬಗೆದ ದ್ರೋಹ ಎಂದಿರುವ ಬೆಲ್ಜಿಯಂ ಕೋಚ್ ರೂಡಿ ಗಾರ್ಸಿಯಾ, “ಫಿಫಾ ವಿಶ್ವಕಪ್ ಅನ್ನು ಏಪ್ರಿಲ್ ಫೂಲ್ ಜೋಕ್ ಆಗಿ ಪರಿವರ್ತಿಸಿದೆ” ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ ಬೆಲ್ಜಿಯಂ ಈ ನಿರ್ಧಾರದ ವಿರುದ್ಧ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರಲು ಸಜ್ಜಾಗಿದೆ.

ಡೊನಾಲ್ಡ್ ಟ್ರಂಪ್ ಸಂಭ್ರಮ:

ಇತ್ತ ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ, “ದೊಡ್ಡ ಅನ್ಯಾಯವನ್ನು ಸರಿಪಡಿಸಿದ್ದಕ್ಕಾಗಿ ಫಿಫಾಗೆ ಧನ್ಯವಾದಗಳು! ಇದು ಅಮೆರಿಕಕ್ಕೆ ಸಿಕ್ಕ ಜಯ” ಎಂದು ಬರೆದುಕೊಂಡು ಸಂಭ್ರಮಿಸಿದ್ದಾರೆ.

ಮತ್ತೊಂದೆಡೆ ಯುಎಸ್ ಕೋಚ್ ಮೌರಿಸಿಯೊ ಪೊಚೆಟ್ಟಿನೊ ಮತ್ತು ನಾಯಕ ಕ್ರಿಸ್ಟಿಯನ್ ಪುಲಿಸಿಕ್ ಫಿಫಾ ತೀರ್ಪನ್ನು ಸ್ವಾಗತಿಸಿದ್ದು, ಬಾಲೋಗನ್‌ಗೆ ರೆಡ್ ಕಾರ್ಡ್ ನೀಡಿದ್ದೇ ತಪ್ಪು ತೀರ್ಪಾಗಿತ್ತು ಎಂದು ವಾದಿಸಿದ್ದಾರೆ.

ಇದನ್ನೂ ಓದಿ: 23 ವರ್ಷಗಳಿಂದ ನನ್ನನ್ನು ಮುಗಿಸಲು ನೋಡ್ತಿದ್ದೀರಿ: ಸಿಡಿದೆದ್ದ ರೊನಾಲ್ಡೊ!

ಒಟ್ಟಾರೆಯಾಗಿ ಹೇಳುವುದಾದರೆ, ಫಿಫಾ ವಿಶ್ವಕಪ್‌ನಂತಹ ಅತ್ಯುನ್ನತ ಜಾಗತಿಕ ಕ್ರೀಡಾಕೂಟವೊಂದು ರಾಜಕೀಯ ರಣರಂಗವಾಗಿ ಮಾರ್ಪಟ್ಟಿರುವುದು ಕ್ರೀಡಾಲೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ಹಸ್ತಕ್ಷೇಪ ಮತ್ತು ಅದಕ್ಕೆ ಫಿಫಾ ಮಣಿದಿರುವ ನಡೆ, ‘ಕ್ರೀಡೆಗಳಲ್ಲಿ ರಾಜಕೀಯ ಪ್ರಭಾವ ಇರಬಾರದು’ ಎಂಬ ಜಾಗತಿಕ ನಿಯಮಕ್ಕೆ ಬಿದ್ದ ದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗುತ್ತಿದೆ.

 

Published On - 12:43 pm, Mon, 6 July 26

Follow Us