ಹೈದರಾಬಾದ್ ಗಲ್ಲಿಯಲ್ಲಿ ಅರಳಿದ ಆಟೊ ಡ್ರೈವರ್ ಮಗ: ನೋವು, ನಿಂದನೆ ನಡುವೆ ಮಿಂಚಿದ ಸಿರಾಜ್ಗೆ ಇಂದು 27 ನೇ ಜನುಮದಿನ
ತನ್ನ ಮೇಲೆ ಜನಾಂಗೀಯ ನಿಂದನೆ ಮಾಡಿದವರ ಮಣ್ಣಲ್ಲೇ, ಆತ ಮುಟ್ಟಿನೋಡಿಕೊಳ್ಳುವಂತಹ ಪ್ರತ್ಯುತ್ತರ ನೀಡಿದ್ದ. ಅಲ್ಪಾವಧಿಯಲ್ಲಿಯೇ ಬಹಳ ಕಷ್ಟಗಳನ್ನು ಎದುರಿಸಿ ಟೀಂ ಇಂಡಿಯಾದಲ್ಲಿ ನೆಲೆ ಕಂಡುಕೊಂಡಿರುವ ಮೊಹಮ್ಮದ್ ಸಿರಾಜ್ಗೆ ಇಂದು 27 ನೇ ಜನುಮದಿನ.
ಆಸಿಸ್ ನಾಡಿನ ಟೆಸ್ಟ್ ಸರಣಿಯಲ್ಲಿ ಆ ಕ್ರಿಕೆಟಿಗ ಅನುಭವಿಸಿದ ನೋವು, ಅವಮಾನ, ನಿಂದನೆ ಒಂದೆರೆಡಲ್ಲ. ಆದ್ರೆ, ತಂದೆ ತೀರಿಕೊಂಡ ನೋವಿನಲ್ಲೇ, ತನ್ನ ಮೇಲೆ ಜನಾಂಗೀಯ ನಿಂದನೆ ಮಾಡಿದವರ ಮಣ್ಣಲ್ಲೇ, ಆತ ಮುಟ್ಟಿನೋಡಿಕೊಳ್ಳುವಂತಹ ಪ್ರತ್ಯುತ್ತರ ನೀಡಿದ್ದ. ಅಲ್ಪಾವಧಿಯಲ್ಲಿಯೇ ಬಹಳ ಕಷ್ಟಗಳನ್ನು ಎದುರಿಸಿ ಟೀಂ ಇಂಡಿಯಾದಲ್ಲಿ ನೆಲೆ ಕಂಡುಕೊಂಡಿರುವ ಮೊಹಮ್ಮದ್ ಸಿರಾಜ್ಗೆ ಇಂದು 27 ನೇ ಜನುಮದಿನ. 2016-2017 ರಣಜಿ ಟ್ರೋಪಿಯಲ್ಲಿ 41 ವಿಕೆಟ್ ಪಡೆದಿದ್ದ ಸಿರಾಜ್ ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಕ್ಯಾಪ್ ಧರಿಸಿದರು. ಪ್ರಸ್ತುತ ಆರ್ಸಿಬಿ ಪರ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಸದ್ಯ ಟೀಂ ಇಂಡಿಯಾದ ಭರವಸೆ ಬೌಲರ್ ಆಗಿದ್ದಾರೆ.
ತಂದೆಯ ಅಕಾಲಿಕ ಮರಣ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ವೇಳೆ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ (53) ಅವರು ಶ್ವಾಸಕೋಶದ ಕಾಯಿಲೆಯಿಂದಾಗಿ ತಮ್ಮ ಹೈದರಾಬಾದ್ ನಿವಾಸದಲ್ಲಿ ನಿಧನರಾದರು. ಈ ನೋವಿನ ವಿಚಾರದ ಬಗ್ಗೆ ಅಂದು ಪ್ರತಿಕ್ರಿಯೆ ನೀಡಿದ್ದ ಮೊಹಮ್ಮದ್ ಸಿರಾಜ್, ಆರಂಭಿಕ ದಿನಗಳಲ್ಲಿ ಆಟೋ ರಿಕ್ಷಾ ಚಾಲನೆ ಮಾಡುವಾಗ ನನ್ನ ತಂದೆ ಯಾವ ರೀತಿಯ ಕಷ್ಟಗಳನ್ನು ಎದುರಿಸಿದ್ದಾರೆಂದು ನನಗೆ ತಿಳಿದಿದೆ ಎಂದು ಸಿರಾಜ್ ತಮ್ಮ ತಂದೆಯೊಂದಿಗಿನ ಬಾಲ್ಯದ ದಿನಗಳನ್ನು ನೆನೆದಿದ್ದರು. ಜೊತೆಗೆ ನನ್ನ ದೇಶ ಹೆಮ್ಮೆ ಪಡುವಂತ ಕೆಲಸವನ್ನು ನಾನು ಮಾಡಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು. ನಾನು ಅದನ್ನು ಖಚಿತವಾಗಿ ಮಾಡುತ್ತೇನೆ ಎಂದಿದ್ದರು.
ಜನಾಂಗೀಯ ನಿಂದನೆ ನಡುವೆ ಸಿರಾಜ್ ಕಾಂಗೂರಗಳ ಬೇಟೆ! ಮೊಹಮ್ಮದ್ ಸಿರಾಜ್ರನ್ನು ಆಸಿಸ್ ಕ್ರಿಕೆಟ್ ಅಭಿಮಾನಿಗಳು ಮೂರು ಬಾರಿ, ಜನಾಂಗೀಯ ನಿಂದನೆಗೆ ಗುರಿ ಮಾಡಿದ್ರು. ಸಿಡ್ನಿ ಟೆಸ್ಟ್ನಲ್ಲಿ ಸಿರಾಜ್ಗೆ ಕೋತಿ, ಕಂದು ನಾಯಿ ಅಂತ ಜನಾಂಗೀಯ ನಿಂದನೆ ಮಾಡಿದ್ದ ಕಿಡಿಗೇಡಿ ಪ್ರೇಕ್ಷಕರು, ಬ್ರಿಸ್ಬೇನ್ನಲ್ಲಿ ಹುಳ ಅಂತ ನಿಂದನೆ ಮಾಡಿದ್ರು. ಆದ್ರೆ ಇದ್ಯಾವುದಕ್ಕೂ ಉತ್ತರಿಸದೇ ಸೈಲೆಂಟ್ ಆಗಿದ್ದ ಸಿರಾಜ್, ತಮ್ಮ ಅದ್ಭುತ ಬೌಲಿಂಗ್ ಮೂಲಕ ಮುಟ್ಟಿನೋಡಿಕೊಳ್ಳೋ ಹಾಗೇ ತಿರುಗೇಟು ಕೊಟ್ಟಿದ್ದರು.
ಪಂದ್ಯ ಮುಗಿದ ಬಳಿಕ ಭಾವುಕದ ಮಾತುಗಳನ್ನಾಡಿದ್ದ ಸಿರಾಜ್, ಟೆಸ್ಟ್ ಕ್ರಿಕೆಟ್ ಆಡೋದು ಆಟೊ ಡ್ರೈವರ್ ಆಗಿದ್ದ ನಮ್ಮ ತಂದೆಯವರ ಕನಸಾಗಿತ್ತು. ಆದ್ರೆ ಇವತ್ತು ಸಾಧನೆಯನ್ನ ಕಾಣ್ತುಂಬಿಕೊಳ್ಳಲು ಅವರೇ ಇಲ್ಲ. ಪಂದ್ಯಕ್ಕೂ ಮುನ್ನ ತಾಯಿ, ಫೋನ್ ಮಾಡಿದ್ರು. ಆ ಒಂದು ಕರೆಯೇ ನನ್ನ ಆತ್ಮವಿಶ್ವಾಸವನ್ನ ಹೆಚ್ಚಾಗುವಂತೆ ಮಾಡ್ತು ಎಂದಿದ್ದರು.
ಒಟ್ನಲ್ಲಿ ತಂದೆ ತೀರಿಕೊಂಡ ನೋವು. ಜನಾಂಗೀಯ ನಿಂದನೆ ಎದುರಿಸಿದ ಅಪಮಾನದ ನಡುವೆ ಸಿರಾಜ್ ಮೆರೆದ ಪರಾಕ್ರಮ ನಿಜಕ್ಕೂ ಮೆಚ್ಚುವಂತಹದ್ದೇ. ಅಲ್ಲದೇ, ಟೆಸ್ಟ್ ಕ್ರಿಕೆಟ್ನಲ್ಲಿ ಸಾಧನೆ ಮಾಡ್ಬೇಕು ಅನ್ನೋ, ಸಿರಾಜ್ ಅವರ ತಂದೆಯ ಕನಸನ್ನ ನನಸು ಮಾಡಲಿ ಎಂಬುದೇ ಎಲ್ಲರ ಹಾರೈಕೆ.