Hockey WC: ಗೆದ್ದು ಸೋತ ಭಾರತ ಹಾಕಿ ತಂಡ; ಈಗ ಕ್ವಾರ್ಟರ್ ಫೈನಲ್‌ಗೆ ಎಂಟ್ರಿಕೊಡುವುದು ಹೇಗೆ?
Hockey World Cup 2023: ಈಗ ಭಾರತ ಹಾಕಿ ತಂಡ ಕ್ವಾರ್ಟರ್‌ಫೈನಲ್ ತಲುಪಬೇಕಾದರೆ ಭಾನುವಾರದಂದು ನ್ಯೂಜಿಲೆಂಡ್ ವಿರುದ್ಧ ಕ್ರಾಸ್ಒವರ್ ಪಂದ್ಯವನ್ನು ಆಡಬೇಕಾಗಿದೆ.

ಭಾರತದಲ್ಲಿಯೇ ನಡೆಯುತ್ತಿರುವ ಹಾಕಿ ವಿಶ್ವಕಪ್‌ನಲ್ಲಿ (Hockey World Cup 2023) ಭಾರತ ಹಾಕಿ ತಂಡ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ. ತನ್ನ ಪೂಲ್‌ನ ಕೊನೆಯ ಪಂದ್ಯದಲ್ಲಿ ವೇಲ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಭಾರತ ತಂಡ (India vs Wales) ಗೆಲುವಿನ ನಗೆಯೇನೋ ಬೀರಿತು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ (Quarter-Finals) ನೇರ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ ಭಾರತ ಹಾಕಿ ತಂಡ ಕೊನೆಯ 8 ಕ್ಕೆ ಪ್ರವೇಶಿಸಲು ಈ ಗೆಲುವು ಅಗತ್ಯವಿರಲಿಲ್ಲ. ಆದರೆ ಕನಿಷ್ಠ 8 ಗೋಲುಗಳ ಅಂತರದಿಂದ ಗೆಲ್ಲುವುದು ಅಗತ್ಯವಾಗಿತ್ತು. ಆದರೆ ಭಾರತ ತಂಡ ಅಂತಿಮವಾಗಿ 2 ಗೋಲುಗಳ ಅಂತರದಿಂದ ವೇಲ್ಸ್ ವಿರುದ್ಧ ಜಯಗಳಿಸಿತು.
ಈ ಗೆಲುವಿನೊಂದಿಗೆ ಭಾರತ ಹಾಕಿ ತಂಡ ಡಿ ಪೂಲ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದು, ಇಂಗ್ಲೆಂಡ್ ತಂಡ ಮೊದಲ ಸ್ಥಾನದಲ್ಲಿದೆ. ಈಗ ಭಾರತ ಹಾಕಿ ತಂಡ ಕ್ವಾರ್ಟರ್‌ಫೈನಲ್ ತಲುಪಬೇಕಾದರೆ ಭಾನುವಾರದಂದು ನ್ಯೂಜಿಲೆಂಡ್ ವಿರುದ್ಧ ಕ್ರಾಸ್ಒವರ್ ಪಂದ್ಯವನ್ನು ಆಡಬೇಕಾಗಿದೆ.
IND vs NZ: ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಜೇಬಿಗೆ ಕತ್ತರಿ ಹಾಕಿದ ಐಸಿಸಿ!
ಪ್ರಚಂಡ ಹೋರಾಟ ನೀಡಿದ ವೆಲ್ಸ್
ಇನ್ನು ಭಾರತ ಮತ್ತು ವೇಲ್ಸ್ ನಡುವಣ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಭಾರತದ ಪರ ಆಕಾಶದೀಪ್ ಸಿಂಗ್ 32 ಮತ್ತು 45 ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದರೆ, ಶಂಶೇರ್ ಸಿಂಗ್ 21 ನೇ ನಿಮಿಷದಲ್ಲಿ ಮತ್ತು ಹರ್ಮನ್‌ಪ್ರೀತ್ ಸಿಂಗ್ 59 ನೇ ನಿಮಿಷದಲ್ಲಿ ಭಾರತದ ಪರ ಗೋಲು ಗಳಿಸಿದರು. ಅದೇ ಸಮಯದಲ್ಲಿ, ವೇಲ್ಸ್ ಪರವಾಗಿ ಗರೆಥ್ ಫರ್ಲಾಂಗ್ 42 ನೇ ಮತ್ತು ಜಾಕೋಬ್ ಡ್ರೇಪರ್ 44 ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಇನ್ನು ಡಿ ಪೂಲ್ ಬಗ್ಗೆ ಮಾತನಾಡುವುದಾದರೆ ಇಂಗ್ಲೆಂಡ್ ಮತ್ತು ಭಾರತ ಎರಡೂ ತಂಡಗಳು ತಲಾ 7 ಅಂಕಗಳನ್ನು ಹೊಂದಿವೆ. ಎರಡೂ ತಂಡಗಳು 2 ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿವೆ. ಆದರೆ ಗೋಲುಗಳು ವ್ಯತ್ಯಾಸದ ಆಧಾರದ ಮೇಲೆ ಇಂಗ್ಲೆಂಡ್ ತಂಡವು ಅಗ್ರಸ್ಥಾನದಲ್ಲಿದೆ. ಇದುವರೆಗೆ ಇಂಗ್ಲೆಂಡ್ ತಂಡ 9 ಗೋಲುಗಳಿಸಿದರೆ, ಭಾರತ ತಂಡ 6 ಗೋಲುಗಳಿಸುವುದಕಷ್ಟೇ ಶಕ್ತವಾಗಿದೆ.
ಉಭಯ ತಂಡಗಳ ವಿಶ್ವಕಪ್ ಪಯಣ
ಇನ್ನು ಕ್ವಾರ್ಟರ್ ಫೈನಲ್ ಎದುರಾಳಿ ನ್ಯೂಜಿಲೆಂಡ್ ತಂಡದ ಬಗ್ಗೆ ಹೇಳಬೇಕೆಂದರೆ ಗ್ರೂಪ್ C ನಲ್ಲಿ 3 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿರುವ ನ್ಯೂಜಿಲೆಂಡ್ ತಂಡ ಆಡಿರುವ 3 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದ್ದರೆ, 2 ಪಂದ್ಯಗಳಲ್ಲಿ ಸೋತಿದೆ. ಇತ್ತ 2-0 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಿದ ಭಾರತ ತಂಡ, ತನ್ನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಆದರೆ ಈ ಪಂದ್ಯ ಗೋಲುರಹಿತವಾಗಿ ಡ್ರಾದೊಂದಿಗೆ ಅಂತ್ಯಗೊಂಡಿತು. ವಾಸ್ತವವಾಗಿ ಈ ಪಂದ್ಯದ ಫಲಿತಾಂಶ ಭಾರತ ತಂಡದ ಕಷ್ಟವನ್ನು ಹೆಚ್ಚಿಸಿತು. ನಂತರ ವೇಲ್ಸ್ ವಿರುದ್ಧವೂ ಭಾರತಕ್ಕೆ ದೊಡ್ಡ ಅಂತರದಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಅಂತಿಮವಾಗಿ ಗೆಲ್ಲುವ ಮೂಲಕ ಭಾರತ ತಂಡ ತಮ್ಮ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Fri, 20 January 23
