
ಬೆಂಗಳೂರು: ನಗರದ ಕಂಠೀರವ ಸ್ಟೇಡಿಯಂನಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ಗೆ (Khelo India University Games) ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನಿನ್ನೆ ಚಾಲನೆ ನೀಡಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸದ್ಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕ್ರೀಡಾ ಸಚಿವ ನಾರಾಯಣಗೌಡ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ 2ನೇ ಬಾರಿ ಖೇಲೋ ಇಂಡಿಯಾ ಗೇಮ್ಸ್ ನಡೆಯುತ್ತಿದೆ. ಕ್ರೀಡೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕೆಂಬುದು ಪ್ರಧಾನಿ ಮೋದಿ ಕನಸು. ಈ ನಿಟ್ಟಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಖೇಲೋ ಇಂಡಿಯಾ ಗೇಮ್ಸ್ನಲ್ಲಿ 8 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಮೋದಿ ಕನಸಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಕರ್ನಾಟಕ ಸರ್ಕಾರ ಹೆಚ್ಚು ಒತ್ತು ನೀಡಿದೆ. ಕಳೆದ ನಾಲ್ಕೈದು ವರ್ಷದಿಂದ ಜಕ್ಕೂರು ಏರೋ ಡ್ರಮ್‌ನಲ್ಲಿ ನೂರು ಜನರನ್ನು ಪೈಲಟ್ ಮಾಡುವ ಕೆಲಸ ನಡೆಯುತ್ತಿದೆ. ಹೀಗಾಗಿ ಲಘು ವಿಮಾನ ಖರೀದಿ ಮಾಡಿದ್ದೇವೆ.
ಕರ್ನಾಟಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ಕ್ರೀಡಾ ವಿವಿಗೆ ಯಲಹಂಕ ಬಳಿ 100 ಎಕರೆ ಜಾಗ ಗುರುತಿಸಲಾಗಿದೆ. ರಾಜ್ಯ ಸರ್ಕಾರದಿಂದ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ 504 ಕೋಟಿ ರೂಪಾಯಿ ವೆಚ್ಚದಲ್ಲಿ ಆಟದ ಮೈದಾನಗಳ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದೆ. ಪ್ರತೀ ಶಾಲೆಯಲ್ಲಿ ಮಕ್ಕಳಿಗೆ ಒಂದೂವರೆ ಗಂಟೆಗಳ ಕಾಲ ಆಟ ಆಡಿಸುವಂತೆ ಸೂಚನೆ ನೀಡಿದ್ದೇವೆ. ಕಂಠೀರವ ಸ್ಟೇಡಿಯಂನಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮಾಡಿದ್ದೇವೆ. ತುಮಕೂರು, ಮಂಡ್ಯದಲ್ಲಿ, ಬೆಂಗಳೂರಲ್ಲಿ ಟೆಸ್ಟಿಂಗ್ ಟ್ರ್ಯಾಕ್ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದ್ದು ಇಲ್ಲಿ ತರಬೇತಿ ಪಡೆದ 25 ಮಕ್ಕಳು ಚನ್ನೈ, ಆಂಧ್ರದಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಚಿನ್ನ ಪದಕ ಗಳಿಸಿದ್ದಾರೆ. ಇನ್ನು ಕ್ರೀಡೆಗಳಲ್ಲಿ ತರಬೇತಿ ಪಡೆಯುವ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು ಒಂದೇ ವರ್ಷದಲ್ಲಿ 30 ಕಡೆ ಹಾಸ್ಟೆಲ್ ನಿರ್ಮಾಣ ಮಾಡಿದ್ದೇವೆ. ಗರಡಿ ಮನೆ ನಿಂತುಹೋಗಿದ್ದು ಹಳೇ ಮೈಸೂರು ಭಾಗದಲ್ಲಿ ಗರಡಿ ಮನೆ ಮಾಡಿಕೊಟ್ಟಿದ್ದೇವೆ. ಹಳೆಯ ಕುಸ್ತಿಪಟುಗಳಿಗೆ 1 ಸಾವಿರ ರೂಪಾಯಿ ಮಾಸಾಶನ ಹೆಚ್ಚಳ ಮಾಡಲಾಗಿದೆ.
ಸ್ವಿಮ್ಮಿಂಗ್ ಪೂಲ್ ನೆನೆಗುದಿಗೆ ಬಿದ್ದಿದ್ದು, ಅದನ್ನು ಮತ್ತೆ ಕಾರ್ಯ ಮಾಡುವಂತೆ ಕೆಲಸ ಮಾಡಲಾಗಿದೆ. 31 ಜಿಲ್ಲೆಗಳ ಪೈಕಿ, 28 ಕಡೆ ಕೆಲಸ ಮಾಡಿದ್ದೇವೆ. ಇನ್ನೂ ಕೆಲಸ ಮಾಡುವುದು ಸಾಕಷ್ಟಿದೆ. ಡಾ. ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಯೂತ್ ಪಾಲಿಸಿ ತಂದು, ಆಯ್ಕೆ ಮಾಡಿ ಕೇಂದ್ರಕ್ಕೆ ಕಳಿಸಲಾಗುತ್ತಿದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ಮಾಹಿತಿ ನೀಡಿದ್ದಾರೆ.
ಏರ್ಪೋರ್ಟ್ಗೆ ಬಿಎಸ್ವೈ ಹೆಸರು ಇಡುವ ಕೆಲಸ ಆಗುತ್ತದೆ
ಇನ್ನು ಇದೇ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್ವೈ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಆದರೆ ಮಹನೀಯರ ಹೆಸರಿಡುವಂತೆ ಬಿಎಸ್ವೈರಿಂದ ಮನವಿ ಕೇಳಿ ಬಂದಿದೆ. ಏರ್ಪೋರ್ಟ್ಗೆ ಮಹನೀಯರ ಹೆಸರಿಡುವಂತೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಕೂಡ ಚರ್ಚೆಯಾಗಬೇಕಿದೆ. ಹಿರಿಯರು ಮನವೊಲಿಸಿದರೆ ಬಿಎಸ್ವೈ ಹೆಸರಿಡಲಾಗುವುದು. ಏರ್ಪೋರ್ಟ್ಗೆ ಬಿಎಸ್ವೈ ಹೆಸರು ಇಡುವ ಕೆಲಸ ಆಗುತ್ತದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.
ಹಳೆ ಮೈಸೂರು ಭಾಗದಲ್ಲಿನ ನಾಯಕರನ್ನು ಕರೆ ತರುತ್ತೇವೆ
ಹಳೆ ಮೈಸೂರು ಭಾಗದಲ್ಲಿರುವ ಬೇರೆ ಪಕ್ಷಗಳ ನಾಯಕರನ್ನು ಬಿಜೆಪಿಗೆ ಕರೆತರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವರು, ಸದ್ಯ ಇದು ನಮ್ಮ ಪಕ್ಷದ ನಿರ್ಧಾರ. ಹಳೆ ಮೈಸೂರು ಭಾಗದಲ್ಲಿನ ನಾಯಕರನ್ನು ಕರೆ ತರುತ್ತೇವೆ. ಉದಾಹರಣೆಗೆ ನನ್ನ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಖಾತೆ ಓಪನ್ ಆಗಿದೆ. ನಾಲ್ಕರಿಂದ ಐದು ಎಂಎಲ್‌ಎ, ಒಂದು ಎಂಪಿ ಗೆಲ್ಲುವ ಅಭ್ಯರ್ಥಿಗಳು ಬರುತ್ತಾರೆ. ನಮ್ಮ ಜೊತೆ ಯಾರು ಸಂಪರ್ಕದಲ್ಲಿದ್ದಾರೆ ಅಂತ ಸ್ವಲ್ಪ ದಿನದಲ್ಲೇ ಗೊತ್ತಾಗುತ್ತದೆ. ಈಗ ಬಂದಿರುವ 17 ಜನರಲ್ಲಿ ಯಾರೂ ವಾಪಸ್ ಹೋಗುವ ಪ್ರಮೇಯ ಬರಲ್ಲ. ಬರುವವರ ಸಂಖ್ಯೆ ಇನ್ನೂ ಮೂರು ಪಟ್ಟು ಆಗಬಹುದು. ಆರು ತಿಂಗಳಲ್ಲಿ ಬರುತ್ತಾರೆ, ನಿಧಾನವಾಗಿ ಬರಲಿ. ಯಾರು ಬರುತ್ತಾರೆ ಅಂತಾ ಈಗಲೇ ಹೇಳಿದರೆ ಅವರ ನಾಯಕರು ಮಲಗಲು ಬಿಡುವುದಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದೇ ಫೈನಲ್ ಎಂದರು.
ಇದನ್ನೂ ಓದಿ: ಸರ್ಕಾರದ ವಿರುದ್ಧವೇ ನಾಲಗೆ ಹರಿಬಿಟ್ಟ ಪಿಎಸ್ಐ; ಗ್ರಾ.ಪಂ ಸದಸ್ಯರೆಲ್ಲರೂ ಲೋಫರ್ಗಳೆಂದ ಪಿಎಸ್ಐ ವಿಡಿಯೋ ವೈರಲ್
ಎಚ್ಡಿಕೆಗೆ ಸೆಡ್ಡು ಹೊಡೆದ ಶಿವರಾಮೇಗೌಡ: ನಾಗಮಂಗಲದಿಂದ ಸ್ಪರ್ಧೆಗೆ ಸಿದ್ಧತೆ
Published On - 12:41 pm, Tue, 26 April 22