IND vs BAN: 149 ರನ್​ಗಳಿಗೆ ಬಾಂಗ್ಲಾ ಆಲೌಟ್; ಭಾರತಕ್ಕೆ 227 ರನ್​ಗಳ ಮುನ್ನಡೆ

IND vs BAN: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡ 149 ರನ್​ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಟೀಂ ಇಂಡಿಯಾಗೆ ಮೊದಲ ಇನ್ನಿಂಗ್ಸ್​ನಲ್ಲಿ 227 ರನ್​ಗಳ ಮುನ್ನಡೆ ಸಿಕ್ಕಿದೆ.

IND vs BAN: 149 ರನ್​ಗಳಿಗೆ ಬಾಂಗ್ಲಾ ಆಲೌಟ್; ಭಾರತಕ್ಕೆ 227 ರನ್​ಗಳ ಮುನ್ನಡೆ
ಭಾರತ- ಬಾಂಗ್ಲಾದೇಶ
Follow us
|

Updated on:Sep 20, 2024 | 3:47 PM

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡ 149 ರನ್​ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಟೀಂ ಇಂಡಿಯಾಗೆ ಮೊದಲ ಇನ್ನಿಂಗ್ಸ್​ನಲ್ಲಿ 227 ರನ್​ಗಳ ಮುನ್ನಡೆ ಸಿಕ್ಕಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರೋಹಿತ್ ಪಡೆ 376 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಮೊದಲ ಸೆಷನ್​ನಲ್ಲೇ ಕೇವಲ 37 ರನ್ ಕಲೆಹಾಕಿ ಉಳಿದ 4 ವಿಕೆಟ್​ಗಳನ್ನು ಕಳೆದುಕೊಂಡಿತು.

ನಾಲ್ವರು ಒಂದಂಕಿಗೆ ಸುಸ್ತು

ಟೀಂ ಇಂಡಿಯಾವನ್ನು 376 ರನ್​ಗಳಿಗೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ನಿರೀಕ್ಷೆಯಂತೆಯೇ ಉತ್ತಮ ಆರಂಭ ಸಿಗಲಿಲ್ಲ. ತಂಡ 40 ರನ್ ಕಲೆಹಾಕುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಭಾರತದ ವೇಗಿಗಳ ಕರಾರುವಕ್ಕಾದ ದಾಳಿಗೆ ಬೆದರಿದ ಬಾಂಗ್ಲಾ ಬ್ಯಾಟರ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಅಗ್ರ ಐವರು ಬ್ಯಾಟರ್​ಗಳಲ್ಲಿ ನಾಯಕ ನಜ್ಮುಲ ಹುಸೈನ್ ಶಾಂಟೋ ಮಾತ್ರ 20 ರನ್​ಗಳ ಎರಡಂಕಿ ಮೊತ್ತ ಕಲೆಹಾಕಿದರು. ಉಳಿದ ನಾಲ್ವರು ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿದರು.

149 ರನ್​ಗಳಿಗೆ ಬಾಂಗ್ಲಾ ಆಲೌಟ್

ಈ ವೇಳೆ ಬಾಂಗ್ಲಾದೇಶ ತಂಡ 100 ರನ್​ಗಳ ಒಳಗೆ ಆಲೌಟ್ ಆಗುವಂತೆ ಕಾಣುತ್ತಿತ್ತು. ಆದರೆ 6ನೇ ವಿಕೆಟ್​ಗೆ ಜೊತೆಯಾದ ಅನುಭವಿ ಬ್ಯಾಟರ್​ಗಳಾದ ಶಕೀಬ್ ಅಲ್ ಹಸನ್ ಹಾಗೂ ಲಿಟನ್ ದಾಸ್ 50 ರನ್​ಗಳ ಜೊತೆಯಾಟವನ್ನಾಡಿದರು. ಅಂತಿಮವಾಗಿ ಈ ಜೊತೆಯಾಟ ಮುರಿದ ಬಳಿಕ ಬಾಂಗ್ಲಾದೇಶದ ಬಾಲಂಗೋಚಿಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ ಅತ್ಯಧಿಕ 32 ರನ್ ಬಾರಿಸಿದರೆ, ಲಿಟನ್ ದಾಸ್ 22 ರನ್​ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ 27 ರನ್​ಗಳ ಇನ್ನಿಂಗ್ಸ್ ಆಡಿದ ಆಲ್‌ರೌಂಡರ್ ಮೆಹದಿ ಹಸನ್ ತಂಡ 149 ರನ್ ಕಲೆಹಾಕುವಲ್ಲಿ ನೆರವಾದರು.

4 ವಿಕೆಟ್ ಪಡೆದ ಬುಮ್ರಾ

ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ 11 ಓವರ್​ಗಳಲ್ಲಿ 50 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ವಿಕೆಟ್ ಪೂರೈಸಿದ ಸಾಧನೆಯನ್ನು ಮಾಡಿದರು. ಉಳಿದಂತೆ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಬ್ಯಾಟಿಂಗ್​ನಲ್ಲಿ ಶತಕ ಬಾರಿಸಿದ್ದ ಅಶ್ವಿನ್​ಗೆ ಬೌಲಿಂಗ್​ನಲ್ಲಿ ಮಾತ್ರ ಯಾವುದೇ ವಿಕೆಟ್ ಸಿಗಲಿಲ್ಲ.

ಭಾರತದ ಇನ್ನಿಂಗ್ ಹೀಗಿತ್ತು

ಇದಕ್ಕೂ ಮುನ್ನ ಟೀಂ ಇಂಡಿಯಾ 376 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ದಿನದ ಮೊದಲ ಸೆಷನ್‌ನಲ್ಲಿ ಟೀಂ ಇಂಡಿಯಾ ಕೇವಲ 37 ರನ್‌ಗಳಿಗೆ ತನ್ನ ಉಳಿದ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಪರ ರವಿಚಂದ್ರನ್ ಅಶ್ವಿನ್ 112 ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜಾ ಐದನೇ ಟೆಸ್ಟ್ ಶತಕ ವಂಚಿತರಾಗಿ 86 ರನ್​ಗಳಿಸಿ ಔಟಾದರು. ಬಾಂಗ್ಲಾದೇಶ ಪರ ಹಸನ್ ಮಹಮೂದ್ 5 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Fri, 20 September 24