ಡ್ಯಾನ್ಸ್ ಶೂಟಿಂಗ್ಗೆ ಐಶ್ವರ್ಯಾ ರೈ ವಿಡಿಯೋ ನೋಡಿ ತಯಾರಾಗ್ತೀನಿ: ಆಲಿಯಾ ಭಟ್
ಐಶ್ವರ್ಯಾ ರೈ ಬಚ್ಚನ್ ಅವರು ಅನೇಕರಿಗೆ ಸ್ಫೂರ್ತಿ. ನಟಿ ಆಲಿಯಾ ಭಟ್ ಕೂಡ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ‘ಜಿಗ್ರಾ’ ಸಿನಿಮಾದ ಬಿಡುಗಡೆಗೆ ಕಾದಿರುವ ಆಲಿಯಾ ಭಟ್ ಅವರು ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಮತ್ತು ರೇಖಾ ಬಗ್ಗೆ ಅವರು ಮಾತಾಡಿದ್ದಾರೆ.
ನಟಿ ಆಲಿಯಾ ಭಟ್ ಅವರು ಪ್ರತಿಭಾವಂತ ಕಲಾವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಅವರು ಹಲವು ಸಿನಿಮಾಗಳ ಮೂಲಕ ಅದನ್ನು ಸಾಬೀತು ಮಾಡಿದ್ದಾರೆ. ಡ್ಯಾನ್ಸ್ ವಿಚಾರದಲ್ಲೂ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ಒಂದು ಅಚ್ಚರಿಯ ವಿಚಾರ ಏನೆಂದರೆ, ಡ್ಯಾನ್ಸ್ ಚಿತ್ರೀಕರಣ ಇದ್ದಾಗ ಆಲಿಯಾ ಭಟ್ ಅವರು ಐಶ್ವರ್ಯಾ ರೈ ಬಚ್ಚನ್ ಅವರ ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ನೋಡಿಕೊಂಡು ತಯಾರಿ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಲಿಯಾ ಭಟ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
‘ತೆರೆಮೇಲೆ ಅತ್ಯುತ್ತಮವಾಗಿ ಡ್ಯಾನ್ಸ್ ಮಾಡಿದವರಿಂದ ಸ್ಫೂರ್ತಿ ಪಡೆಯಬೇಕು ಎಂದರೆ ನನಗೆ ಮೊದಲ ನೆನಪಾಗುವುದು ಐಶ್ವರ್ಯಾ ರೈ ಬಚ್ಚನ್. ಅವರು ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಅವರು ನನಗೆ ಮಾರ್ಗದರ್ಶನ ಕೂಡ ನೀಡುತ್ತಾರೆ. ಯಾವಾಗ ಹಾಡಿನ ಚಿತ್ರೀಕರಣ ಇದ್ದರೂ ನಾನು ಯೂಟ್ಯೂಬ್ಗೆ ಹೋಗಿ ಐಶ್ವರ್ಯಾ ರೈ ಸಾಂಗ್ಸ್ ಅಂತ ಹುಡುಕಿ ವೀಕ್ಷಿಸುತ್ತೇನೆ’ ಎಂದು ಅಲಿಯಾ ಭಟ್ ಹೇಳಿದ್ದಾರೆ.
‘ಐಶ್ವರ್ಯಾ ರೈ ಅವರ ಎಕ್ಸ್ಪ್ರೆಷನ್ ನೋಡಲು ಎಲ್ಲ ಹಾಡುಗಳನ್ನು ವೀಕ್ಷಿಸುತ್ತೇನೆ. ಅವರು ಸುಂದರವಾಗಿ ಕಾಣಿಸುತ್ತಾರೆ’ ಎಂದಿದ್ದಾರೆ ಆಲಿಯಾ ಭಟ್. ಅಲ್ಲದೇ, ಶಾರುಖ್ ಖಾನ್ ಮತ್ತು ರೇಖಾ ಅವರನ್ನು ಆಲಿಯಾ ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ‘ಭಾರತೀಯ ಸಿನಿಮಾದಲ್ಲಿ ಸೌಂದರ್ಯವನ್ನು ಪುನರ್ ವ್ಯಾಖ್ಯಾನಿಸಿದವರು ರೇಖಾ’ ಎಂದು ಆಲಿಯಾ ಭಟ್ ಹೇಳಿದ್ದಾರೆ.
ಇದನ್ನೂ ಓದಿ: ರಣಬೀರ್-ಆಲಿಯಾ ಭಟ್ ಮಗಳು ರಹಾ ಕಪೂರ್ ಕ್ಯೂಟ್ ವಿಡಿಯೋ
ಆಲಿಯಾ ಭಟ್ ಅವರು ಸಿನಿಮಾ ಮತ್ತು ವೈಯಕ್ತಿಕ ಜೀವನವನ್ನು ಸರಿಯಾಗಿ ತೂಗಿಸಿಕೊಂಡು ಹೋಗುತ್ತಿದ್ದಾರೆ. ಸಖತ್ ಬೇಡಿಕೆ ಇರುವಾಗಲೇ ಅವರು ಮದುವೆ ಆಗುವ ನಿರ್ಧಾರ ತೆಗೆದುಕೊಂಡರು. ರಣಬೀರ್ ಕಪೂರ್ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಲ್ಲದೇ, ಮಗುವನ್ನೂ ಪಡೆದರು. ಹಾಗಂತ ಸಿನಿಮಾದಿಂದ ದೂರ ಉಳಿದುಕೊಂಡಿಲ್ಲ. ಆ್ಯಕ್ಷನ್ ಕಥಾಹಂದರ ಇರುವ ‘ಜಿಗ್ರಾ’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ. ಅಕ್ಟೋಬರ್ 11ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.